ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಕಳವಳವಿದೆ, ಹಿಂದಿನ ಯುದ್ಧ ಸನ್ನಿವೇಶಗಳಿಂದ ನಾವು ಕಲಿತಿಲ್ಲ: ಸುಪ್ರೀಂ

Update: 2022-03-04 11:44 GMT

ಹೊಸದಿಲ್ಲಿ: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ಭಾರತೀಯ ನಾಗರಿಕರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ "ನಾವು ಕೇಂದ್ರದ ಬಗ್ಗೆ ಒಂದು ಮಾತನ್ನೂ ಆಡುವುದಿಲ್ಲ, ಅವರ ಕೆಲಸ ಶ್ಲಾಘಿಸುತ್ತೇವೆ, ಆದರೆ ವಿದ್ಯಾರ್ಥಿಗಳ ಬಗ್ಗೆ ಬಹಳ ಕಳವಳವಿದೆ.  ಹಿಂದಿನ ಯುದ್ಧ ಸನ್ನಿವೇಶಗಳಿಂದ ನಾವು ಇನ್ನೂ ಕಲಿತಿಲ್ಲ ಎಂಬುದು ದುರಾದೃಷ್ಟಕರ'' ಎಂದು  ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರನ್ನುದ್ದೇಶಿಸಿ ಹೇಳಿದೆ.

ಉಕ್ರೇನ್ ಗಡಿಯಲ್ಲಿ ಬಾಕಿಯಾಗಿದ್ದ ಬೆಂಗಳೂರು ನಿವಾಸಿ ಫಾತಿಮಾ ಅಹನಾ ಮೊಹಮ್ಮದ್ ಮತ್ತಿತರ 250 ವಿದ್ಯಾರ್ಥಿಗಳನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರಬೇಕೆಂದು ಸಲ್ಲಿಸಲಾಗಿದ್ದ ಒಂದು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್,  ಅವರೆಲ್ಲರೂ ರೊಮಾನಿಯಾಗೆ ತೆರಳಿದ್ದಾರೆ ಹಾಗೂ ಅವರನ್ನು ಭಾರತಕ್ಕೆ ಕರೆತರಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ತಿಳಿಸಿದರು.

ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಗುರುವಾರ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ಅವರನ್ನು ಕೋರಿತ್ತು. ಇಲ್ಲಿಯ ತನಕ 17,000 ಭಾರತೀಯರನ್ನು ಉಕ್ರೇನ್‍ನಿಂದ ವಾಪಸ್ ಕರೆತರಲಾಗಿದೆ ಎಂದು ವೇಣುಗೋಪಾಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಹೆತ್ತವರಿಗೆ ಸಹಾಯವಾಣಿ ಪ್ರಾರಂಭಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದಾಗ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ಸುಪ್ರೀಂ ಕೋರ್ಟಿನಷ್ಟೇ ಕಾಳಜಿ ಸರಕಾರಕ್ಕಿದೆ ಎಂದರು.

ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳ ರಕ್ಷಣೆ ಕೋರಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ಚೆನ್ನಾಗಿ ಪ್ರಸ್ತುತಪಡಿಸಲಾಗಿಲ್ಲ ಇದು ಪರಿಸ್ಥಿತಿಯ ಲಾಭ ಪಡೆದು ಪ್ರಚಾರ ಪಡೆಯುವ ಯತ್ನ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News