ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಗೆ 14 ದಿನಗಳ ನ್ಯಾಯಾಂಗ ಬಂಧನ

Update: 2022-03-07 16:36 GMT

ಮುಂಬೈ,ಮಾ.7: ಇಲ್ಲಿಯ ವಿಶೇಷ ನ್ಯಾಯಾಲಯವು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಫೆ.23ರಂದು ದಕ್ಷಿಣ ಮುಂಬೈನ ತನ್ನ ಕಚೇರಿಯಲ್ಲಿ ಐದು ಗಂಟೆಗಳ ಕಾಲ ಮಲಿಕ್ ವಿಚಾರಣೆಯ ಬಳಿಕ ಜಾರಿ ನಿರ್ದೇಶನಾಲಯ (ಈ.ಡಿ)ವು ಅವರನ್ನು ಬಂಧಿಸಿತ್ತು.

ಈ.ಡಿ.ಕಸ್ಟಡಿ ಅವಧಿ ಸೋಮವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮಲಿಕ್‌ರನ್ನು ವಿಶೇಷ ನ್ಯಾಯಾಧೀಶ ಆರ್.ಎನ್.ರೋಕಡೆ ಅವರ ಎದುರು ಹಾಜರು ಪಡಿಸಲಾಗಿತ್ತು. ಈ.ಡಿ.ಇನ್ನಷ್ಟು ಹೆಚ್ಚಿನ ಕಸ್ಟಡಿ ಅವಧಿಗೆ ಕೋರಿಕೊಳ್ಳದ್ದರಿಂದ ನ್ಯಾಯಾಲಯವು ಮಲಿಕ್‌ರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿತು.

ಈ.ಡಿ.ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆಯು ದಾವೂದ್ ಮತ್ತು ಇತರರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ಇತ್ತೀಚಿಗೆ ದಾಖಲಿಸಿಕೊಂಡಿರುವ ಎಫ್‌ಐಆರ್‌ನ್ನು ಆಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News