×
Ad

ಜನಾಂದೋಲನಗಳ ಮಹಾಮೈತ್ರಿ ಇಂದಿನ ಅಗತ್ಯ

Update: 2022-03-05 00:05 IST
Editor : ದೇ. ಮ.

ಭಾಗ-2

ಈಗ, ಮೊದಲನೆಯ ಹೆಜ್ಜೆಯಾಗಿ ನಾವೆಲ್ಲರೂ ಸೇರಿ ಕಿತ್ತುತಿನ್ನುತ್ತಿರುವ ಸಮಸ್ಯೆಯೊಂದನ್ನು ಕೈಗೆತ್ತಿಕೊಳ್ಳೋಣ. ಅದೇ ಕರ್ನಾಟಕ ಸರಕಾರ ಜಾರಿಗೆ ತಂದಿರುವ ಮೂರು ಕರಾಳ ಕಾಯ್ದೆಗಳು. ಆ ಕಾಯ್ದೆಗಳು ಏನು? ಅದರಲ್ಲಿ ಏನಿದೆ? ಅದರಿಂದ ಏನೇನಾಗುತ್ತದೆ? ಒಂದೊಂದಾಗಿ ನೋಡೋಣ.

ಮೊದಲನೆಯದಾಗಿ

ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020.
ಈ ಹಿಂದೆ ಇದ್ದ ಭೂ ಸುಧಾರಣಾ ಕಾಯ್ದೆಯಲ್ಲಿ ಕೃಷಿಕರು ಮಾತ್ರ ಕೃಷಿ ಭೂಮಿ ಕೊಂಡುಕೊಳ್ಳಬಹುದು ಎಂದಿತ್ತು. ಈಗ ಈ ಹೊಸ 2020ರ ಕಾಯ್ದೆ ಪ್ರಕಾರ ಕೃಷಿ ಭೂಮಿಯನ್ನು ಯಾರೇ ಕೊಂಡುಕೊಳ್ಳಬಹುದು. ಇದರೊಡನೆ ಕೃಷಿ ಭೂಮಿಯನ್ನು ಕೊಳ್ಳಲು ಇದ್ದ ಎಲ್ಲಾ ರೈತಪರ ನಿಬಂಧನೆಗಳನ್ನು 2020ರ ಹೊಸ ಕಾಯ್ದೆ ಧ್ವಂಸ ಮಾಡಿದೆ. ಇದರಿಂದ ಏನಾಗುತ್ತದೆ? ಕಪ್ಪುಹಣದ ಪಿಶಾಚಿಯು ಕೃಷಿ ಭೂಮಿಯನ್ನು ಕಬಳಿಸಲು ತೊಡಗುತ್ತದೆ. ಕೃಷಿ ಭೂಮಿಯಿಂದಲೇ ಕೃಷಿ ಕಣ್ಮರೆಯಾಗುತ್ತದೆ. ದಿನ ಕಳೆದಂತೆ ‘ಉಳ್ಳವರಿಗೆ ಎಲ್ಲಾ ಭೂಮಿ’ ಎಂಬಂತಾಗುತ್ತದೆ. ಈ 2020ರ ಕಾಯ್ದೆಯಿಂದ ಭೂಗಳ್ಳ ಮಾಫಿಯಾ ಹೆಚ್ಚುತ್ತದೆ. ರಿಯಲ್ ಎಸ್ಟೇಟ್ ದಂಧೆ ಮಿತಿ ಮೀರುತ್ತದೆ. ಇತ್ತ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ತಂತಮ್ಮ ಅಲ್ಪಸ್ವಲ್ಪಭೂಮಿಯನ್ನೂ ಮಾರಿಕೊಂಡು ಕೃಷಿಯಿಂದಲೇ ಎತ್ತಂಗಡಿಯಾಗುತ್ತಾರೆ. ಹೀಗೆ ನಿರ್ಗತಿಕರಾದ ರೈತರು ಅವರ ಭೂಮಿಯಲ್ಲಿ ಕೂಲಿಕಾರರಾಗಿ ಅಥವಾ ನಗರ ಪ್ರದೇಶಗಳಿಗೆ ಗುಳೆ ಹೋಗಿ ಕೊಳಚೆ ಪ್ರದೇಶದಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಮುತ್ತ ಈ ರೀತಿ ಆಗುತ್ತಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಇದೇನು ಭೂ ಸುಧಾರಣಾ ಕಾಯ್ದೆಯೇ? ಅಥವಾ?
ಇನ್ನು ಮುಂದೆ ನಾವು ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಈಗಲೇ ಕೇಳಬೇಕು, ಎಲ್ಲರೂ ಒಟ್ಟಾಗಿ. ‘ಇದು ಭೂ ಸುಧಾರಣಾ ಕಾನೂನು ಅಲ್ಲ; ಭೂವಿಧ್ವಂಸಕ ಕಾನೂನು, ಇದನ್ನು ಕರ್ನಾಟಕ ಸರಕಾರ ಕೂಡಲೇ ಹಿಂದೆಗೆದುಕೊಳ್ಳಬೇಕು’

