×
Ad

ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರವೇನು?

Update: 2022-03-06 09:55 IST

ಹಲವು ರಶ್ಯ ಪರಿಣಿತರ ಪ್ರಕಾರ, ತನ್ನ ರಕ್ಷಣೆಯನ್ನು ಬಲಪಡಿಸಿಕೊಳ್ಳಲು ಉಕ್ರೇನ್ ನ್ಯಾಟೊ ಮಿಲಿಟರಿ ಬಣ ಸೇರದಂತೆ ಮಾಡುವುದು ಮಾತ್ರ ಪುಟಿನ್‌ರ ಸದ್ಯದ ಗುರಿ, ಚಕ್ರಾಧಿಪತ್ಯವನ್ನು ಸ್ಥಾಪಿಸುವುದು ಅಲ್ಲ. ಹಾಗಾಗಿ ರಶ್ಯದ ಭದ್ರತೆಯನ್ನು ಕಾಪಾಡಲು ಉಕ್ರೇನ್ ಮೇಲೆ ಆಕ್ರಮಣ ಮಾಡಿ ಅಲ್ಲಿನ ಮಿಲಿಟರಿ ಸಾಮರ್ಥ್ಯವನ್ನು ವ್ಯಾಪಕವಾಗಿ ನಾಶಮಾಡುವುದು ರಶ್ಯದ ತಕ್ಷಣದ ಗುರಿಯಾಗಿದೆ. ಈ ಕಾರಣದಿಂದಲೇ, ನಿರಂತರವಾಗಿ ಕ್ಷಿಪಣಿಗಳ ದಾಳಿ ಮುಂದುವರಿಸಿ, ಉಕ್ರೇನಿನ ಮಿಲಿಟರಿ ಶಕ್ತಿಯನ್ನು ಸತತವಾಗಿ ಕುಗ್ಗಿಸುತ್ತಿದೆ.

ರಶ್ಯದ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಮಾಡಿರುವ ಅಮಾನುಷ ಆಕ್ರಮಣ ವಿಶ್ವವನ್ನು ತಲ್ಲಣಿಸಿದೆ. ಜನವರಿ 2022ರಿಂದಲೇ ಪುಟಿನ್ ರಶ್ಯದ ಸೇನೆಯನ್ನು ಉಕ್ರೇನ್ ಗಡಿಗೆ ವರ್ಗಾವಣೆ ಮಾಡುತ್ತಿದ್ದುದು ಉಕ್ರೇನ್, ಅಮೆರಿಕ ಮತ್ತು ಯೂರೊಪ್ ದೇಶಗಳಿಗೆ ಗೊತ್ತಿದ್ದರೂ, ಪರಿಸ್ಧಿತಿಯನ್ನು ನಿಯಂತ್ರಿಸಲು ಮಾತುಕತೆಗಳತ್ತ ಗಮನಹರಿಸದಿದ್ದದು ನಿಜಕ್ಕೂ ವಿಷಾದದ ಸಂಗತಿ.

ರಶ್ಯದ ಆಕ್ರಮಣಕ್ಕೆ ಕಾರಣಗಳು:

