×
Ad

ಸರ್ಕಾರ ನನ್ನ ಬಗ್ಗೆ ʼನೆಗೆಟಿವ್‌ʼ ಅಭಿಪ್ರಾಯ ಹೊಂದಿರುವುದು ನನ್ನ ಸ್ವಾತಂತ್ರ್ಯಕ್ಕೆ ಸಾಕ್ಷಿ: ನ್ಯಾ. ಅಕಿಲ್‌ ಕುರೇಶಿ

Update: 2022-03-06 14:37 IST

ಜೈಪುರ್: ನನ್ನ ನ್ಯಾಯಾಂಗ ತೀರ್ಮಾನದಿಂದಾಗಿ ಸರ್ಕಾರವು ನನ್ನ ಬಗ್ಗೆ ನಕರಾತ್ಮಕ ಅಭಿಪ್ರಾಯವನ್ನು ಹೊಂದಿರುವುದು ನನ್ನ ನ್ಯಾಯಾಂಗ ಸ್ವಾತಂತ್ರ್ಯವನ್ನು ಸಾಬೀತುಪಡಿಸುತ್ತದೆ ಎಂದು ರಾಜಸ್ಥಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಕಿಲ್‌ ಕುರೇಶಿ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ. ರವಿವಾರ ಸೇವೆಯಿಂದ ನಿವೃತ್ತರಾಗುತ್ತಿರುವ ಕುರೇಶಿ, ʼಹೆಮ್ಮೆಯಿಂದʼ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ. 

ಶನಿವಾರ ಭಾವನಾತ್ಮಕ ಭಾಷಣ ಮಾಡಿದ ಕುರೇಶಿ, ʼನಾನು ತೆಗೆದ ಪ್ರತಿಯೊಂದು ತೀರ್ಮಾನವು ನನ್ನ ಕಾನೂನು ತಿಳುವಳಿಕೆಯಿಂದ ತೆಗೆದುಕೊಂಡಂತಹದ್ದು, ನಾನು ನೀಡುವ ತೀರ್ಪಿನ ಪರಿಣಾಮಗಳು ನನ್ನ ಮೇಲೆ ಬೀರಬಹುದೆಂಬ (ಭಯದಿಂದ) ಯಾವ ತೀರ್ಪನ್ನೂ ನಾನು ನೀಡಿಲ್ಲ ಎಂಬ ಹೆಮ್ಮೆಯೊಂದಿಗೆ ನಾನು ತೆರಳುತ್ತಿದ್ದೇನೆ. ನಾನು ನನ್ನ ಪ್ರಗತಿಗಾಗಿ (ವೈಯಕ್ತಿಕ ಹಿತಾಸಕ್ತಿ) ಏನನ್ನಾದರೂ ಮಾಡಬೇಕಿತ್ತೆಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ, ಇದು ನೀವು ಪ್ರಗತಿ ಎಂದು ಯಾವುದನ್ನು ಕರೆಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆʼ ಎಂದು ಹೇಳಿದ್ದಾರೆ.  

ʼನಾನು ಹೋದಲ್ಲೆಲ್ಲಾ ವಕೀಲರು ಮತ್ತು ಸಹೋದ್ಯೋಗಿಗಳಿಂದ ನನಗೆ ಸಿಕ್ಕಿರುವ ಪ್ರೀತಿ ಮತ್ತು ವಾತ್ಸಲ್ಯವು ಯಾವುದೇ ಪ್ರಗತಿಯ ಗ್ರಹಿಕೆಯನ್ನು ಮೀರಿಸುತ್ತದೆ. ನಾನು ಯಾವುದರೊಂದಿಗೂ ಇದನ್ನು ವಿನಿಮಯ ಮಾಡಿಕೊಳ್ಳುವುದಿಲ್ಲ. ನಿಮ್ಮೆಲ್ಲರ ಪ್ರೀತಿ ಮತ್ತು ʼಪ್ರಗತಿʼ ಎಂದು ಕರೆಯಲ್ಪಡುವುದರ ನಡುವೆ ನಾನು ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕಾದರೆ, ನಾನು ಸಂತೋಷದಿಂದ ಮೊದಲಿನದನ್ನು ಆರಿಸಿಕೊಳ್ಳುತ್ತೇನೆ.ʼ ಎಂದು ಕುರೇಶಿ ಹೇಳಿದ್ದಾರೆ.  