ಎರಡನೆಯದಾಗಿ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ-2020

ಈ ಕಾಯ್ದೆ ಏನು ಹೇಳುತ್ತದೆ? ಕೃಷಿ ಉತ್ಪನ್ನಗಳನ್ನು ಯಾರು ಬೇಕಾದರೂ ಕೊಳ್ಳಬಹುದು. ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದಿದೆ. ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದೆ. ಈ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಇತ್ತು. ಈ ಮಾರುಕಟ್ಟೆ ಮುಖಾಂತರ ಕೃಷಿ ಉತ್ಪನ್ನಗಳ ಮಾರಾಟ ವ್ಯವಹಾರ ನಡೆಯುತ್ತಿತ್ತು. ಎಪಿಎಂಸಿಗೆ ಆಯ್ಕೆಯಾದ ಆಡಳಿತ ಮಂಡಳಿಯೂ ಇದ್ದು ಅವು ನಿರ್ವಹಣೆ ಮಾಡುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೂ ರೈತಾಪಿಗೆ ಆಸರೆಯಾಗಿತ್ತು. ಬೆಳೆಗೆ ಒಂದಿಷ್ಟು ಗ್ಯಾರಂಟಿ ಬೆಲೆ ಸಿಗುತ್ತಿತ್ತು. ನಿಯಂತ್ರಣ ಇತ್ತು, ಅನ್ಯಾಯ ಪ್ರಶ್ನಿಸುವ ಹಕ್ಕಿತ್ತು. ಆದರೆ ಯಾವಾಗ 2020ರ ಈ ಹೊಸ ಕಾಯ್ದೆ ಬಂತೋ ಮುಕ್ತ ಮಾರುಕಟ್ಟೆ ಛಾಲೂ ಆಯಿತೋ ಆವಾಗಲಿಂದ ಕೃಷಿ ಉತ್ಪನ್ನಗಳ ಮಾರಾಟ ವ್ಯವಹಾರ ನಿಯಂತ್ರಣ ಕಳೆದುಕೊಂಡಿತು. ಜೊತೆಗೆ ಬೆಳೆ ಬೆಳೆದವರು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡರು. ಈಗ ಈ ಹೊಸ 2020ರ ಕಾಯ್ದೆ ದೆಸೆಯಿಂದಾಗಿ ಲಾಭದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಗಳು ನಷ್ಟ ಅನುಭವಿಸುತ್ತಿವೆ. ಕೆಲವು ಮುಚ್ಚುವ ಸ್ಥಿತಿಗೂ ಬಂದಿವೆ. ಈ ಹೊಸ ಕಾಯ್ದೆಯಿಂದಾಗಿ ಹಣ ಉಳ್ಳವರ ಜಾಲವು ರೈತರ ಕೃಷಿ ಮಾರುಕಟ್ಟೆಗೆ ದಾಳಿ ಇಡುತ್ತಿದೆ. ಈ ದಾಳಿಗೆ ಸಿಲುಕಿ ರೈತರು ಕಣ್ಣು ಬಾಯಿ ಬಿಡುವಂತಾಗುತ್ತಿದೆ.
2020ರ ಹೊಸ ಕಾಯ್ದೆಯು ಹೀಗಿರುವಾಗ ಇದು ನಿಯಂತ್ರಣವೋ ಅಥವಾ ಇದ್ದ ನಿಯಂತ್ರಣದ ಕಟ್ಟುಪಾಡುಗಳನ್ನು ಕತ್ತರಿಸಿ ಹಾಕಿ ಲೂಟಿಗೆ ದಿಡ್ಡಿ ಬಾಗಿಲು ತೆರೆದ ಕಾಯ್ದೆಯೋ? ನಾವು ಯೋಚಿಸಬೇಕು ಈಗ ಎಲ್ಲರೂ ಕೂಡಿ ಹೇಳಬೇಕು- ಈ ಲೂಟಿ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು.