ಪುಟಿನ್ ಉಕ್ರೇನ್ ಮೇಲಿನ ಆಕ್ರಮಣಕ್ಕೆ ಹಲವು ಕಾರಣ ಗಳಿವೆ. ಯುದ್ಧವು ಮುಖ್ಯವಾಗಿ ಪುಟಿನ್‌ರ ಮಹತ್ತರ ಅಭಿಲಾಷೆ ಹಾಗೂ ಬಹುವರ್ಷಗಳ ಕನಸಾದ ರಶ್ಯ (czar) ಚಕ್ರಾಧಿಪತ್ಯವನ್ನು ಪುನಃ ಸ್ಥಾಪಿಸುವ ಮಹದಾಕಾಂಕ್ಷೆಯ ಪ್ರಥಮ ಹೆಜ್ಜೆಯಾಗಿದೆ. ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಅವರ ಮುಂದಿನ ಗುರಿ ಎಂದು ಈಗಾಗಲೇ ಕೇಳಿ ಬರುತ್ತಿದೆ ‘‘ಚಾರಿತ್ರಿಕವಾಗಿ, ಉಕ್ರೇನ್ ಸ್ವತಂತ್ರ ರಾಷ್ಟವಲ್ಲ, ಅದು ರಶ್ಯದ ಅಂಗ’’ ಎನ್ನುವುದು ಪುಟಿನ್ ವಾದ. ಆದರೆ, ಅದು ಸತ್ಯವಲ್ಲ ಎನ್ನುವುದು ಅಂತರ್ ರಾಷ್ಟ್ರೀಯ ಸಮುದಾಯಕ್ಕೆ ಗೊತ್ತಿರುವ ವಿಷಯ. ಸೋವಿಯತ್ ಒಕ್ಕೂಟದ ಪತನವನ್ನು ಜೀರ್ಣಿಸಿಕೊಳ್ಳುವುದು ಬಹು ವರ್ಷಗಳಿಂದಲೂ ಪುಟಿನ್‌ಗೆ ಸಾಧ್ಯವಾಗಿರಲಿಲ್ಲ. ಮೂಲತಃ, ಉಕ್ರೇನ್ ಮೇಲಿನ ರಶ್ಯದ ಹಿಡಿತವನ್ನು, ರಶ್ಯದ ಭದ್ರತೆಯ ಕಾರಣದಿಂದ, ಬಿಟ್ಟುಕೊಡುವುದು ಅವರಿಗೆ ಅಸಾಧ್ಯವಾಗಿತ್ತು/ಆಗಿದೆ. ಆ ಕಾರಣದಿಂದಾಗಿ ಆಕ್ರಮಣ ಮಾಡಿ ಉಕ್ರೇನ್ ದೇಶವನ್ನು ರಶ್ಯದೊಡನೆ ವಿಲೀನಗೊಳಿಸುವುದು ಅವರ ಗುರಿಯಾಗಿರುವಂತೆ ಕಾಣಿಸುತ್ತದೆ. ಈ ಕಾರಣದಿಂದಲೇ ಉಕ್ರೇನಿನ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ರಶ್ಯದ ಸೈನ್ಯ ಮುಂದಾಗಿದೆ. ಆದರೆ, ಹಲವು ರಶ್ಯ ಪರಿಣಿತರ ಪ್ರಕಾರ, ತನ್ನ ರಕ್ಷಣೆಯನ್ನು ಬಲಪಡಿಸಿಕೊಳ್ಳಲು ಉಕ್ರೇನ್ ನ್ಯಾಟೊ ಮಿಲಿಟರಿ ಬಣ ಸೇರದಂತೆ ಮಾಡುವುದು ಮಾತ್ರ ಪುಟಿನ್‌ರ ಸದ್ಯದ ಗುರಿ, ಚಕ್ರಾಧಿಪತ್ಯವನ್ನು ಸ್ಥಾಪಿಸುವುದು ಅಲ್ಲ. ಹಾಗಾಗಿ ರಶ್ಯದ ಭದ್ರತೆಯನ್ನು ಕಾಪಾಡಲು ಉಕ್ರೇನ್ ಮೇಲೆ ಆಕ್ರಮಣ ಮಾಡಿ ಅಲ್ಲಿನ ಮಿಲಿಟರಿ ಸಾಮರ್ಥ್ಯವನ್ನು ವ್ಯಾಪಕವಾಗಿ ನಾಶಮಾಡುವುದು ರಶ್ಯದ ತಕ್ಷಣದ ಗುರಿಯಾಗಿದೆ. ಈ ಕಾರಣದಿಂದಲೇ, ನಿರಂತರವಾಗಿ ಕ್ಷಿಪಣಿಗಳ ದಾಳಿ ಮುಂದು ವರಿಸಿ, ಉಕ್ರೇನಿನ ಮಿಲಿಟರಿ ಶಕ್ತಿಯನ್ನು ಸತತವಾಗಿ ಕುಗ್ಗಿಸುತ್ತಿದೆ. ಈ ನಿಟ್ಟಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನೂ ಉಕ್ರೇನಿನ ಗಡಿ ಪ್ರದೇಶಕ್ಕೆ ಸಾಂಕೇತಿಕವಾಗಿ ವರ್ಗಾಯಿಸಿರುವುದನ್ನು ಗಮನಿಸಬೇಕು ಎನ್ನುವ ವಾದಗಳು ಮುಂಬದಿಗೆ ಬರುತ್ತಿವೆ. ತನ್ನ ಗುರಿ ಸಾಧನೆಯಿಂದಾಗಿ ಅಮಾಯಕ ನಾಗರಿಕರ ಹತ್ಯೆಗೆ ಸಂಬಂಧಿಸಿದಂತೆ ಪುಟಿನ್ ಅಂತರ್‌ರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಧೆಯ ಕರೆಗೆ ಸ್ಪಂದಿಸುತ್ತಿಲ್ಲ.