ನಿವೃತ್ತ ಸಿಜೆಐ, ರಾಜ್ಯ ಸಭಾ ಸದಸ್ಯ ರಂಜನ್‌ ಗೊಗೋಯ್‌ ಅವರ ಆತ್ಮಚರಿತ್ರೆಯಲ್ಲಿ ಕೆಲವು ಭಾಗಗಳನ್ನು ಉಲ್ಲೇಖಿಸಿದ ಕುರೇಶಿ, ʼಇತ್ತೀಚೆಗೆ ಮಾಜಿ ಸಿಜೆಐ ಅವರ ಜೀವನ ಚರಿತ್ರೆ ಬರೆದರು. ನಾನು ಅದನ್ನು ಓದಿಲ್ಲ, ಆದರೆ, ಮಾಧ್ಯಮಗಳಲ್ಲಿ ಅದರಲ್ಲಿನ ಕೆಲವು ಅಧ್ಯಾಯಗಳ ಬಗ್ಗೆ ಬರೆದಿರುವುದನ್ನು ಓದಿದ್ದೇನೆ. ನನ್ನ ನ್ಯಾಯಾಂಗ ನಿರ್ಧಾರಗಳ ಬಗ್ಗೆ ಸರ್ಕಾರಕ್ಕೆ ನನ್ನ ಬಗ್ಗೆ ಇದ್ದ ನಕರಾತ್ಮಕ ಧೋರಣೆಯಿಂದಾಗಿ ಮಧ್ಯಪ್ರದೇಶ ಮುಖ್ಯ ನ್ಯಾಯಮೂರ್ತಿಯಾಗಿ ಬಂದ ನನ್ನ ಶಿಫಾರಸ್ಸನ್ನು ತ್ರಿಪುರಾಕ್ಕೆ ಬದಲಿಸಲಾಯಿತು ಎಂದು ಅದರಲ್ಲಿ ಬರೆದಿರುವುದಾಗಿ ಮಾಧ್ಯಮಗಳಲ್ಲಿ ಓದಿದ್ದೇನೆ. 

ನನ್ನ ನ್ಯಾಯಾಂಗ ತೀರ್ಮಾನಗಳು ಸರ್ಕಾರಕ್ಕೆ ನನ್ನ ಬಗ್ಗೆ ಋಣಾತ್ಮಕ ಅಭಿಪ್ರಾಯ ಹೊಂದುವಂತೆ ಮಾಡಿದ್ದರೆ, ಅದನ್ನು ನನ್ನ ನ್ಯಾಯಾಂಗ ಸ್ವತಂತ್ರಕ್ಕೆ ಸಿಕ್ಕ ಪ್ರಮಾಣಪತ್ರವೆಂದು ನಾನು ಭಾವಿಸುತ್ತೇನೆ ಎಂದು ಜೋಧ್‌ಪುರದಲ್ಲಿರುವ ಹೈಕೋರ್ಟ್‌ ಪೀಠದಲ್ಲಿ ಮಾತನಾಡುತ್ತಾ ಕುರೇಶಿ ಹೇಳಿದ್ದಾರೆ. 
 
ಮಾಜಿ ಸಿಜೆಐ ರಂಜನ್‌ ಗೊಗೊಯ್ ಅವರ ಜೀವನಚರಿತ್ರೆಯಲ್ಲಿ‌, ನ್ಯಾಯಾಧೀಶರೊಬ್ಬರನ್ನು ಅವರ ನ್ಯಾಯಾಂಗದ ತೀರ್ಮಾನಗಳ ಆಧಾರದ ಮೇಲೆ ಸರ್ಕಾರಕ್ಕೆ ನಕರಾತ್ಮಕ ಅಭಿಪ್ರಾಯ ಇದ್ದು, ಈ ಕಾರಣದಿಂದ ಮಧ್ಯಪ್ರದೇಶ ಮುಖ್ಯ ನ್ಯಾಯಮೂರ್ತಿಯಾಗಲು ಬಂದಿದ್ದ ಶಿಫಾರಸ್ಸನ್ನು ತ್ರಿಪುರಾಗೆ ಬದಲಾಯಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದನ್ನೇ ಕುರೇಶಿ ತಮ್ಮ ವಿದಾಯ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. 

ತನ್ನ ಪ್ರತಿಯೊಂದು ನಿರ್ಧಾರವು (ತೀರ್ಪುಗಳು) ತನ್ನ ಕಾನೂನು ತಿಳುವಳಿಕೆಯನ್ನು ಆಧರಿಸಿರುವುದರಿಂದ ತನಗೆ ಯಾವುದೇ ವಿಷಾದ ಇಲ್ಲ ಎಂದು ಹೇಳಿದ ಕುರೇಶಿ, ನೇರ ಮಾರ್ಗಗಳ ಮೂಲಕ ಸಾಧಿಸಿದ ಯಶಸ್ಸು ಮಧುರವಾಗಿರುತ್ತದೆ ಎಂದು ಕಿರಿಯ ವಕೀಲರಿಗೆ ಸಲಹೆ ನೀಡಿದ್ದಾರೆ. "ರಾಜಿ ಮಾಡಿಕೊಂಡು ಸಿಗುವ ಯಶಸ್ಸಿಗಿಂತ ತತ್ವಬದ್ಧ ಜೀವನದಿಂದ ಉಂಟಾಗುವ ವೈಫಲ್ಯವು ಹೆಚ್ಚು ತೃಪ್ತಿಕರವಾಗಿದೆ" ಎಂದು ಅವರು ಹೇಳಿದ್ದಾರೆ.