ಮೂರನೆಯದಾಗಿ
ಕರ್ನಾಟಕ ಜಾನುವಾರು ಹತ್ಯಾ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆ-2020

ಇದೊಂದು ಇಬ್ಬಂದಿ ನೀತಿ ಕಾಯ್ದೆ. ಭಾರತವು ಮಹಿಷ (ಎಮ್ಮೆ, ಕೋಣ) ಮತ್ತು ಗೋವು (ಹಸು, ಎತ್ತು) ಎರಡನ್ನೂ ಪ್ರತ್ಯೇಕವಾಗಿ ನೋಡಿಲ್ಲ. ಮಹಿಷವು ಭಾರತದ ಉದ್ದಗಲಕ್ಕೂ ಬಹುಸಂಖ್ಯಾತ ಸಮುದಾಯಗಳ ಕುಲಚಿಹ್ನೆಯಾಗಿ ಗೌರವಿಸಲ್ಪಡುತ್ತಿದೆ. ಗೋವು ಕೂಡ ಗೌರವಿಸಲ್ಪಡುತ್ತಿದೆ. ಎರಡರ ಮಾಂಸವನ್ನೂ ಬೀಫ್ ಎಂದೇ ಕರೆಯುತ್ತಾರೆ. ಆದರೆ, ವಿಪರ್ಯಾಸ ನೋಡಿ ಭಾರತ ಸರಕಾರವು ಮಹಿಷ (ಎಮ್ಮೆ, ಕೋಣ) ಮಾಂಸವನ್ನು ರಫ್ತು ಮಾಡಲು ಪರವಾನಿಗೆ ನೀಡಿದೆ. ಆದರೆ, ಗೋವು (ಹಸು, ಕರು, ಎತ್ತು, ಗೂಳಿ)ಗಳ ಮಾಂಸವನ್ನು ರಫ್ತು ಮಾಡಲು ನಿಷೇಧಿಸಿದೆ. ಈ ನಿಷೇಧ ಕಾಯ್ದೆಯಿಂದಾಗಿ ಉದಾಹರಣೆಗೆ ಉತ್ತರಪ್ರದೇಶ ಒಂದರಿಂದಲೇ ದಿನಕ್ಕೆ ನೂರಾರು ಟ್ರಕ್‌ಗಳಲ್ಲಿ ಗೋವುಗಳು ಮೊದಲು ಬಿಹಾರಕ್ಕೆ, ಆನಂತರ ಪಶ್ಚಿಮ ಬಂಗಾಳಕ್ಕೆ ಕಳ್ಳ ಸಾಗಣೆಯಾಗಿ ಇಲ್ಲೆಲ್ಲಾ ಕಳಪೆ ಮಟ್ಟದ ಗೋವುಗಳು ಕಸಾಯಿಖಾನೆಗೆ ವಿಲೇವಾರಿಯಾಗಿ ಉಳಿದ ಉತ್ತಮಮಟ್ಟದ ಗೋವುಗಳು ಗಡಿಯನ್ನೂ ದಾಟಿ ಬಾಂಗ್ಲಾದೇಶ ಕಸಾಯಿಖಾನೆಗಳಿಗೆ ಕಳ್ಳಸಾಗಣೆಯಾಗುತ್ತಿದೆ. ಬಾಂಗ್ಲಾದೇಶದಿಂದ ಗೋಮಾಂಸವು ವಿದೇಶಗಳಿಗೆ ರಫ್ತು ಆಗುತ್ತದೆ. ಈ ರಫ್ತು ಕಂಪೆನಿಗಳಲ್ಲಿ ಭಾರತ ಮೂಲದ ಬಂಡವಾಳಷಾಹಿಗಳೂ ಇದ್ದಾರೆ. ಅಂದರೆ ಇದು ಭಾರತ ಮೂಲದ ಪರೋಕ್ಷ ರಫ್ತು ವ್ಯವಹಾರವಲ್ಲದೆ ಮತ್ತೇನು?

