ಸುರಕ್ಷತೆಗಾಗಿ 1,000 ಕಿ.ಮೀ. ಏಕಾಂಗಿಯಾಗಿ ಪ್ರಯಾಣಿಸಿದ 11 ವರ್ಷದ ಉಕ್ರೇನ್ ಬಾಲಕ
ಹೊಸದಿಲ್ಲಿ: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧದ ಮಧ್ಯೆ 11 ವರ್ಷದ ಉಕ್ರೇನಿಯನ್ ಬಾಲಕನೊಬ್ಬ ತಾಯಿ ಕೊಟ್ಟ ಚೀಟಿ, ತನ್ನ ಕೈಯಲ್ಲಿ ದೂರವಾಣಿ ಸಂಖ್ಯೆ ಬರೆದುಕೊಂಡು 1,000 ಕಿ.ಮೀ ದೂರವನ್ನು ಸ್ವತಃ ಪ್ರಯಾಣಿಸಿ ಸ್ಲೋವಾಕಿಯಾವನ್ನು ದಾಟಿದ್ದಾನೆ.
ಬಾಲಕ ಕಳೆದ ವಾರ ರಷ್ಯಾದ ಪಡೆಗಳು ವಶಪಡಿಸಿಕೊಂಡ ವಿದ್ಯುತ್ ಸ್ಥಾವರದ ಸ್ಥಳವಾಗಿರುವ ಆಗ್ನೇಯ ಉಕ್ರೇನ್‌ನ ಝಪೊರಿಝಿಯಾದಿಂದ ಬಂದಿದ್ದಾನೆ. ವರದಿಗಳ ಪ್ರಕಾರ, ಅನಾರೋಗ್ಯದ ಸಂಬಂಧಿಯನ್ನು ನೋಡಿಕೊಳ್ಳಲು ಬಾಲಕನ ಪೋಷಕರು ಉಕ್ರೇನ್ ನಲ್ಲೇ ಉಳಿದುಕೊಂಡಿದ್ದಾರೆ.
ಬಾಲಕನು ನಂಬಲಾಗದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಅಧಿಕಾರಿಗಳ ಮನ ಗೆದ್ದಿದ್ದಾನೆ. ಈತ "ಕೊನೆಯ ರಾತ್ರಿಯ ದೊಡ್ಡ ಹೀರೋ" ಎಂದು ಸ್ಲೋವಾಕಿಯಾದ ಆಂತರಿಕ ಸಚಿವಾಲಯವು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದೆ.
ಹುಡುಗನ ತಾಯಿ ಬಾಲಕನನ್ನು ರೈಲಿನಲ್ಲಿ ಸ್ಲೋವಾಕಿಯಾಕ್ಕೆ ಕಳುಹಿಸಿಕೊಟ್ಟಿದ್ದರು. ಬಾಲಕನ ಬಳಿ ಪ್ಲಾಸ್ಟಿಕ್ ಚೀಲ, ಪಾಸ್ ಪೋರ್ಟ್ ಹಾಗೂ ಮಡಿಚಿದ ನೋಟಿನಲ್ಲಿ ಸಂದೇಶವಿತ್ತು.
ಹುಡುಗನು ಸ್ಲೋವಾಕಿಯಾಕ್ಕೆ ಬಂದಾಗ ಅವನ ಕೈಯಲ್ಲಿ ಫೋನ್ ಸಂಖ್ಯೆಯನ್ನು ಹೊರತುಪಡಿಸಿ ತನ್ನ ಪಾಸ್‌ಪೋರ್ಟ್‌ನಲ್ಲಿ ಮಡಿಸಿದ ಕಾಗದದ ತುಂಡನ್ನು ಹೊಂದಿದ್ದ. ಇದರಿಂದಾಗಿ ಗಡಿಯಲ್ಲಿರುವ ಅಧಿಕಾರಿಗಳು ರಾಜಧಾನಿ ಬ್ರಾಟಿಸ್ಲಾವಾದಲ್ಲಿರುವ ಬಾಲಕನ ಸಂಬಂಧಿಕರನ್ನು ಸಂಪರ್ಕಿಸಿ ಮತ್ತು ಅವನನ್ನು ಒಪ್ಪಿಸಲು ಸಾಧ್ಯವಾಯಿತು.
ಹುಡುಗನ ತಾಯಿ ಸ್ಲೋವಾಕಿಯಾ ಸರಕಾರ ಹಾಗೂ ಪೋಲೀಸರನ್ನು ಕಾಳಜಿ ವಹಿಸಿದ್ದಕ್ಕಾಗಿ ಧನ್ಯವಾದಗಳನ್ನು ಕಳುಹಿಸಿದ್ದಾರೆ.
ಸ್ಲೋವಾಕಿಯಾದ ಆಂತರಿಕ ಸಚಿವಾಲಯವು ಹುಡುಗನ ಬಗ್ಗೆ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಅನ್ನು ಪೋಸ್ಟ್ ಮಾಡಿದೆ. ಅವನ "ನಿರ್ಭಯತೆ ಮತ್ತು ದೃಢನಿಶ್ಚಯ" ವನ್ನು ಶ್ಲಾಘಿಸಿದೆ.
" ಬಾಲಕನ ಪೋಷಕರು ಉಕ್ರೇನ್‌ನಲ್ಲಿ ಉಳಿಯಬೇಕಾಗಿದ್ದರಿಂದಾಗಿ ಪ್ಲಾಸ್ಟಿಕ್ ಚೀಲ, ಪಾಸ್‌ಪೋರ್ಟ್ ಹಾಗೂ ಫೋನ್ ಸಂಖ್ಯೆಯೊಂದಿಗೆ ಏಕಾಂಗಿಯಾಗಿ ಬಾಲಕ ಆಗಮಿಸಿದ್ದ . ಸ್ವಯಂಸೇವಕರು ಅವನನ್ನು ಸ್ವಇಚ್ಛೆಯಿಂದ ನೋಡಿಕೊಂಡರು. ಬೆಚ್ಚಗಿನ ಸ್ಥಳಕ್ಕೆ ಕರೆದೊಯ್ದು ಆಹಾರ ಮತ್ತು ಪಾನೀಯಗಳನ್ನು ಒದಗಿಸಿದರು" ಎಂದು ಸಚಿವಾಲಯ ಹೇಳಿದೆ.