ಗುಜರಾತ್‌ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಕುರೇಶಿಯನ್ನು ಬಾಂಬೆ ಹೈಕೋರ್ಟಿಗೆ ವರ್ಗಾವಣೆ ಮಾಡಲಾಗಿತ್ತು. ಬಾಂಬೆ ಹೈಕೋರ್ಟ್‌ನಿಂದ ಮಧ್ಯಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕುರೇಶಿ ಅವರನ್ನು ನೇಮಿಸುವ ಕೊಲಿಜಿಯಂ ಶಿಫಾರಸನ್ನು ಸರ್ಕಾರ ಒಪ್ಪಿರಲಿಲ್ಲ. ಬಳಿಕ ಕೊಲೀಜಿಯಮ್‌ ನಾಲ್ವರು ನ್ಯಾಯಮೂರ್ತಿಗಳನ್ನು ಹೊಂದಿರುವ ತ್ರಿಪುರಾ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿತ್ತು. ಕುರೇಶಿ ಅವರ ನಿವೃತ್ತಿಗೂ ಆರು ತಿಂಗಳು ಮುನ್ನ ಅವರನ್ನು ರಾಜಸ್ಥಾನದ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲಾಗಿತ್ತು.  ಗುಜರಾತ್‌ ಹೈಕೋರ್ಟಿನಲ್ಲಿದ್ದಾಗ ಸರ್ಕಾರ ನಡೆಸಿದ ನಕಲಿ ಎನ್‌ಕೌಂಟರ್‌ ಗಳ ಕುರಿತ ಪ್ರಕರಣವನ್ನು ಕುರೇಶಿ ವಿಚಾರಣೆ ನಡೆಸುತ್ತಿದ್ದರು. 2010ರಲ್ಲಿ ಸೊಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಈಗಿನ ಗೃಹಸಚಿವ ಅಮಿತ್‌ ಶಾ ರನ್ನು ಅಕಿಲ್‌ ಕುರೇಶಿ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದರು.
 
ನ್ಯಾಯಮೂರ್ತಿ ಅಕಿಲ್ ಕುರೇಶಿ ಅವರ ಅಧಿಕಾರಾವಧಿ ಮತ್ತು ವರ್ಗಾವಣೆಗಳು ಇತ್ತೀಚಿನ ದಿನಗಳಲ್ಲಿ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ದೇಶದ ಹೈಕೋರ್ಟ್‌ಗಳಲ್ಲಿ ಹಿರಿಯ ನ್ಯಾಯಾಧೀಶರಾಗಿರುವ ಕುರೇಶಿ ಅವರನ್ನು ವರ್ಗಾವಣೆ ಮಾಡಿರುವ ರೀತಿ ಹಾಗೂ ಸುಪ್ರೀಂ ಕೋರ್ಟ್‌ ಗೆ ಅವರನ್ನು ಉನ್ನತೀಕರಿಸಲು ನಿರಾಕರಿಸಿದ್ದರ ಬಗ್ಗೆ ಹಲವು ಹಿರಿಯ ವಕೀಲರು ಆಕ್ಷೇಪಿಸಿದ್ದಾರೆ.  
 
ಗುಜರಾತ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುಭಾಷ್‌ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಉನ್ನತೀಕರಿಸಿದಾಗ ತೆರವಾದ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹಂಗಾಮಿಯಾಗಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಕುರೇಶಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ, ಕುರೇಶಿ ಅವರನ್ನು ಅಲ್ಲಿಂದ ಬಾಂಬೆ ಹೈಕೋರ್ಟ್‌ಗೆ ವರ್ಗಾಯಿಸಿ ಗುಜರಾತ್‌ ಮುಖ್ಯ ನ್ಯಾಯಮೂರ್ತಿ ಆಗದಂತೆ ನೋಡಿಕೊಳ್ಳಲಾಗಿತ್ತು.

ನಿಯಮದ ಪ್ರಕಾರ, ಹೊಸ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸುವವರೆಗೆ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು ಸ್ವಯಂಚಾಲಿತವಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ.
 
