ಉಕ್ರೇನ್ ನಲ್ಲಿ ತಾನು ಸಾಕುತ್ತಿರುವ ಚಿರತೆ ಮರಿಗಳನ್ನು ಬಿಟ್ಟು ಬರಲು ಒಪ್ಪದ ಭಾರತೀಯ ವೈದ್ಯ
ಹೊಸದಿಲ್ಲಿ: ಉಕ್ರೇನ್ ನ ದೊನ್ಬಸ್ ಪ್ರಾಂತ್ಯದ ಸೆವೆರೊಡೊನೆಟ್ಸ್ಕ್ ನಗರದ ತಮ್ಮ ಮನೆಯ ತಳಭಾಗದಲ್ಲಿರುವ ಬಂಕರ್‍ನಲ್ಲಿ ಆಶ್ರಯ ಪಡೆದಿರುವ ಭಾರತೀಯ ಮೂಲದ ಡಾ. ಗಿರಿಕುಮಾರ್ ಪಾಟೀಲ್ ಅಲ್ಲಿ ತಮ್ಮ ಎರಡು ಸಾಕು ಪ್ರಾಣಿಗಳಾದ ಒಂದು ಚಿರತೆ ಮತ್ತು ಚಿಟ್ಟೆ ಹುಲಿಯೊಂದಿಗಿದ್ದಾರೆ. ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಅವರು ತಾಯ್ನಾಡಿಗೆ ವಾಪಸಾಗಲು ಮನಸ್ಸು ಮಾಡುತ್ತಿಲ್ಲ.
"ನನ್ನ ಜೀವ ಉಳಿಸುವ ಸಲುವಾಗಿ ನನ್ನ ಸಾಕು ಪ್ರಾಣಿಗಳನ್ನು ನಾನು ತ್ಯಜಿಸುವುದಿಲ್ಲ. ನನ್ನ ಕುಟುಂಬ ವಾಪಸಾಗಲು ಆಗ್ರಹಿಸುತ್ತಿದೆ ಆದರೆ ನನ್ನ ಸಾಕು ಪ್ರಾಣಿಗಳು ನನ್ನ ಮಕ್ಕಳಿದ್ದಂತೆ. ಅವುಗಳ ಜತೆಗಿದ್ದು ಅವುಗಳನ್ನು ನನ್ನ ಕೊನೆಯುಸಿರು ಇರುವವರೆಗೆ ರಕ್ಷಿಸುತ್ತೇನೆ" ಎಂದು ಅವರು ಹೇಳುತ್ತಾರೆ.
ಡಾ ಪಾಟೀಲ್ ಅವರು 2007ರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲೆಂದು ಉಕ್ರೇನ್‍ಗೆ ತೆರಳಿ ನಂತರ ಡೊನ್ಬಾಸ್ ಪ್ರಾಂತ್ಯದ ಸರಕಾರಿ ಆಸ್ಪತ್ರೆಯಲ್ಲಿ ಮೂಳೆತಜ್ಞರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.
ನಂತರ ಸ್ಥಳೀಯ ಪ್ರಾಣಿಸಂಗ್ರಹಾಲಯದಲ್ಲಿ ಅವರು ಅನಾಥ ಮತ್ತು ಅಸೌಖ್ಯಪೀಡಿತ ಚಿರತೆಯನ್ನು ನೋಡಿದ ಅವರು ಅಲ್ಲಿನ ಅಧಿಕಾರಿಗಳ ಅನುಮತಿಯೊಂದಿಗೆ ಅದನ್ನು ದತ್ತು ಪಡೆದು ಯಶ ಎಂಬ ಹೆಸರಿಟ್ಟಿದ್ದರು. ಎರಡು ತಿಂಗಳ ನಂತರ ಯಶಾಗೆ ಜತೆಯಾಗಲು ಅವರು ಚಿಟ್ಟೆ ಹುಲಿ ಸಬ್ರೀನಾ ಅನ್ನು ದತ್ತು ಪಡೆದಿದ್ದರು.
ತಮ್ಮ ಬಂಕರ್‍ನಿಂದ ಆಹಾರ ತರಲೆಂದು ಮಾತ್ರ ಅವರು ಹೊರಬರುತ್ತಾರೆ. ಗಂಡು ಚಿರತೆಗೆ 20 ತಿಂಗಳು ವಯಸ್ಸಾಗಿದ್ದರೆ ಇನ್ನೊಂದು ಹೆಣ್ಣು ಚಿಟ್ಟೆ ಹುಲಿಯ ವಯಸ್ಸು ಆರು ತಿಂಗಳು.
ಪಾಟೀಲ್ ಬಳಿ ಮೂರು ಇಟಾಲಿಯನ್ ಮಸ್ಟಿಫ್ಸ್ ನಾಯಿಗಳೂ ಇವೆ ಹಾಗೂ ಅವುಗಳಿಗಾಗಿ ತಮ್ಮ ಯುಟ್ಯೂಬ್ ವಾಹಿನಿಯಿಂದ ಹಣ ಸಂಗ್ರಹಿಸುತ್ತಾರೆ. ಅವರ ಯುಟ್ಯೂಬ್ ವಾಹಿನಿಗೆ 84,000ಕ್ಕೂ ಅಧಿಕ ಚಂದಾದಾರಿದ್ಧಾರೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತನಕು ಎಂಬಲ್ಲಿಯವರಾಗಿರುವ ಡಾ ಪಾಟೀಲ್, ಭಾರತ ಸರಕಾರ ತಮ್ಮ ಸಾಕು ಪ್ರಾಣಿಗಳೊಂದಿಗೆ ತಮಗೆ ತಾಯ್ನಾಡಿಗೆ ಮರಳಲು ಅವಕಾಶ ಕಲ್ಪಿಸುವುದೆಂದು ಆಶಾಭಾವನೆ ಹೊಂದಿದ್ಧಾರೆ.
ಕಳೆದ ವಾರ ಡೆಹ್ರಾಡೂನ್ ನಿವಾಸಿ ರಿಷಬ್ ಕೌಶಿಕ್ ತಮ್ಮ ಸಾಕು ನಾಯಿ ಮಲಿಬೂ ಜತೆಗೆ ತವರೂರಿಗೆ ವಾಪಸಾಗಿದ್ದರು.