×
Ad

"ಕೋವಿಡ್ ಕಾರಣದಿಂದ ಪರೀಕ್ಷೆಗೆ ಹಾಜರಾಗಲಾಗದವರಿಗೆ ಮರು ಅವಕಾಶ ನೀಡುವ ವಿಷಯ ಅತ್ಯಂತ ಜಟಿಲವಾಗಿದೆ"

Update: 2022-03-07 22:29 IST

ಹೊಸದಿಲ್ಲಿ,ಮಾ.7: ಕೋವಿಡ್‌ನಿಂದಾಗಿ ಮುಖ್ಯ ಪರೀಕ್ಷೆಯನ್ನು ತಪ್ಪಿಸಿಕೊಂಡಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯತ್ನಕ್ಕೆ ಅವಕಾಶ ನೀಡುವ ವಿಷಯವು ಅತ್ಯಂತ ಜಟಿಲವಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು. ‌

2021ರ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ,ಆದರೆ ಕೋವಿಡ್ ಸೋಂಕಿಗೆ ತುತ್ತಾದ ಬಳಿಕ ಜನವರಿಯಲ್ಲಿ ನಡೆದಿದ್ದ ಮುಖ್ಯ ಪರೀಕ್ಷೆಯ ಎಲ್ಲ ಪೇಪರ್‌ಗಳಿಗೆ ಹಾಜರಾಗಲು ಸಾಧ್ಯವಾಗಿರದಿದ್ದ ಮೂವರು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗೆ ಯುಪಿಎಸ್ಸಿ ನೀಡಿರುವ ಉತ್ತರದಲ್ಲಿ ಇದನ್ನು ತಿಳಿಸಲಾಗಿದೆ. ಸಂವಿಧಾನದ ವಿಧಿ 32ರಡಿ ನ್ಯಾಯಾಲಯದ ಮೆಟ್ಟಲನ್ನೇರಿರುವ ಅರ್ಜಿದಾರರು,ಫಲಿತಾಂಶಗಳು ಪ್ರಕಟಗೊಳ್ಳುವ ಮುನ್ನ ಪರೀಕ್ಷೆಗೆ ಹಾಜರಾಗಲು ತಮಗೆ ಹೆಚ್ಚುವರಿ ಅವಕಾಶವನ್ನು ನೀಡಲು ಅಥವಾ ತಾವು ಬರೆಯಲು ಸಾಧ್ಯವಾಗಿರದಿದ್ದ ಉಳಿದ ಪರೀಕ್ಷೆಗಳಿಗೆ ಹಾಜರಾಗಲು ಪರ್ಯಾಯ ವ್ಯವಸ್ಥೆಯೊಂದನ್ನು ಮಾಡಲು ಯುಪಿಎಸ್ಸಿಗೆ ನಿರ್ದೇಶವನ್ನು ಕೋರಿದ್ದಾರೆ.

ಕೋವಿಡ್‌ನಿಂದಾಗಿ ಮೂವರು ಅರ್ಜಿದಾರರ ಪೈಕಿ ಇಬ್ಬರು ಜ.7ರಿಂದ 16ರವರೆಗೆ ನಡೆದಿದ್ದ ಮುಖ್ಯಪರೀಕ್ಷೆಯಲ್ಲಿ ಆರಂಭದ ಕೆಲವು ಪೇಪರ್‌ಗಳನ್ನು ಬರೆದ ನಂತರ ಗೈರಾಗಿದ್ದರೆ,ಓರ್ವ ಅಭ್ಯರ್ಥಿಯು ಯಾವುದೇ ಪೇಪರ್ ಬರೆದಿರಲಿಲ್ಲ.

ಮುಖ್ಯ ಪರೀಕ್ಷೆಯ ಅವಧಿಯಲ್ಲಿ ಅಥವಾ ಅದಕ್ಕೆ ಮುನ್ನ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತಾಗಲು ವ್ಯವಸ್ಥೆಗಳನ್ನು ಮಾಡುವ ಯಾವುದೇ ನೀತಿಯನ್ನು ಯುಪಿಎಸ್ಸಿ ಹೊಂದಿರಲಿಲ್ಲ ಎಂದೂ ಅರ್ಜಿದಾರರು ತಿಳಿಸಿದ್ದಾರೆ.

ನೀತಿಯ ಅನುಪಸ್ಥಿತಿ ಮತ್ತು ಕೋವಿಡ್ ಸೋಂಕಿತ ಅರ್ಜಿದಾರರು 2021ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆಗಳನ್ನು ಮಾಡದಿರುವುದು ಸಂವಿಧಾನದ 14 ಮತ್ತು 16ನೇ ವಿಧಿಗಳಡಿ ಅರ್ಜಿದಾರರ ಹಕ್ಕನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ವಿಷಯದಲ್ಲಿ ಸಲಹೆ ಪಡೆದುಕೊಳ್ಳಲು ಯುಪಿಎಸ್ಸಿ ವಕೀಲರು ಸಮಯಾವಕಾಶ ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು. ಅರ್ಜಿಯ ಕುರಿತು ಅಫಿಡವಿಟ್‌ಗಳನ್ನು ಸಲ್ಲಿಸುವಂತೆಯೂ ಪೀಠವು ಸಂಬಂಧಿತ ಕಕ್ಷಿದಾರರಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News