ಹೀಗೆ ಕಸಾಯಿಖಾನೆಗಳಿಗೆ ಗೋ ಸಾಗಣೆಯಲ್ಲಿನ ಈ ಪಯಣದಲ್ಲಿ ಪೊಲೀಸರು, ರಾಜಕಾರಣಿಗಳು, ಭಾರತದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಎಲ್ಲರೂ ಶಾಮೀಲಾಗಿದ್ದಾರೆ. ರೋಚಕವೆಂದರೆ, ಗೋವು ಕಳಸಾಗಣೆಯ ಟ್ರಕ್ ಮೇಲೆ ಕೇಸರಿ ಭಗವಾಧ್ವಜವನ್ನು ಅಲ್ಲಲ್ಲಿ ಕಾಣಬಹುದು! ಬ್ರಾಹ್ಮಣರಾದಿಯಾಗಿ ಎಲ್ಲಾ ಜಾತಿಗಳ ಬಹುಸಂಖ್ಯಾತರು ಗೋವು ಕಳ್ಳಸಾಗಣೆಯಲ್ಲಿ ಭಾಗಿಗಳಾಗಿದ್ದಾರೆ. ಆದರೆ ಗೋವು ಕಳ್ಳಸಾಗಣೆಯಲ್ಲಿ ಶೇ. 10ರಷ್ಟು ಕೂಡಾ ಮುಸ್ಲಿಮರಿಲ್ಲ ಎಂದು ವರದಿಗಳು ಹೇಳುತ್ತದೆ. ಇನ್ನೂ ರೋಚಕವೆಂದರೆ ಉತ್ತರ ಪ್ರದೇಶದ ಕಳ್ಳಸಾಗಣೆಯಲ್ಲಿ ಬಿಜೆಪಿ ನಾಯಕರು, ಬಜರಂಗದಳದ ಕಾರ್ಯಕರ್ತರು ಅಲ್ಲಲ್ಲಿ ಯೋಗಿ ಆದಿತ್ಯನಾಥ್ ಸ್ಥಾಪಿಸಿದ ಹಿಂದೂ ಸೇನೆ ಕಾರ್ಯಕರ್ತರೂ ಇದ್ದಾರೆ. ‘‘ಗೋ ರಕ್ಷಣಾ ಸಮಿತಿಯೇ ಗೋವುಗಳ ಕಳ್ಳಸಾಗಣೆಯ ಪ್ರಮುಖ ಪಾತ್ರ ವಹಿಸಿದೆ’’ ಎಂದು ವರದಿಗಳಿವೆ. ಈ ವರದಿಗಳು ‘ಕಾರವಾನ್’ ಪತ್ರಿಕೆಯ ಪ್ರತ್ಯಕ್ಷ ತನಿಖಾ ವರದಿಯಲ್ಲಿ ವಿಸ್ತೃತವಾಗಿ ಲಭಿಸುತ್ತದೆ. ಹೀಗಿದೆ ಗೋರಕ್ಷಣೆಯ ವ್ಯಾಪಾರ! ವ್ಯವಹಾರ!! ದೇಶಪ್ರೇಮ!!!

