×
Ad

ತಮಿಳುನಾಡು: 20 ವರ್ಷಗಳಿಂದ ಆಟೋ ಚಾಲಕರಾಗಿರುವ ಸರವಣನ್ ಈಗ ಕುಂಬಕೋಣಂನ ಪ್ರಥಮ ಮೇಯರ್ ಆಗಿ ಅಧಿಕಾರ ಸ್ವೀಕಾರ

Update: 2022-03-07 18:03 IST
Photo: Indianexpress.com

ಹೊಸದಿಲ್ಲಿ: ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಬಕೋಣಂ ಎಂಬಲ್ಲಿ ಕಳೆದ 20 ವರ್ಷಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿರುವ  42 ವರ್ಷದ ಕೆ ಸರವಣನ್ ಅವರು  ಕುಂಬಕೋಣಂ ಕಾರ್ಪೊರೇಷನ್‍ನ ಮೊದಲ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಕಳೆದ ಶುಕ್ರವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅವರು ತಮ್ಮ ಆಟೋ ಚಲಾಯಿಸಿಕೊಂಡೇ ಆಗಮಿಸಿದ್ದರು. ಇತ್ತೀಚೆಗಷ್ಟೇ ಕುಂಬಕೋಣಂ ಸ್ಥಳೀಯಾಡಳಿತವು ಕಾರ್ಪೊರೇಷನ್ ಆಗಿ ಮೇಲ್ದರ್ಜೆಗೇರಿತ್ತು.

ನಗರದ 17ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಸರವಣನ್ ಅವರು  ಒಟ್ಟು 2,100 ಮತಗಳ ಪೈಕಿ 964 ಮತಗಳನ್ನು ಪಡೆದಿದ್ದರು.

ತಂಜಾವೂರು ಉತ್ತರ ಕಾಂಗ್ರೆಸ್ ಸಮಿತಿಯ ನಾಯಕ ಟಿ ಆರ್ ಲೋಗನಾಥನ್ ತಮಗೆ ಕರೆ ಮಾಡಿ ನಿಮಗೊಂದು ಅಚ್ಚರಿಯಿದೆ ಎಂದು ತಿಳಿಸಿದ್ದರು ಪಕ್ಷದ ಕಚೇರಿಗೆ ತೆರಳಿದಾಗ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು ಎಂದು ಸರವಣನ್ ಹೇಳಿದ್ದಾರೆ.

ಹತ್ತನೇ ತರಗತಿ ತನಕ ಕಲಿತಿರುವ ಸರವಣನ್ ಸಣ್ಣ ವಯಸ್ಸಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡಿದ್ದರು ಹಾಗೂ ಅಜ್ಜ ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದರು. ಅವರ ಅಜ್ಜ ಟಿ ಕುಮಾರಸ್ವಾಮಿ ಕುಂಬಕೋಣಂ ಮುನಿಸಿಪಾಲಿಟಿ ಸದಸ್ಯರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಅವರಿಂದ ಪ್ರೇರಿತರಾಗಿ ಸರವಣನ್ 2002ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ವಾರ್ಡ್ ನಾಯಕನಾಗಿ ನಂತರ ಆಯ್ಕೆಯಾದ ಅವರು ಮುನಿಸಿಪಾಲಿಟಿ ವ್ಯಾಪ್ತಿಯ ಪಕ್ಷದ ಉಪನಾಯಕನಾಗಿಯೂ ಸೇವೆ ಸಲ್ಲಿಸಿದ್ದರು.

ತಮ್ಮ ಪತ್ನಿ ದೇವಿ ಹಾಗೂ ಮೂವರು ಮಕ್ಕಳೊಂದಿಗೆ ಅವರು ತುಕ್ಕಂಪಾಳಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಮೇಯರ್ ಆಗಿ ನಗರದ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಲು, ಹಾನಿಗೊಂಡ ರಸ್ತೆಗಳ ದುರಸ್ತಿಪಡಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News