×
Ad

ರಷ್ಯಾ ಆಕ್ರಮಣ ವಿಫಲಗೊಳಿಸಲು ಅಂತರರಾಷ್ಟ್ರೀಯ ಕ್ರಿಯಾಯೋಜನೆ: ಬ್ರಿಟನ್

Update: 2022-03-06 07:52 IST

ಲಂಡನ್: ಉಕ್ರೇನ್ ಮೇಲಿನ ರಷ್ಯಾ ಅತಿಕ್ರಮಣವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕ್ರಿಯಾಯೋಜನೆಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಚಾಲನೆ ನೀಡಿದ್ದಾರೆ. ಇದರ ಅಂಗವಾಗಿ ಮುಂದಿನ ವಾರ ಸರಣಿ ರಾಜತಾಂತ್ರಿಕ ಸಭೆಗಳನ್ನು ಹಮ್ಮಿಕೊಂಡಿರುವುದಾಗಿ ಪ್ರಧಾನಿ ಕಚೇರಿ ಪ್ರಕಟಿಸಿದೆ.

ರಷ್ಯಾದ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ನವೀಕೃತ ಹಾಗೂ ನಿರಂತರ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಬೆಂಬಲವನ್ನು ಬ್ರಿಟನ್ ಪ್ರಧಾನಿ ಕೋರಲಿದ್ದಾರೆ. ಇದಕ್ಕಾಗಿ ಆರು ಅಂಶಗಳ ಕ್ರಿಯಾಯೋಜನೆಯನ್ನು ಜಾರಿಗೆ ತರಲಿದ್ದು, ಭಾನುವಾರ ಇದರ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೆಯಲ್ಲಿ ವಿವರಿಸಲಾಗಿದೆ.

"ರಷ್ಯಾ ಉಕ್ರೇನ್ ಮೇಲೆ ಅತಿಕ್ರಮಣ ಮಾಡಿದ ದಿನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಶ್ವಾದ್ಯಂತ ಹಲವು ದೇಶಗಳು ಈ ಪ್ರಮುಖ ಆರ್ಥಿಕತೆಯ ವಿರುದ್ಧ ಅತಿದೊಡ್ಡ ನಿರ್ಬಂಧಗಳನ್ನು ಹೇರಿವೆ ಎಂದು ಪ್ರಧಾನಿ ಕಚೇರಿ ವಿವರಿಸಿದೆ.

"ಈ ಅತಿಕ್ರಮಣದಲ್ಲಿ ರಷ್ಯಾ ಅಧ್ಯಕ್ಷರು ಸೋಲಬೇಕು ಅವರು ಸೋಲುವುದನ್ನು ಖಾತರಿಪಡಿಸಬೇಕು" ಎಂದು ಜಾನ್ಸನ್ ಹೇಳಿದ್ದಾರೆ. "ಅಂತರರಾಷ್ಟ್ರೀಯ ನಿಯಮ ಆಧರಿತ ವ್ಯವಸ್ಥೆಗೆ ನಾವು ಕೇವಲ ಬೆಂಬಲ ವ್ಯಕ್ತಪಡಿಸಿದರೆ ಸಾಲದು; ಮಿಲಿಟರಿ ಬಲದ ಮೂಲಕ ಇದನ್ನು ಮರು ವ್ಯಾಖ್ಯಾನಿಸುವ ನಿರಂತರ ಪ್ರಯತ್ನಗಳ ವಿರುದ್ಧ ನಾವು ರಕ್ಷಿಸಬೇಕು"

ಸೋಮವಾರ ಈ ಕಾರ್ಯತಂತ್ರದ ಭಾಗವಾಗಿ ಜಾನ್ಸನ್ ಅವರು ತಮ್ಮ ಕಚೇರಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇವ್ ಮತ್ತು ಹಾಲೆಂಡ್ ಪ್ರಧಾನಿ ಮಾರ್ಕ್ ರೂಟ್ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಉಕ್ರೇನ್‌ಗೆ ಬೆಂಬಲ ನೀಡುವ ಅಭಿಯಾನವಾಗಿ ತಮ್ಮ ಬದ್ಧತೆಗಳನ್ನು ಹೇಗೆ ಪರಿವರ್ತಿಸಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಕಚೇರಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News