×
Ad

"ದೂರ ನಿಲ್ಲಿ, ನೀವು ಕೊಳಕರು": ಉಕ್ರೇನ್‌ ಗಡಿಯಲ್ಲಿ ಜನಾಂಗೀಯ ತಾರತಮ್ಯ ಎದುರಿಸಿದ ಭಾರತೀಯ ವಿದ್ಯಾರ್ಥಿಗಳು

Update: 2022-03-06 11:51 IST
Photo credit: thequint.com

ಹೊಸದಿಲ್ಲಿ: ಯುದ್ಧಗ್ರಸ್ತ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಜನಾಂಗೀಯ ತಾರತಮ್ಯದ ಅವಮಾನ ಎದುರಿಸಬೇಕಾಯಿತು ಎಂದು thequint.com ವರದಿ ಮಾಡಿದೆ.

ವಿಧ್ಯಾಭ್ಯಾಸಕ್ಕಾಗಿ ತಾಯ್ನಾಡು ಬಿಟ್ಟು ತೆರಳಿದ್ದ ವಿದ್ಯಾರ್ಥಿಗಳು ಅಕ್ಷರಶಃ ಪ್ರಾಣವನ್ನು ಕೈಯಲಿಟ್ಟು ಯುದ್ಧ ಭೂಮಿಯಿಂದ ಗಡಿ ಪ್ರದೇಶಗಳ ಬಳಿ ಬಂದರೆ, ಅಲ್ಲಿ ಅವರು ವರ್ಣಬೇಧಕ್ಕೆ ಒಳಗಾಗಿರುವ ಪ್ರಸಂಗ ಅತ್ಯಂತ ಕ್ರೂರ ಸ್ವರೂಪದ್ದಾಗಿತ್ತು.

ಯುದ್ಧ ಆರಂಭವಾದಾಗಿನಿಂದ ಬಂಕರ್‌, ಶಿಬಿರಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಫೆಬ್ರವರಿ  26 ರ ಹೊತ್ತಿಗೆ ಕಠಿಣ ಹಾದಿ ಕ್ರಮಿಸಿ ರೊಮೇನಿಯಾ ಗಡಿ ಸಮೀಪ ತಲುಪುತ್ತಾರೆ. ಅಲ್ಲಿ ಅವರು ಎದುರಿಸಿದ ಜನಾಂಗೀಯ ತಾರತಮ್ಯವನ್ನು ಅವರೇ thequint ಜೊತೆಗೆ ಬಿಚ್ಚಿಟ್ಟಿದ್ದಾರೆ. ರೊಮೇನಿಯಾ ಗಡಿ ತಲುಪಿದ ಸುಮಾರು 2000 ದಷ್ಟು ಇದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ, 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತ ಮೂಲದವರು. ಆಫ್ರಿಕನ್‌ ಹಾಗೂ ಮಧ್ಯಪ್ರಾಚ್ಯದ ವಿದ್ಯಾರ್ಥಿಗಳೂ ಈ ಗುಂಪಿನಲ್ಲಿದ್ದರು.

ತಾವು ಎದುರಿಸಿದ ಜನಾಂಗೀಯ ತಾರತಮ್ಯವನ್ನು ವಿವರಿಸಿದ ವಿನ್ನಿಟ್ಸಿಯಾ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅನಿಮೇಶ್ ಕುಮಾರ್, “ನಮ್ಮಲ್ಲಿ ಹೆಚ್ಚಿನವರು ಎರಡು ಮೂರು ದಿನಗಳಿಂದ ಹೊಟ್ಟೆ ತುಂಬಾ ಏನೂ ತಿಂದಿರಲಿಲ್ಲ. ಸಿಟೆಲ್‌ ಗಡಿಭಾಗದಲ್ಲಿದ್ದ ರೆಸ್ಟೋರೆಂಟ್‌ ಗೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ರೆಸ್ಟೋರೆಂಟ್‌ ಸಿಬ್ಬಂದಿ ನಮ್ಮನ್ನು ಬಾಗಿಲಲ್ಲಿ ನಿಲ್ಲಿಸಿ 'ಹೊರಗೆ ಹೋಗಿ, ನೀವು ಕೊಳಕರುʼ ಎಂದು ಪ್ರವೇಶ ನಿರಾಕರಿಸಿದ್ದಾನೆ. ಆತನ ವರ್ತನೆ ನನಗೆ ಆಶ್ಚರ್ಯವನ್ನುಂಟು ಮಾಡಿತು. ನಾನು ಅಂತಹ ಕಠೋರ ಜನಾಂಗೀಯ ತಾರತಮ್ಯವನ್ನು ಎಂದಿಗೂ ಎದುರಿಸಲಿಲ್ಲ” ಎಂದು ಹೇಳಿದ್ದಾರೆ.