ಹಾಗೆಯೇ ಇದೇ ಕಾಯ್ದೆಯಲ್ಲಿ ರೈತರು, ಹಾಲು ಉತ್ಪಾದಕರು, ಗೋಪಾಲಕರು ತಮ್ಮ ಕೃಷಿಗೆ ಹಾಗೂ ಉಪಯೋಗಕ್ಕೆ ಬಾರದ ವಯಸ್ಸಾದ ಜಾನುವಾರುಗಳನ್ನು ಮಾರಾಟ ಮಾಡಬಾರದಂತೆ, ಅವರೇ ಸಾಕಬೇಕಂತೆ, ಇದೂ ಈ ಕಾಯ್ದೆಯಲ್ಲಿದೆ! ಗ್ರಾಮೀಣ ಜನ ಸಮುದಾಯಕ್ಕೆ ಇಂದಿನ ವ್ಯವಸ್ಥೆಯಲ್ಲಿ ಅವರನ್ನು ಅವರೇ ಸಾಕಿಕೊಳ್ಳಲು ಕಷ್ಟವಾಗಿದೆ. ಇಂತಹದರಲ್ಲಿ ಈ ನಿತ್ರಾಣಗೊಂಡ ಜನರ ಬೆನ್ನಿನ ಮೇಲೆ ಈ ಕಾಯ್ದೆ ಭಾರವೂ ಈಗ ಅಗತುಕೊಂಡಿದೆ! ರೈತರು, ಹಾಲು ಉತ್ಪಾದಕರು ಸಾಕಲಾಗದ ಜಾನುವಾರುಗಳನ್ನು ಸರಕಾರವೇ ಕೊಂಡುಕೊಂಡು ತಾನೇ ಸಾಕುವಂತಾಗಲಿ, ಬೇಡ ಎಂದವರಾರು? ಇದನ್ನು ನಾವು ಮಾತಾಡಬೇಕಿದೆ. ಆಹಾರದ ಹಕ್ಕನ್ನು ಕಿತ್ತುಕೊಂಡು ಸಮಾಜದಲ್ಲಿ ದ್ವೇಷ ಪಸರಿಸಿ ಕೊಲೆ, ಹೊಡೆದಾಟ, ಬಡಿದಾಟ ಹೆಚ್ಚಲು ಈ ಕಾಯ್ದೆ ನೇರ ಹೊಣೆಗಾರ ಆಗಿದೆ. ಇದನ್ನೂ ಮಾತಾಡಬೇಕಾಗಿದೆ ಹಾಗೂ ಕಷ್ಟಪಟ್ಟು ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದ ಜನರ ಮೇಲೂ ಪ್ರಹಾರ ಮಾಡಿದಂತಾಗಿದೆ. ಇದನ್ನೂ ಮಾತಾಡಬೇಕಾಗಿದೆ. ಇದಕ್ಕೆಲ್ಲಾ ಸರಕಾರದ ನೀತಿ ನಿಲುವುಗಳೇ ಕಾರಣವಾಗಿದೆ. ಇದು ಸರಕಾರದ ಒಡೆದಾಳುವ ನೀತಿ ಮತ್ತು ಇದು ಅವಿವೇಕದ ನೀತಿ, ಇದನ್ನು ಪ್ರತಿಭಟಿಸಬೇಕು.

ಈಗ ನಮ್ಮ ಮುಂದಿದೆ
ಈಗ ನಮ್ಮ ಮುಂದೆ ಮೇಲ್ಕಂಡ ಮೂರೂ ಕರಾಳ ವಿಧ್ವಂಸಕ ಕಾಯ್ದೆಗಳು ಇವೆ. ಈ ಕಾಯ್ದೆಗಳು ಅಸಂಖ್ಯ ಅನಾಹುತಗಳನ್ನು ಈಗಾಗಲೇ ಮಾಡಿಬಿಟ್ಟಿದೆ. ಕೃಷಿ ಭೂಮಿಯು ಭೂ ಮಾಫಿಯಾ ದವಡೆಗೆ ಸಿಕ್ಕಿ ಛಿದ್ರವಾಗುತ್ತಿದೆ. ಜನರ ಬದುಕೂ ಛಿದ್ರವಾಗುತ್ತಿದೆ. ರಾಜ್ಯದಲ್ಲಿ ಕೃಷಿ ಕ್ಷೇತ್ರವು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೋಟಿಗಟ್ಟಲೆ ಜನರಿಗೆ ಉದ್ಯೋಗ ನೀಡುತ್ತಲಿತ್ತು. ಈ 2020ರ ಕಾಯ್ದೆಯಿಂದಾಗಿ ನಿರುದ್ಯೋಗ ಮತ್ತೂ ಹೆಚ್ಚಾಗುತ್ತಿದೆ. ಕಾನೂನು ಬಾಹಿರವಾದ ಆಸ್ತಿಯನ್ನು ಕಾನೂನುಬದ್ಧಗೊಳಿಸಲೋಸುಗ ಈ ಕಾಯ್ದೆಯನ್ನು ಜಾರಿಗೊಳಿಸಿರುವುದು ಎಂಬ ಮಾತಿದೆ. ಇದರಲ್ಲೇ 50 ಸಾವಿರ ಕೋಟಿ ರೂಪಾಯಿಗಳಷ್ಟು ಗೋಲ್‌ಮಾಲ್ ನಡೆದಿದೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಈಗ ಇರುವ ಸರಕಾರ ಜನರ ಪ್ರತಿನಿಧಿ ಸರಕಾರ ಅಲ್ಲ, ಬದಲಿಗೆ ಹಣ ಪ್ರತಿನಿಧಿ ಸರಕಾರ. ಇಂದಿನ ರಾಜಕಾರಣ ಅಂದರೆ- ‘‘ಹಣ ಮಾಡುವುದಕ್ಕಾಗಿ ರಾಜಕಾರಣ, ಆ ಮಾಡಿಟ್ಟ ಹಣವನ್ನು ಕಾಯ್ದುಕೊಳ್ಳುವುದಕ್ಕಾಗಿ ಇರುವ ರಾಜಕಾರಣ’’ ಎಂಬಂತಾಗಿದೆ. ಇದನ್ನೆಲ್ಲಾ ನೋಡಿಕೊಂಡು ನಾವು ಸುಮ್ಮನೆ ಕೂರಬೇಕೆ?