ಮೂರನೆಯದಾಗಿ, ಉಕ್ರೇನ್ ದೇಶದ ಖನಿಜ ಸಂಪತ್ತಿನ ಮೇಲೆ ನಿಯಂತ್ರಣವನ್ನು ಸಾಧಿಸುವ ಕಾರಣದಿಂದಲೂ ಪುಟಿನ್ ಆಕ್ರಮಣ ನೀತಿಯನ್ನು ಅನುಸರಿಸುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಸಂದರ್ಭದಲ್ಲಿ, ಉಕ್ರೇನ್ ಬಿಕ್ಕಟ್ಟನ್ನು ವಿಶಾಲ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳವುದು ಸೂಕ್ತ. ಉಕ್ರೇನ್‌ನ 20ನೇ ಶತಮಾನದ ಇತಿಹಾಸವನ್ನು ಸಂಕ್ಷಿಪ್ತವಾಗಿ ಗಮನಿಸೋಣ. ರಶ್ಯ ಕ್ರಾಂತಿಯ ನಂತರ, ಕೀವ್‌ನಲ್ಲಿ ರಾಷ್ಟ್ರೀಯ ಸರಕಾರವನ್ನು ಸೋಲಿಸಿದ ಉಕ್ರೇನಿಯನ್ ಬೊಲ್ಶೆವಿಕ್ ಬಣದವರು ಉಕ್ರೇನಿಯನ್ ಸಮಾಜವಾದಿ ಗಣರಾಜ್ಯವನ್ನು ಸ್ಥಾಪಿಸಿ, ಡಿಸೆಂಬರ್ 30, 1922ರಂದು ಸೋವಿಯತ್ ಒಕ್ಕೂಟದ ಗಣರಾಜ್ಯಗಳಲ್ಲಿ ಉಕ್ರೇನ್ ಅನ್ನು ವಿಲೀನಗೊಳಿಸಿದರು. ಆದಾಗ್ಯೂ, ವಿಶ್ವ ಯುದ್ಧದ ಸಮಯದಲ್ಲಿ, ಉಕ್ರೇನಿಯನ್ ದಂಗೆಕೋರ ಸೈನ್ಯವು ಜರ್ಮನಿ ಮತ್ತು ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. 1945ರಲ್ಲಿ, ಉಕ್ರೇನಿಯನ್ ಸಮಾಜವಾದಿ ಗಣರಾಜ್ಯವು ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಂದಾಯಿತು. 1953ರಲ್ಲಿ ಸ್ಟಾಲಿನ್ ಅವರ ನಿಧನಾನಂತರ, ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿದ್ದ ಕ್ರುಶ್ಚೇವ್ (ಅವರು ಉಕ್ರೇನಿಯನ್ ಮೂಲದವರಾಗಿದ್ದರು) ಉಕ್ರೇನಿನ ಪುನರುಜ್ಜೀವನಕ್ಕೆ ಸಹಾಯ ಮಾಡಿದರು. ಆದರೆ, ಈ ಪ್ರಯತ್ನವು ಸಫಲವಾಗಲಿಲ್ಲ. ಉಕ್ರೇನ್ ವಾರ್ಸಾ ಮಿಲಿಟರಿ ಬಣದ ಸದಸ್ಯತ್ವ ಹೊಂದಿದಾಗ ಸೋವಿಯತ್ ಒಕ್ಕೂಟದ ಆಧಿಪತ್ಯವನ್ನು ಸ್ವೀಕರಿಸಬೇಕಾಯಿತು.