ನಮ್ಮಲ್ಲಿ ಹಲವರು ಬಳಲಿದ್ದಾರೆ, ಅವರಿಗೆ ಅಗತ್ಯವಾದ ಆಹಾರವನ್ನು ರೆಸ್ಟೋರೆಂಟ್‌ ಬಾಗಿಲಲ್ಲೇ ನೀಡುವಂತೆ ಕೇಳಿಕೊಂಡೆವು. ಆದರೆ, ನಮ್ಮ ಮನವಿಗಳಿಗೆ ಅವರು ಸ್ಪಂದಿಸಲಿಲ್ಲ. ಕೊನೆಗೆ ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ರೆಸ್ಟೋರೆಂಟ್‌ ಒಂದಕ್ಕೆ ಹೋದೆವು, ಅಲ್ಲಿಯೂ ಅನುಭವವನ್ನು ಎದುರಿಸಿದೆವು ಎಂದು ಹೇಳಿದ್ದಾರೆ.

ಹುಡುಗಿಯರಿಗಾದರೂ ರೆಸ್ಟೋರೆಂಟ್‌ ಒಳಗಡೆ ಪ್ರವೇಶ ನೀಡಬಹುದು ಎಂಬ ವಿಶ್ವಾಸದಿಂದ ಇನ್ನೊಂದು ರೆಸ್ಟೋರೆಂಟ್‌ ಗೆ ವಿದ್ಯಾರ್ಥಿನಿಯರ ತಂಡ ಹೋಗಿದೆ. ಆದರೆ ಅಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ಹುಡುಗಿಯರಿಗೆ ವಾಶ್‌ರೂಮ್‌ ಬಳಸಲೂ ಕೂಡಾ ಅವಕಾಶ ನೀಡಿಲ್ಲ ಎಂದು ಭಾರತೀಯ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ ಎಂದು thequint.com ವರದಿ ಮಾಡಿದೆ.

ವಿನ್ಸಿಟಿಯಾ ಯುನಿವರ್ಸಿಟಿಯಲ್ಲಿ ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ, ಹಿಮಾಮಿ ಅರೋರಾ ತಾನು ಎದುರಿಸಿದ ತಾರತಮ್ಯವನ್ನು ವಿವರಿಸುತ್ತಾ ತನಗೆ ವಾಶ್‌ರೂಮ್‌ ಬಳಸಲು ಎಷ್ಟು ಸತಾಯಿಸಲಾಯಿತು ಎಂಬುದನ್ನು ವಿವರಿಸಿದ್ದಾರೆ.

"ನಾನು ವಾಶ್‌ ರೂಮ್‌ ಬಳಸಲು ಅನುಮತಿ ಕೇಳಿದೆ. ಮೊದಲಿಗೆ ಅವಕಾಶ ನಿರಾಕರಿಸಲಾಯಿತು, ಕೊನೆಗೂ ಮೂರು ಗಂಟೆಗಳ ಕಾಲ ರೆಸ್ಟೋರೆಂಟ್‌ ಬಾಗಿಲಲ್ಲೇ ನಿಂತು ಮನವಿ ಮಾಡಿದ ಬಳಿಕ ವಾಶ್‌ರೂಮ್‌ ಬಳಸಲು ಅನುಮತಿಸಲಾಯಿತು. ವಾಶ್‌ರೂಮ್‌ ಬಳಸಲು ಹೋದಾಗಲೇ ಹೊರಗಿರುವ ನನ್ನ ಗೆಳೆಯರಿಗೆ ಆಹಾರ, ನೀರಿನ ಪೊಟ್ಟಣಗಳನ್ನು ಖರೀದಿಸಿದೆ" ಎಂದು ಹಿಮಾಮಿ ತಿಳಿಸಿದ್ದಾರೆ.

