×
Ad

"ಉಕ್ರೇನ್‍ನಲ್ಲಿ ಸಿಲುಕಿದ್ದೇನೆ" ಎಂದು ವೀಡಿಯೋ ಮಾಡಿ ಸಂಕಷ್ಟಕ್ಕೀಡಾದ ಪಂಚಾಯತ್ ನ ಪ್ರಧಾನ ಅಧ್ಯಕ್ಷೆ

Update: 2022-03-04 14:49 IST
Photo: Indianexpress

ಲಕ್ನೋ: ಉತ್ತರ ಪ್ರದೇಶದ ಹರ್ದೋಯಿ ಮೂಲದ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ, ತಾನು ಮತ್ತು ಇತರ ಭಾರತೀಯ ವಿದ್ಯಾರ್ಥಿಗಳು ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವುದಾಗಿ ಹಾಗೂ ಸಹಾಯ ಮಾಡುವಂತೆ ಮನವಿ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ ವೀಡಿಯೋ ವೈರಲ್ ಆಗುವ ಮೂಲಕ ಆಕೆಯನ್ನು ಇದೀಗ ಇಕ್ಕಟ್ಟಿಗೆ ಸಿಲುಕಿಸಿದೆ.

ಉಕ್ರೇನ್‍ನ ಇವಾನೊ ಫ್ರಾಂಕ್‍ವಿಸ್ಕ್ ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ವೈಶಾಲಿ ಯಾದವ್ ಕಳೆದ ವರ್ಷ ತೇರಿ ಪುರ್ಸೌಲಿ ಗ್ರಾಮ ಪಂಚಾಯತಿನ ಪ್ರಧಾನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದರೆ ಆಕೆಯ ಐದು ವರ್ಷ ಅಧಿಕಾರಾವಧಿಯ ಮೊದಲ ತಿಂಗಳಲ್ಲಿಯೇ ಆಕೆ ಸೆಪ್ಟೆಂಬರ್ 23ರಂದು ಉಕ್ರೇನ್‍ಗೆ ವಿದ್ಯಾಭ್ಯಾಸಕ್ಕೆಂದು ತೆರಳಿದ್ದರು ಎಂದು ಅಧಿಕಾರಿಗಳು ಹೇಳುತ್ತಾರೆ.

ಆಕೆ ಉಕ್ರೇನ್‍ನಿಂದ ಭಾರತಕ್ಕೆ ಮರಳಲು ಸಹಾಯ ಕೋರಿದಾಗ ಆಕೆ 'ಜನಪ್ರತಿನಿಧಿಯಾಗಿದ್ದುಕೊಂಡು ವಿದೇಶದಲ್ಲಿ ನೆಲೆಸಿರುವ' ಔಚಿತ್ಯವನ್ನು ಹಲವರು ಪ್ರಶ್ನಿಸಿದ್ದಾರೆ.  ಹರ್ದೋಯಿ ಆಡಳಿತ ಆಕೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಹಾಗೂ ಆಕೆ ಅಧ್ಯಕ್ಷೆಯಾಗಿ ಆಯ್ಕೆಯಾದಂದಿನಿಂದ ಇಲ್ಲಿಯ ತನಕದ  ಗ್ರಾಮ ಪಂಚಾಯತ್ ನಿರ್ವಹಣೆಯನ್ನು ಪರಿಶೀಲಿಸುತ್ತಿದೆ.

ವೈಶಾಲಿ ಅವರು ಫೆಬ್ರವರಿ 22ರಂದು ತಮ್ಮ ತಂದೆಯನ್ನು ಸಂಪರ್ಕಿಸಿದ ನಂತರ ಆಕೆಗೆ ಮರಳಲು ಫೆಬ್ರವರಿ 24ರಂದು ವಿಮಾನ ಟಿಕೆಟ್ ಕಾಯ್ದಿರಿಸಲಾಗಿತ್ತಾದರೂ ಉಕ್ರೇನ್ ವಿಮಾನನಿಲ್ದಾಣದಲ್ಲಿ ಸ್ಫೋಟದಿಂದ ಆಕೆಗೆ ಮರಳಲು ಸಾಧ್ಯವಾಗಿರಲಿಲ್ಲ.

ಆಕೆ ಕಳೆದ ವಾರ ಟ್ವಿಟ್ಟರ್‍ನಲ್ಲಿ ವೀಡಿಯೋ ಪೋಸ್ಟ್ ಮಾಡಿ ತಾವು ಹಾಗೂ ಇತರ ಸ್ನೇಹಿತರು ತಮ್ಮ ಫ್ಲ್ಯಾಟ್‍ಗಳಲ್ಲಿಯೇ ಬಂಧಿಯಾಗಿರುವಂತಾಗಿದೆ ಸಹಾಯ ಮಾಡಿ ಎಂದು ಕೋರಿದ್ದರು.

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಒಂದು ಸಂದೇಶವು ಆಕೆ ಉಕ್ರೇನ್‍ನಲ್ಲಿಲ್ಲ, ಸುಳ್ಳು ಸಂದೇಶ ನೀಡಿ ವೀಡಿಯೋ ಮಾಡಿದ್ದಕ್ಕಾಗಿ ಉಕ್ರೇನ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆಂದು ಹೇಳಲಾಗಿತ್ತು. ಆಕೆಯ ಬಂಧನವನ್ನು ಹರ್ದೋಯಿ ಪೊಲೀಸರು ನಂತರ ನಿರಾಕರಿಸಿದ್ದರು.

ನಿಯಮ ಪ್ರಕಾರ ಗ್ರಾಮ ಪಂಚಾಯತುಗಳು ಪ್ರತಿ ತಿಂಗಳು ಸಭೆ ಸೇರಬೇಕಿದೆ. ಎರಡು ಸಭೆಗಳ ನಡುವಿನ ಅಂತರ ಎರಡು ತಿಂಗಳಿಗಿಂತ ಹೆಚ್ಚಾಗುವ ಹಾಗಿಲ್ಲ ಹಾಗೂ ಸದಸ್ಯರೊಬ್ಬರು ಮೂರು ಸತತ ಸಭೆಗಳಿಗೆ ಗೈರಾಗುವಂತಿಲ್ಲ.

ಆದರೆ ಅಕೆ ತಮ್ಮ ಗ್ರಾಮದ ಜನರೊಂದಿಗೆ ವಾಟ್ಸ್ಯಾಪ್ ಮತ್ತು ಇಂಟರ್ನೆಟ್ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು ಎಂದು ಆಕೆಯ ತಂದೆ ಹೇಳುತ್ತಾರೆ.

ಆದರೆ ಆಡಳಿತ ಆಕೆಯ ಗೈರು ಕುರಿತಂತೆ ತನಿಖೆಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News