ಉಕ್ರೇನ್ ಬಿಕ್ಕಟ್ಟು: ಪ್ರಚಾರದಲ್ಲಿ ತೊಡಗದೆ ನಿಮ್ಮ ನೈಜ ಕರ್ತವ್ಯ ನಿಭಾಯಿಸಿ ಎಂದು ಕೇಂದ್ರಕ್ಕೆ ಕಾಂಗ್ರೆಸ್‌ ಸಲಹೆ

Update: 2022-03-07 17:20 GMT

ಹೊಸದಿಲ್ಲಿ,ಮಾ.7: ಯುದ್ಧಗ್ರಸ್ತ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಸೋಮವಾರ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್,‘ಪಕ್ಷಪಾತದ ಪ್ರಚಾರ ’ದಲ್ಲಿ ತೊಡಗದೆ ಭಾರತೀಯರನ್ನು ವಾಪಸ್ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಸರಕಾರಕ್ಕೆ ಸೂಚಿಸಿದೆ.

ಉಕ್ರೇನ್‌ನಲ್ಲಿ  ನಡೆಯುತ್ತಿರುವ ಯುದ್ಧವನ್ನು ತಕ್ಷಣ ಅಂತ್ಯಗೊಳಿಸಬೇಕು ಎಂದು ಹೇಳಿದ ಪಕ್ಷವು,ನಾಗರಿಕರ ಸುರಕ್ಷಿತ ತೆರವಿಗಾಗಿ ಮಾನವೀಯ ಕಾರಿಡಾರ್‌ಗಳನ್ನು ರಚಿಸುವಂತೆ ಕರೆ ನೀಡಿದೆ.

ಉಕ್ರೇನ್‌ನಲ್ಲಿ ಮಿಲಿಟರಿ ಸಂಘರ್ಷವು ಉಲ್ಬಣಗೊಳ್ಳುತ್ತಿರುವ ಬಗ್ಗೆ ಪಕ್ಷವು ತೀವ್ರ ಹತಾಶಗೊಂಡಿದೆ. ಅಮಾಯಕ ಜೀವಗಳ ನಷ್ಟ,ವ್ಯಾಪಕ ವಿನಾಶ,ಜನರ ಸಾಮೂಹಿಕ ವಲಸೆ ಮತ್ತು ಉಲ್ಬಣಗೊಂಡಿರುವ ಮಾನವ ಸಂಕಷ್ಟಗಳು ಸೀಕಾರಾರ್ಹವಲ್ಲ. ಯುದ್ಧಗ್ರಸ್ತ ವಲಯಗಳಲ್ಲಿ ಸಿಕ್ಕಿಕೊಂಡಿರುವ ಸಹಸ್ರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳ ಸುರಕ್ಷತೆಯ ಕುರಿತು ಪಕ್ಷವು ತೀವ್ರ ಕಳವಳಗೊಂಡಿದೆ ಎಂದು ಹೇಳಿಕೆಯೊಂದರಲ್ಲಿ ಕಾಂಗ್ರೆಸ್ ತಿಳಿಸಿದೆ.

ಶಾಂತಿಯನ್ನು ಮರುಸ್ಥಾಪಿಸಲು ಮತ್ತು ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ರಷ್ಯ,ಉಕ್ರೇನ್ ಮತ್ತು ನ್ಯಾಟೊ ಪ್ರಾಮಾಣಿಕತೆಯಿಂದ ಮಾತುಕತೆಗಳಲ್ಲಿ ತೊಡಗಿಕೊಳ್ಳಬೇಕು ಎಂದೂ ಕಾಂಗ್ರೆಸ್ ಹೇಳಿದೆ.

‘ನಮ್ಮ ಪ್ರಜೆಗಳನ್ನು ವಾಪಸ್ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಭಾರತವು ಈ ಹಿಂದೆ ಕೊಲ್ಲಿ,ಲೆಬನಾನ್,ಲಿಬಿಯಾ ಮತ್ತು ಇರಾಕ್ ಯುದ್ಧಗಳ ಸಂದರ್ಭದಲ್ಲಿ ಯಾವುದೇ ಪಕ್ಷಪಾತದ ಪ್ರಚಾರದಲ್ಲಿ ತೊಡಗದೇ ಭಾರತೀಯರನ್ನು ತೆರವುಗೊಳಿಸಲು ತನ್ನ ವಾಯುಪಡೆ ಮತ್ತು ನೌಕಾಪಡೆ ಮೂಲಕ ಬೃಹತ್ ಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸಿತ್ತು ಎನ್ನುವುದನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News