ಲಾಕ್‌ಡೌನ್ ವೇಳೆ ಸ್ಕೂಟರ್‌ನಲ್ಲಿ 1,400 ಕಿಮೀ ಸಂಚರಿಸಿ ಮಗನನ್ನು ಕರೆತಂದಿದ್ದ ತಾಯಿ: ಇದೀಗ ಆತ ಉಕ್ರೇನ್‌ನಲ್ಲಿ ಬಾಕಿ!

Update: 2022-03-04 16:46 GMT
Photo/twitter

ನೆಲ್ಲೂರ್:‌ ಕರೋನಾ ಪ್ರೇರಿತ ಲಾಕ್‌ಡೌನ್‌ ಸಂಧರ್ಭದಲ್ಲಿ ಮಗನನ್ನು ಮನೆಗೆ ಕರೆ ತರಲು 1400 ಕಿಮೀ ಸ್ಕೂಟರಿನಲ್ಲಿ ಸಂಚರಿಸಿ ಸುದ್ದಿಯಾಗಿದ್ದ ತಾಯಿ ರಝಿಯಾ ಬೇಗಂ, ಇದೀಗ ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ತನ್ನ 19 ವರ್ಷದ ಮಗ ಸಿಲುಕಿಕೊಂಡ ಆತಂಕದಲ್ಲಿದ್ದಾರೆ.

ತೆಲಂಗಾಣದ ನಿಝಾಮಾಬಾದ್‌ ಜಿಲ್ಲೆಯಲ್ಲಿ ಶಾಲಾ ಶಿಕ್ಷಕಿಯಾಗಿರುವ ರಝಿಯಾ ಬೇಗಂ ಅವರ ಪುತ್ರ ನಿಝಾಮುದ್ದೀನ್‌ ಅಮಾನ್, ಉಕ್ರೇನಿನ ಸುಮಿ ಪ್ರಾಂತ್ಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು, ಎಂಬಿಬಿಎಸ್‌ ನ ಮೊದಲನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ.

ಸುಮಿ ಪ್ರಾಂತ್ಯವು ರಷ್ಯಾ ದೇಶದ ಗಡಿಗೆ ಅತ್ಯಂತ ಸಮೀಪದಲ್ಲಿದೆ. ರಷ್ಯಾ ತನ್ನ ಮಿಲಿಟರಿಯೊಂದಿಗೆ ಉಕ್ರೇನ್‌ಗೆ ದಾಳಿ ಮಾಡಿದಾಗಿನಿಂದ ನಿಝಾಮುದ್ದೀನ್‌ ಸೇರಿ ಸುಮಿ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿಟಿಯ (Sumy State Medical University) ಹಲವು ಭಾರತೀಯ ವಿದ್ಯಾರ್ಥಿಗಳು ಯುದ್ಧಗ್ರಸ್ತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.

ಸಂಘರ್ಷಮಯ ಉಕ್ರೇನ್‌ನಲ್ಲಿ ತನ್ನ ಮಗ ಹಾಗೂ ಇತರೆ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಕೆಸಿ ರಾವ್‌, ರಾಜ್ಯ ಗೃಹ ಸಚಿವ ಮಹಮ್ಮದ್‌ ಮಹ್ಮೂದ್‌ ಅಲಿ ಅವರಲ್ಲಿ ರಝಿಯಾ ಬೇಗಂ ಮನವಿ ಮಾಡಿಕೊಂಡಿದ್ದಾರೆ.

ನಿಝಾಮುದ್ದೀನ್‌ ಸದ್ಯ ಬಂಕರ್‌ ಒಂದರಲ್ಲಿ ರಕ್ಷಣೆ ಪಡೆದುಕೊಂಡಿದ್ದು, ಫೋನ್‌ ಮೂಲಕ ತನ್ನನ್ನು ಸಂಪರ್ಕಿಸುತ್ತಿದ್ದಾನೆ ಎಂದು ತಾಯಿ ಬೇಗಂ PTI ಯೊಂದಿಗೆ ತಿಳಿಸಿದ್ದಾರೆ.

 "ಆತ ಚೆನ್ನಾಗಿದ್ದಾನೆ, ಮತ್ತು ನಾನು ಅವನ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ನನಗೆ ಭರವಸೆ ನೀಡಲು ಆತ ಕರೆ ಮಾಡಿದ್ದ" ಎಂದು ರಝಿಯಾ ತಿಳಿಸಿದ್ದಾರೆ. ನಿಝಾಮ್‌ ಹಾಗೂ ಸಂಗಡಿಗರು ತಂಗಿರುವ ಸ್ಥಳದಲ್ಲಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ, ಕೋವಿಡ್-19 ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್‌ಡೌನ್  ಹೇರಿದ ಬಳಿಕ, ನೆರೆಯ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಬಾಕಿಯಾಗಿದ್ದ ತನ್ನ ಮಗನನ್ನು ಮರಳಿ ಕರೆತರಲು ರಜಿಯಾ ಬೇಗಂ 1400 ಕಿಮೀ ದೂರ್ದ ದೀರ್ಘ ಪ್ರವಾಸವನ್ನು ತಮ್ಮ ಸ್ಕೂಟರಿನಲ್ಲೇ ಮಾಡಿ ಸುದ್ದಿಯಾಗಿದ್ದರು.  ಸ್ಥಳೀಯ ಪೋಲೀಸರ ಅನುಮತಿಯೊಂದಿಗೆ, ನೆಲ್ಲೂರಿಗೆ ಒಂಟಿಯಾಗಿ ಸವಾರಿ ಮಾಡಿದ ಬೇಗಂ ತನ್ನ ಕಿರಿಯ ಮಗನೊಂದಿಗೆ ಹಿಂದಿರುಗಿದ್ದರು. ತನ್ನ ಗಂಡ ತೀರಿಕೊಂಡ ಬಳಿಕ ಇಂಜಿನಿಯರಿಂಗ್‌ ಕೋರ್ಸ್‌ ಮುಗಿಸಿರುವ ಇನ್ನೋರ್ವ ಮಗ ಹಾಗೂ ನಿಝಾಮುದ್ದೀನ್‌ ರನ್ನು ಒಂಟಿಯಾಗಿಯೇ ರಝಿಯಾ ಸಾಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News