ಸುಮ್ಮನೆ ಕೂತಿಲ್ಲ...
ಹೌದು, ಸುಮ್ಮನೆ ಕೂತಿಲ್ಲ. ಕರ್ನಾಟಕ ರಾಜ್ಯದಲ್ಲಿ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಮತ್ತು ವಿದ್ಯಾರ್ಥಿ, ಯುವಜನ ಸಂಘಟನೆಗಳು ಜೊತೆಗೆ ನಾಡಿನ ಪ್ರಗತಿಪರರು ಎಲ್ಲ ಜೊತೆಗೂಡಿ ಸಂಯುಕ್ತ ಹೋರಾಟ, ಕರ್ನಾಟಕ ಎಂಬ ಐಕ್ಯತಾ ಒಕ್ಕೂಟ ವೇದಿಕೆ ರೂಪಿಸಿ ನಾಡಿನಾದ್ಯಂತ ಈ ಕರಾಳ ಮೂರು ಕಾಯ್ದೆಗಳನ್ನು ವಿರೋಧಿಸಿ ಅವಿರತ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಉದಾಹರಣೆಗೆ 2021, ಜನವರಿ 26 ರಂದು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಯಿತು. ಎಲ್ಲಾ ದಿಕ್ಕುಗಳಿಂದಲೂ ರಾಜಧಾನಿಗೆ ಜನ ಬಂದರು. ಅಪಾರ ಸಂಖ್ಯೆಯ ಟ್ಯಾಕ್ಟರ್‌ಗಳು ರಾಜಧಾನಿಗೆ ಬಂದರೂ ಸರಕಾರ ತಡೆದು ದಮನ ಮಾಡಿತು. ಇದಾದ ಮೇಲೆ 2021, ಮಾರ್ಚ್ 22ರಂದು ರಾಜಧಾನಿಯಲ್ಲಿ ನಡೆದ ಬೃಹತ್ ರ್ಯಾಲಿ ಮತ್ತು ಸಮಾವೇಶಕ್ಕೆ ಉತ್ತರ ಪ್ರದೇಶದಿಂದ ರಾಕೇಶ್ ಟಿಕಾಯತ್ ಹಾಗೂ ಪಂಜಾಬ್‌ನಿಂದ ದರ್ಶನ್‌ಪಾಲ್ ಬಂದಿದ್ದರು. ಹೀಗೆ ಭಾರತದ ಇತರ ರಾಜ್ಯಗಳ ಎಚ್ಚೆತ್ತ ನಾಯಕತ್ವ ಕರ್ನಾಟಕದ ಸಂಯುಕ್ತ ಹೋರಾಟದಲ್ಲಿ ಭಾಗವಹಿಸಿದೆ. ಇಷ್ಟು ಮಾತ್ರವಲ್ಲ, ಯೋಗೇಂದ್ರ ಯಾದವ್ ಅವರು ಈ ಮೊದಲೇ ಕರ್ನಾಟಕ ರಾಜ್ಯಕ್ಕೆ ಅನೇಕ ಸಲ ಬಂದು ರಾಜ್ಯದ ವಿವಿಧ ಸಂಘಟನೆಗಳ ಜೊತೆ ಒಡನಾಡಿ ಹೋರಾಟಕ್ಕೆ ತಳಪಾಯ ಕಟ್ಟುವಲ್ಲಿ ಕೈ ಜೋಡಿಸಿದ್ದಾರೆ. ಇಷ್ಟು ಮಾತ್ರವಲ್ಲ, ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲೂ ಈ ಮೂರು ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಸಿ ಚಳವಳಿ ನಡೆಯುತ್ತಲೇ ಬರುತ್ತಿದೆ-ನಿರಂತರವಾಗಿ.

Writer - ದೇ. ಮ.

contributor

Editor - ದೇ. ಮ.

contributor

Similar News