1991ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಉಕ್ರೇನ್ ಮತ್ತೆ ಸ್ವತಂತ್ರವಾಯಿತು. ಜಾಗತೀಕರಣದ ಹಿನ್ನೆಲೆಯಲ್ಲಿ ಮಾರುಕಟ್ಟೆಯಾಧಾರಿತ ಆರ್ಥಿಕತೆಯನ್ನು ಒಪ್ಪಿಕೊಂಡಿತು. ವಾರ್ಸಾ ಒಪ್ಪಂದವು ವಿಸರ್ಜಿಸಲ್ಪಟ್ಟಾಗ ಅಮೆರಿಕ ನೇತೃತ್ವದಲ್ಲಿ ನ್ಯಾಟೊ ವಿಸ್ತರಣೆ ಕಾರ್ಯ ಪ್ರಾರಂಭವಾಯಿತು. 1999 ಮತ್ತು 2020ರ ನಡುವೆ, ಪೋಲ್ಯಾಂಡ್, ಹಂಗೇರಿ, ಜೆಕ್ ರಿಪಬ್ಲಿಕ್, ಬಲ್ಗೇರಿಯಾ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ರೊಮೇನಿಯಾ, ಸ್ಲೋವಾಲಿಯಾ, ಅಲ್ಬೇನಿಯಾ, ಕ್ರೊಯೇಷಿಯಾ, ಮಾಂಟೆನೆಗ್ರೊ ಮತ್ತು ಮ್ಯಾಸಿಡೋನಿಯಾವನ್ನು ನ್ಯಾಟೊಗೆ ಸೇರುವಂತೆ ಮಾಡುವುದರಲ್ಲಿ ಅಮೆರಿಕ ಯಶಸ್ವಿಯಾಯಿತು. 2021 ರಲ್ಲಿ, ಬೋಸ್ನಿಯಾ-ಹರ್ಜೆಗೋವಿನ, ಜಾರ್ಜಿಯಾ ಮತ್ತು ಉಕ್ರೇನ್ ನ್ಯಾಟೊ ಮೈತ್ರಿ ಕೂಟಕ್ಕೆ ಸೇರುವುದನ್ನು ಅಮೆರಿಕ ತಾತ್ವಿಕವಾಗಿ ಒಪ್ಪಿಕೊಂಡಿತು. ಪೂರ್ವ ಮತ್ತು ಮಧ್ಯ ಯುರೋಪಿಯನ್ ರಾಷ್ಟ್ರಗಳನ್ನು ನ್ಯಾಟೊ ಬಣಕ್ಕೆ ತರುವುದು ಅಮೆರಿಕದ ಮಹತ್ತರ ಉದ್ದೇಶ. ಏಕೆಂದರೆ, ಅದರ ಮೂಲಕ ರಶ್ಯವನ್ನು ಸುತ್ತುವರಿದು ರಶ್ಯದ ಮಿಲಿಟರಿ ಶಕ್ತಿಯನ್ನು ತಡೆಹಿಡಿಯುವುದು ಅಮೆರಿಕ ವಿದೇಶಾಂಗ ನೀತಿಯ ಮೂಲ ಗುರಿಯಾಗಿದೆ. ಒಂದು ರೀತಿಯಲ್ಲಿ, ಈ ನೀತಿಯು ಅಮೆರಿಕದ ಶೀತಲ ಸಮರದ ತಡೆಹಿಡಿಯುವಿಕೆ (containment)ನೀತಿಯ ಮುಂದುವರಿಕೆಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡುವ ಅಮೆರಿಕದ ಉದ್ದೇಶಕ್ಕೆ ರಶ್ಯದ ವಿರೋಧವನ್ನು ಅದರ ಸುರಕ್ಷತೆಯ ಕಾರಣಗಳಿಂದಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಈ ಕಾರಣ ಕ್ಕಾಗಿಯೇ ಪುಟಿನ್ ಪ್ರಸ್ತುತದಲ್ಲಿ ಉಕ್ರೇನ್‌ನಿಂದ ಬೇರ್ಪಟ್ಟ ಡೊನೆಸ್ಕ ಮತ್ತು ಲುಹಾನ್‌ಸ್ಕ ಪ್ರದೇಶಗಳಿಗೆ ರಾಜತಾಂತ್ರಿಕ ಮಾನ್ಯತೆ ನೀಡಿರುವುದು. ವಾಸ್ತವದಲ್ಲಿ ಅಮೆರಿಕದ ಉಕ್ರೇನ್ ನೀತಿಯು ಅದರ ಭೌಗೊಳಿಕತೆ, ಸಂಪನ್ಮೂಲಗಳು ಮತ್ತು ಮಾರುಕಟ್ಟೆಗಳ ಮೇಲೆ ನಿಯಂತ್ರಣವನ್ನು ಪಡೆಯುವ ಗುರಿಯಿಂದ ಕೂಡಿದ್ದಾಗಿದೆ.