ಹೀಗಿದ್ದರೂ, ಅಕ್ಟೋಬರ್ 29, 2018 ರಂದು ಅಂಗೀಕರಿಸಿದ ನಿರ್ಣಯದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಕುರೇಶಿ ಅವರನ್ನು ಬಾಂಬೆ ಹೈಕೋರ್ಟ್‌ಗೆ (ಕಿರಿಯ) ನ್ಯಾಯಾಧೀಶರನ್ನಾಗಿ ವರ್ಗಾಯಿಸಲು ಶಿಫಾರಸು ಮಾಡಿತು. ಈ ಶಿಫಾರಸಿಗೆ ಕಾರಣಗಳು ಅಸ್ಪಷ್ಟವಾಗಿದ್ದರೂ, ಕೊಲಿಜಿಯಂ ನಿರ್ಣಯವು "ಉತ್ತಮ ನ್ಯಾಯದ ಹಿತದೃಷ್ಟಿಯಿಂದ" ಇದನ್ನು ಮಾಡಲಾಗಿದೆ ಎಂದು ಹೇಳಿತ್ತು.

ಅವರ ವರ್ಗಾವಣೆಯನ್ನು ನವೆಂಬರ್ 1 ರಂದು ಅವರಿಗೆ ತಿಳಿಸಲಾಗಿತ್ತು ಹಾಗೂ ನವೆಂಬರ್ 15 ರೊಳಗೆ ಬಾಂಬೆ ಹೈಕೋರ್ಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಉನ್ನತೀಕರಿಸಿದ ನಂತರ ಕುರೇಶಿ ಕೇವಲ ಎರಡು ವಾರಗಳ ಕಾಲ ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದರು.

ಆದರೆ ಕೇಂದ್ರವು ಈ ಅಲ್ಪಾವಧಿಯ ಅವಧಿಗೆ ಕೂಡಾ ಮುಖ್ಯ ನ್ಯಾಯಮೂರ್ತಿಯಾಗಿರಲು ಬಿಡಲಿಲ್ಲ. ಕುರೇಶಿ ಬದಲು ಎರಡನೇ ಹಿರಿಯ ನ್ಯಾಯಾಧೀಶ ನ್ಯಾಯಮೂರ್ತಿ ಎಎಸ್ ದವೆ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ನೋಟಿಸ್‌ ನೀಡಲಾಯಿತು. 

ಇದು, ಎಲ್ಲಾ ರೂಢಿಗಳನ್ನು ಮುರಿದಂತೆ ತೋರುವ ಈ ನಿರ್ದಾರವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಕೂಡಾ ಆಕ್ಷೇಪ ಸಲ್ಲಿಸಿತ್ತು. ಬಳಿಕ, ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಎರಡು ವಾರಗಳ ಅಲ್ಪಾವಧಿಗೆ ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಕುರೇಶಿ ಅವರನ್ನು ನೇಮಕ ಮಾಡುವ ಹೊಸ ಅಧಿಸೂಚನೆಯನ್ನು ಕೇಂದ್ರವು ಹೊರಡಿಸಿತು.

ಅದಾಗಿ, ಮೇ 2019 ರಲ್ಲಿ, ಬಾಂಬೆ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಮೂರ್ತಿ ಕುರೇಶಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿತು. ಆಗಸ್ಟ್ 2019 ರಲ್ಲಿ ನ್ಯಾಯಮೂರ್ತಿ ಕುರೇಶಿ ಅವರ ಫೈಲ್ ಅನ್ನು ಸುಪ್ರೀಂ ಕೋರ್ಟ್‌ ಹಿಂದಕ್ಕೆ ಕಳುಹಿಸಿತ್ತು. ತದನಂತರ, ಸೆಪ್ಟೆಂಬರ್ 20 ರಂದು ಕೊಲಿಜಿಯಂ ತನ್ನ ಹಿಂದಿನ ನಿರ್ಣಯವನ್ನು ಮಾರ್ಪಡಿಸಿ  ಮಧ್ಯಪ್ರದೇಶ ಹೈಕೋರ್ಟ್‌ನ ಬದಲಿಗೆ ತ್ರಿಪುರಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಕುರೇಶಿ ಅವರನ್ನು ನೇಮಿಸಲು ನಿರ್ಧರಿಸಿತು.

2018 ಮತ್ತು 2019 ರ ಈ ಎರಡೂ ಪ್ರಕರಣಗಳು ನ್ಯಾಯಾಂಗದ ಮೇಲಿನ ಹಸ್ತಕ್ಷೇಪದ ಕುರಿತಂತೆ ಸಾಕಷ್ಟು ಆಕ್ಷೇಪಣೆಯನ್ನು, ಚರ್ಚೆಯನ್ನು ಉಂಟುಮಾಡಿದವು. ಗುಜರಾತ್ ಹೈಕೋರ್ಟ್ ವಕೀಲರ ಸಂಘವು ಸುಪ್ರೀಂ ಕೋರ್ಟ್‌ಗೆ ಈ ಎರಡೂ ಸಂದರ್ಭದಲ್ಲಿ ಅರ್ಜಿಗಳನ್ನು ಸಲ್ಲಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News