ಅದೂ ಅಲ್ಲದೆ, ಆ ಪ್ರದೇಶದಲ್ಲಿ ಸಾರ್ವಜನಿಕ ವಾಶ್‌ರೂಮ್‌ಗಳಿಗೆ ಬೀಗ ಹಾಕಿದ್ದರಿಂದ ಹಾಗೂ ರೆಸ್ಟಾರೆಂಟ್‌ಗಳು ಭಾರತೀಯರಿಗೆ ಅನುಮತಿ ನೀಡದೆ ಇರುವುದರಿಂದ ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸಲು ಬಹಳಷ್ಟು ವಿದ್ಯಾರ್ಥಿನಿಯರು ಆಹಾರ, ನೀರನ್ನು ತ್ಯಜಿಸಿ ಕೂತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನೂ thequint.com ಜೊತೆ ಅವರು ಹಂಚಿದ್ದಾರೆ.

ಹಸಿವು ಮತ್ತು ಬಳಲಿಕೆಯಿಂದ ನಾನು ಮೂರ್ಛೆ ತಪ್ಪಿ ಬಿದ್ದೆ, ಭಾರತೀಯ ವಿದ್ಯಾರ್ಥಿಗಳು ಮಾತ್ರ ಅಲ್ಲಿ ಪರಸ್ಪರ ಸಹಾಯ ಮಾಡುತ್ತಿದ್ದರು ಎಂದು ಹಿಮಾನಿ ತಮ್ಮ ಕಠಿಣ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಭದ್ರತಾ ಪಡೆಗಳು ಉಕ್ರೇನ್‌ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯ, ದಬ್ಬಾಳಿಕೆಯನ್ನೂ ಈ ವಿದ್ಯಾರ್ಥಿಗಳು ಬಿಚ್ಚಿಟ್ಟಿದ್ದಾರೆ.  ವೈದ್ಯಕೀಯ ವಿದ್ಯಾರ್ಥಿ ಪರಾಸ್‌ ಉಕ್ರೇನಿಯನ್‌ ಪೊಲೀಸರ ದೌರ್ಜನ್ಯಗಳನ್ನು ವಿವರಿಸಿದ್ದಾರೆ.

ಯುರೋಪ್‌ ಮೂಲದ ನೂರಾರು ವಿದ್ಯಾರ್ಥಿಗಳನ್ನು ಗಡಿ ದಾಟಿಸುವಾಗ ಭಾರತ ಮೂಲದ ಕೇವಲ ಐವರನ್ನು ಮಾತ್ರ ಅವರು ಗಡಿ ಹೊರಗೆ ಬಿಡುತ್ತಿದ್ದಾರೆ. ಅಲ್ಲದೆ, ಹೊರ ಹೋಗಲು ಪ್ರಯತ್ನಿಸುವ ಭಾರತೀಯ ವಿದ್ಯಾರ್ಥಿಗಳನ್ನು ಕೈಯಿಂದ ದೂರ ತಳ್ಳಿ ಹಾಕಿದ್ದಾರೆ ಎಂದು ಪರಾಸ್‌ ಆರೋಪಿಸಿದ್ದಾರೆ. 

ಪರಾಸ್ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ಪ್ರತ್ಯಕ್ಷದರ್ಶಿ ವಿದ್ಯಾರ್ಥಿ ಶಿವಂ ಕುಮಾರ್ ಯಾದವ್, “ನಾವು ಈ ಎಲ್ಲಾ ಘಟನೆಗಳನ್ನು ಗಾಬರಿಯಿಂದ ನೋಡುತ್ತಿದ್ದೆವು. ಅವರು ಹುಡುಗಿಯರನ್ನು ಸಹ ಒಳಗೆ ಬಿಡಲಿಲ್ಲ. ವಿದ್ಯಾರ್ಥಿಗಳಿಗೆ ಅವರು ಒದೆಯುತ್ತಿದ್ದರು. ನಮ್ಮ ಕುತ್ತಿಗೆ ಹಿಡಿದು ಹಿಂದೆ ತಳ್ಳುತ್ತಿದ್ದರು.  ನಾಲ್ಕು ದಿನಗಳಿಂದ ಗಡಿಯಲ್ಲಿ ನಿಂತ ನಮ್ಮನ್ನು ಗಡಿ ದಾಟಲು ಬಿಡುತ್ತಿರಲಿಲ್ಲ. ಆದರೆ, ಮಧ್ಯಪ್ರಾಚ್ಯ, ಅಮೇರಿಕಾ, ನೈಜೀರಿಯಾದ ವಿದ್ಯಾರ್ಥಿಗಳನ್ನು ಅವರು ಹೊರಕ್ಕೆ ಬಿಡುತ್ತಿದ್ದರು. ಗಡಿದಾಟಲು ಕಾಯುತ್ತಾ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತಹ ದೊಡ್ಡ ಗುಂಪನ್ನು ಗಡಿ ದಾಟಲು ನಿರಾಕರಿಸಿರುವುದಕ್ಕೆ ತರ್ಕಬದ್ಧ ಕಾರಣಗಳೇ ಇರಲಿಲ್ಲ” ಎಂದು ಯಾದವ್ ಹೇಳಿದ್ದಾರೆ. 