ಯುದ್ಧವನ್ನು ತೀಕ್ಷ್ಣಗೊಳಿಸಿರುವ ರಶ್ಯ ಉಕ್ರೇನಿನ ಪ್ರಮುಖ ನಗರಗಳ ಮೇಲೆ, ವಿಶೇಷವಾಗಿ, ರಾಜಧಾನಿ ಕೀವ್ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ರಾಜಧಾನಿಯ ಟಿ.ವಿ. ಸ್ಟೇಷನ್ ಮತ್ತು ನಾಗರಿಕ ನಿವಾಸಗಳ ಮೇಲೆ ಕ್ಷಿಪಣಿ ದಾಳಿ ಮಾಡಿ ಜನಜೀವನಕ್ಕೆ ತೀವ್ರ ಧಕ್ಕೆಯನ್ನುಂಟುಮಾಡಿದೆ. ಸುಮಾರು 6 ಮಿಲಿಯನ್ ಉಕ್ರೇನ್ ನಾಗರಿಕರು ಪೂರ್ವ ಯೂರೋಪಿನ ದೇಶಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ವಿಶ್ವಸಂಸ್ಥೆಯ ಮಾನವೀಯ ಹಕ್ಕುಗಳ ಸಮಿತಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯಾಗಿ ರಶ್ಯ ತೀವ್ರ ಖಂಡನೆಗೆ ಒಳಗಾಗಿದ್ದರೂ, ಪುಟಿನ್ ನಿರ್ದೇಶಿತ ಸೈನ್ಯ ತನ್ನ ಕಾರ್ಯಾಚರಣೆ ಮುಂದುವರಿಸಿರುವುದು ಖಂಡನೀಯ. ಅಂತರ್‌ರಾಷ್ಟೀಯ ನ್ಯಾಯಾಲಯವೂ ಕೂಡ ರಶ್ಯದ ಆಕ್ರಮಣದ ವಿಷಯವನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಿದೆ.

ಅಮೆರಿಕ ಮತ್ತು ನ್ಯಾಟೊಗೆ ಸೇರಿದ ಇತರ ದೇಶಗಳ ದಿಗ್ಬಂಧನಗಳು ರಶ್ಯದ ಆರ್ಥಿಕ ವ್ಯವಸ್ಧೆಯ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡಿರುವ ಹಿನ್ನೆಲೆಯಲ್ಲಿ ರಶ್ಯ ಕದನ ವಿರಾಮದ ಬಗ್ಗೆ ಉಕ್ರೇನ್ ಜೊತೆ ಮಾತುಕತೆ ಆರಂಭಿಸಿದ್ದರೂ, ಅದರ ಬಗ್ಗೆ ಆಸಕ್ತಿಯನ್ನು ಹೊಂದಿಲ್ಲದಿರುವುದು ಪುಟಿನ್‌ರ ನಿಜವಾದ ಉದ್ದೇಶಗಳನ್ನು ತೋರಿಸುತ್ತದೆ. ಹೀಗಾಗಿ, ರಶ್ಯದಿಂದ ಅನಿಲ ಪೂರೈಕೆಗಾಗಿ ನಿಯೋಜಿಸಲಾಗಿರುವ ನಾರ್ಡ್‌ಸ್ಟ್ರೀಮ್-2 ಪೈಪ್‌ಲೈನ್ ಪ್ರಮಾಣೀಕರಣವನ್ನು ಜರ್ಮನಿ ಅನಿರ್ದಿಷ್ಟವಾಗಿ ಮುಂದೂಡಿದೆ. ರಶ್ಯವನ್ನು ಕ್ರೀಡೆ ಮತ್ತಿತರ ತೀವ್ರ ದಿಗ್ಬಂಧನಗಳಿಗೆ ಒಳಪಡಿಸಲಾಗಿದೆ. ಒಟ್ಟಾರೆ, ರಶ್ಯವನ್ನು ಅಂತರ್‌ರಾಷ್ಟೀಯ ಮಟ್ಟದಲ್ಲಿ ಏಕಾಂಗಿಯಾಗಿಸುವ ಸರ್ವ ಪ್ರಯತ್ನಗಳೂ ನಡೆದಿವೆ. ಆದರೆ, ರಶ್ಯದ ಮೂಲ ಉದ್ದೇಶ ಉಕ್ರೇನಿನ ಮಿಲಿಟರಿ ಶಕ್ತಿಯನ್ನು ನಾಶಮಾಡುವುದಾಗಿರುವುದು ಸತ್ಯ.

