×
Ad

ಹೊಸದಿಲ್ಲಿಗೆ ಅನಿಫ್ರೆಡ್, ಉಕ್ರೇನಿನ ಪಲ್ಟೋವಾದಲ್ಲಿ ಗ್ಲೆನ್‌ವಿಲ್

Update: 2022-03-06 20:48 IST

ಉಡುಪಿ: ಯುದ್ಧಪೀಡಿತ ಉಕ್ರೇನಿನಲ್ಲಿದ್ದ ಉಡುಪಿಯ ಆರನೇ ವಿದ್ಯಾರ್ಥಿ ಕಲ್ಯಾಣಪುರದ ಅನಿಫ್ರೆಡ್ ರಿಡ್ಲೆ ಡಿಸೋಜ ಅವರು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಇಂದು ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವುದಾಗಿ ಉಡುಪಿ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ದೊರೆತಿದೆ.

ಜಿಲ್ಲಾಡಳಿತದ ಬಳಿ ಇರುವ ಅಧಿಕೃತ ಮಾಹಿತಿಯಂತೆ ಇದೀಗ ಉಕ್ರೇನಿನಲ್ಲಿರುವ ಜಿಲ್ಲೆಯ ಏಳನೇ ಹಾಗೂ ಕೊನೆಯ ವಿದ್ಯಾರ್ಥಿ ಕೆಮ್ಮಣ್ಣಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಇದೀಗ ಬಸ್‌ನಲ್ಲಿ ಹಂಗೇರಿ ಗಡಿಯತ್ತ ಪ್ರಯಾಣಿಸುತ್ತಿದ್ದು ಈಗ ಖಾರ್ಕೀವ್ ಸಮೀಪದ ಪೆಸೊಟಿನ್‌ನಿಂದ ಬಸ್‌ನಲ್ಲಿ ಪಲ್ಟೋವಾ ನಗರ ತಲುಪಿದ್ದಾರೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.

ಖಾರ್ಕೀವ್‌ನಿಂದ ರೈಲಿನಲ್ಲಿ ಪ್ರಯಾಣಿಸಿ ಗಡಿಭಾಗದ ಲೈವ್‌ಗೆ ಬಂದಿದ್ದ ಅನಿಫ್ರೆಡ್ ರಿಡ್ಲೆ ಡಿಸೋಜ, ಅಲ್ಲಿಂದ ಹಂಗೇರಿಯ ಬುಡಾಪೆಸ್ಟ್ ತಲುಪಿದ್ದರು. ಅಲ್ಲಿಂದ ನಿನ್ನೆ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸಿದ್ದ ಅವರು ಇಂದು ಹೊಸದಿಲ್ಲಿ ತಲುಪಿದ್ದಾರೆ ಎಂದು ತಿಳಿದುಬಂದಿದೆ.

ಕೆಮ್ಮಣ್ಣುವಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಭಾರತೀಯ ಧೂತಾವಾಸದ ನಿರ್ದೇಶನದಂತೆ ಪೆಸೊಚಿನ್ ಪಟ್ಟಣದಿಂದ ಬಸ್‌ನಲ್ಲಿ ಸ್ನೇಹಿತರೊಂದಿಗೆ ಉಕ್ರೇನ್ ಗಡಿಭಾಗದತ್ತ ಹೊರಟಿದ್ದು, ರವಿವಾರ ಪಲ್ಟೋವಾ ನಗರ ತಲುಪಿದ್ದಾರೆ ಎಂದು ಹೇಳಲಾಗಿದೆ. ಅವರು ಎರಡು-ಮೂರು ದಿನಗಳಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆ ಇದೆ.

ಇದರೊಂದಿಗೆ ಯುದ್ಧಗ್ರಸ್ಥ ಉಕ್ರೇನ್‌ನಲ್ಲಿದ್ದ ಉಡುಪಿಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಆರು ಮಂದಿ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದಂತಾಗಿದೆ. ಬ್ರಹ್ಮಾವರದ ರೋಹನ್ ಧನಂಜಯ ಶನಿವಾರ ಮನೆ ತಲುಪಿದ್ದರೆ, ಉದ್ಯಾವರದ ಮೃಣಾಲ್ ಫೆ.28ರಂದು, ಉಡುಪಿಯ ನಂದಿನಿ ಅರುಣ್ ಮಾ.1ರಂದು, ಪರ್ಕಳದ ನಿಯಮ್ ರಾಘವೇಂದ್ರ, ನಾವುಂದದ ಅಂಕಿತಾ ಜಗದೀಶ್ ಪೂಜಾರಿ ಅವರು ಮಾ.3ರಂದು ತಮ್ಮ ತಮ್ಮ ಮನೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News