ಆಹಾರ, ವಸತಿ, ನೀರು, ರೆಸ್ಟ್‌ ರೂಮ್‌ ಗಳನ್ನು ನಮಗೆ ನಿರಾಕರಿಸಲಾಯಿತು, ಕೊನೆಗೆ ಗಡಿ ದಾಟುವಿಕೆ ಕೂಡಾ ನಿಷೇಧಿಸಲಾಯಿತು. ಆಫ್ರಿಕನ್‌ ವಿದ್ಯಾರ್ಥಿಗಳು ಕೂಡಾ ಜನಾಂಗೀಯ ತಾರತಮ್ಯ ಎದುರಿಸಿದ್ದರೂ, ಅವರಿಗೆ ಗಡಿ ದಾಟಲು ಅವಕಾಶ ಮಾಡಿಕೊಡಲಾಗಿತ್ತು. ಖಾರ್ಕೀವ್‌ ನಗರದಲ್ಲಿ ಕೂಡಾ  ರೈಲು, ಬಸ್‌ ಮೊದಲಾದ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಏರಲು ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿರಲಿಲ್ಲ, ಯುರೋಪಿಯನ್‌ ವಿದ್ಯಾರ್ಥಿಗಳನ್ನು ಮಾತ್ರ ಏರಲು ಅವಕಾಶ ನೀಡಿದರು ಎಂದು ಶಿವಂ ಆರೋಪಿಸಿದ್ದಾರೆ.

ಹೇಗಾದರೂ, ಅನಿಮೇಶ್‌, ಹಿಮಾನಿ, ಪರಾಸ್‌ ಹಾಗೂ ಶಿವಂ ಹಾಗೂ ಇತರೆ ವಿದ್ಯಾರ್ಥಿಗಳ ತಂಡ ಫೆ. 28 ರಂದು ರೊಮೇನಿಯಾ ಗಡಿ ದಾಟಿ ಅಲ್ಲಿಂದ ರಾಜಧಾನಿ ಬುಕಾರೆಸ್ಟ್‌ ಮೂಲಕ ಮಾರ್ಚ್‌ 2 ರಂದು ಕೊನೆಗೂ ದಿಲ್ಲಿಗೆ ಬಂದು ತಲುಪಿದ್ದಾರೆ.

"ನಾವು ಬಂದ ಕಠಿಣ ದಾರಿಯುದ್ದಕ್ಕೂ ನಮ್ಮ ದೇಹ ಸಾಕಷ್ಟು ಬಳಲಿದೆ, ಆಹಾರವಿಲ್ಲದೆ, ನೀರಿಲ್ಲದೆ, ವಸತಿಯಿಲ್ಲದೆ, ದೇಹದ ಚೈತನ್ಯ ಕಳೆಗುಂದಿದೆ. ಆದರೂ ನಮ್ಮ ದೇಹದ ನೋವಿನಿಂದ ಬೇಗ ಚೇತರಿಸಿಕೊಳ್ಳುತ್ತೇವೆ. ಆದರೆ, ಜನಾಂಗೀಯ ತಾರತಮ್ಯ ನೀಡಿದ ಮಾನಸಿಕ ಆಘಾತದಿಂದ ಹೊರಬರಲು ಎಷ್ಟು ಸಮಯ ಬೇಕು ಗೊತ್ತಿಲ್ಲ" ಎಂದು ವಿದ್ಯಾರ್ಥಿಗಳು the.quint ಜೊತೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News