ಭಾರತದ ಪಾತ್ರ:

ಭಾರತದ ಪಾತ್ರಕ್ಕೆ ಸಂಬಂಧಿಸಿದಂತೆ, ಉಕ್ರೇನ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳೆರಡೂ ಮೋದಿ ಸರಕಾರವು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಪುಟಿನ್ ಮೇಲೆ ಒತ್ತಡ ಹೇರಬೇಕೆಂದು ಬಯಸುತ್ತವೆ. ಭಾರತದ ನಿಲುವು ಚಾರಿತ್ರಿಕವಾಗಿಯೂ ರಶ್ಯದೊಂದಿಗಿನ ತನ್ನ ಸಂಬಂಧವನ್ನು, ವಿಶೇಷವಾಗಿ, ರಕ್ಷಣಾ ಸಂಬಂಧವನ್ನು ಗಮನಿಸಿದರೆ, ಪಾಶ್ಚಿಮಾತ್ಯ ದೇಶಗಳಿಂದ ಭಿನ್ನವಾಗಿದೆ. 1979ರ ಡಿಸೆಂಬರ್‌ನಲ್ಲಿ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನವನ್ನು ಆಕ್ರಮಿಸಿದಾಗ, ಭಾರತದ ನಿಲುವು ಪಾಶ್ಚಿಮಾತ್ಯ ದೇಶಗಳ ಒಕ್ಕೊರಲಿನ ಟೀಕೆಯಿಂದ ಭಿನ್ನವಾಗಿತ್ತು ಮತ್ತು ನಿಲುವಳಿಗಳ ವಿಷಯದಲ್ಲಿ ಮತ ಚಲಾವಣೆಯಿಂದ ಗೈರಾಗುವುದಾಗಿತ್ತು. ಪ್ರಸ್ತುತ ಉಕ್ರೇನ್‌ಗೆ ಸಂಬಂಧಿಸಿದ ಪಾಶ್ಚಿಮಾತ್ಯ ದೇಶಗಳ ನಿಲುವಳಿಗಳಿಂದಲೂ ಭಾರತ ಗೈರಾಗಿದೆ. ಪರಿಸ್ಧಿತಿಯನ್ನು ಆಮೂಲಾಗ್ರವಾಗಿ ಪರಿಗಣಿಸಿ ಭಾರತದ ರಾಯಭಾರಿ ಉಭಯ ಪಕ್ಷಗಳೂ ತಕ್ಷಣ ಹಿಂಸಾಚಾರವನ್ನು ನಿಲ್ಲಿಸಿ ರಾಜತಾಂತ್ರಿಕ ಮಾತುಕತೆಗಳ ಹಾದಿಗೆ ಹಿಂದಿರುಗುವಂತೆ ಮನವಿ ಮಾಡಿದ್ದಾರೆ. ಜೊತೆಯಲ್ಲಿಯೇ, ಗಡಿ ರಕ್ಷಣೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಲು ಭಾರತ ಕರೆ ನೀಡಿದೆ. ತಮ್ಮ ಮಾತುಕತೆಗಳಲ್ಲಿ ಪ್ರಧಾನಿ ಮೋದಿಯವರು ಪುಟಿನ್‌ರನ್ನು ಯುದ್ಧ ನಿಲ್ಲಿಸಿ ಸಂಧಾನ ಮಾರ್ಗವನ್ನು ಅನುಸರಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆಂದು ವರದಿಯಾಗಿದೆ. ಆದರೂ, ಈ ಹೊತ್ತಿನಲ್ಲಿ ಉಕ್ರೇನ್‌ನಲ್ಲಿರುವ ಭಾರತದ ಎಲ್ಲ ವಿದ್ಯಾರ್ಥಿಗಳು ಮತ್ತು ಇತರ ಪ್ರಜೆಗಳನ್ನು ಸ್ವದೇಶಕ್ಕೆ ಹಿಂತರುವುದು ಮೋದಿ ಸರಕಾರದ ಆದ್ಯ ಕರ್ತವ್ಯವಾಗಿದೆ. ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರ ಮಾರ್ಗ:

ಶೀತಲ ಸಮರೋತ್ತರದ ಯುಗದಲ್ಲಿ, ರಶ್ಯ-ಅಮೆರಿಕ/ ನ್ಯಾಟೊ ದೇಶಗಳ ಶಕ್ತಿ ರಾಜಕೀಯದಲ್ಲಿ ಸಿಲುಕಿರುವ ಉಕ್ರೇನ್ ವಿದೇಶಾಂಗ ನೀತಿಯನ್ನು ಪಾಲಿಸುವಲ್ಲಿ ತನ್ನ ಸ್ವಾತಂತ್ರವನ್ನು ಬಹುಪಾಲು ಕಳೆದುಕೊಂಡಿದೆ. ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ರಶ್ಯ ಮತ್ತು ಅಮೆರಿಕ ಬಿಗಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ, ಉಕ್ರೇನ್ ಸಮಸ್ಯೆಗೆ ಕೆಳಕಂಡ ಪರಿಹಾರ ಸೂಚ್ಯವೆನ್ನಿಸುತ್ತದೆ. ತನ್ನ ಸ್ವಾತಂತ್ಯ, ಗಡಿ ರೇಖೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಉಕ್ರೇನ್ ತಟಸ್ಥ(ಅಲಿಪ್ತ) ನೀತಿಯ ಬಗ್ಗೆ ಚಿಂತಿಸುವುದಕ್ಕೆ ಇದು ಸಕಾಲ. ಒಂದು ರೀತಿಯಲ್ಲಿ ಅನಿವಾರ್ಯವೂ ಕೂಡ. ಈ ರೀತಿಯ ವಿದೇಶಾಂಗ ನೀತಿಯನ್ನು ಅನುಸರಿಸುವ ಮೂಲಕ ಉಕ್ರೇನ್, ರಶ್ಯ, ಅಮೆರಿಕ ಹಾಗೂ ಯೂರೋಪ್ ದೇಶಗಳಿಂದ ಅಂತರವನ್ನು ಕಾಪಾಡಿಕೊಂಡು ಅಂತರ್‌ರಾಷ್ಟೀಯ ರಾಜಕಾರಣದಲ್ಲಿ ತನ್ನ ಅಸ್ಮಿತೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಭಾರತ, ಈ ಪರಿಹಾರವನ್ನು ಸೂಚಿಸಿ ರಶ್ಯ, ಉಕ್ರೇನ್, ಅಮೆರಿಕ ಹಾಗೂ ಯೂರೋಪ್ ದೇಶಗಳ ಮನವೊಲಿಸುವ ಕಾರ್ಯವನ್ನು ಕೈಗೊಳ್ಳಬೇಕು. ಮೋದಿ-ವಿದೇಶಾಂಗ ಸಚಿವ ಜೈ ಶಂಕರ್ ಈ ಮಹೋನ್ನತ ಕೆಲಸವನ್ನು ಮಾಡಬಲ್ಲರೇ? ಇದರ ಬಗ್ಗೆ ಚಿಂತನೆ ಅಗತ್ಯ.

***

ICSSR, ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ವಿಭಾಗದ ಮಾಜಿ ಪ್ರಾಧ್ಯಾಪಕರು ಮತ್ತು ಮಾಜಿ ಸೀನಿಯರ್ ಫೆಲೊ, ಹೊಸದಿಲ್ಲಿ.

Writer - ಡಾ. ಪಿ.ಎಸ್. ಜಯರಾಮು

contributor

Editor - ಡಾ. ಪಿ.ಎಸ್. ಜಯರಾಮು

contributor

Similar News