ನಾನು ತಲೆ ಮರೆಸಿಕೊಂಡಿಲ್ಲ,ಯಾರಿಗೂ ಹೆದರುವುದಿಲ್ಲ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಕೀವ್: "ನಾನು ಎಲ್ಲಿಗೂ ಓಡಿ ಹೋಗಿಲ್ಲ. ಕೀವ್ ನಲ್ಲಿದ್ದೇನೆ. ಯಾರಿಗೂ ಹೆದರುವುದಿಲ್ಲ'' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ತನ್ನ ಅಧಿಕೃತ ಇನ್ ಸ್ಟಾಗ್ರಾಮ್ ವೀಡಿಯೊದಲ್ಲಿ ಹೇಳಿದ್ದಾರೆ.
ರಷ್ಯಾದ ಪಡೆಗಳು ಉಕ್ರೇನ್‌ನ ಹಲವಾರು ನಗರಗಳಲ್ಲಿ ಶೆಲ್ ದಾಳಿಯನ್ನು ತೀವ್ರಗೊಳಿಸುತ್ತಿರುವ ಮಧ್ಯೆ ವೊಲೊಡಿಮಿರ್ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ. ರಷ್ಯಾದ ಪಡೆಗಳು ಉತ್ತರ ಹಾಗೂ ಪಶ್ಚಿಮದಿಂದ ರಾಜಧಾನಿ ಕೀವ್‌ಗೆ ಹತ್ತಿರವಾಗುತ್ತಿವೆ.
"ನಾನು ಕೀವ್‌ನ ಬ್ಯಾಂಕೋವಾ ಸ್ಟ್ರೀಟ್‌ನಲ್ಲಿ ಇರುತ್ತೇನೆ.. ನಾನು ಅಡಗಿಕೊಳ್ಳುತ್ತಿಲ್ಲ ಹಾಗೂ ನಾನು ಯಾರಿಗೂ ಹೆದರುವುದಿಲ್ಲ" ಎಂದು ಝೆಲೆನ್ಸ್ಕಿ ತನ್ನ ಅಧಿಕೃತ Instagram ನಲ್ಲಿ ವೀಡಿಯೊದಲ್ಲಿ ಹೇಳಿದ್ದಾರೆ.
"ಈ ದೇಶಭಕ್ತಿಯ ಯುದ್ಧವನ್ನು ಗೆಲ್ಲಲು" ಎಷ್ಟು ಬೇಕಾದರೂ ಮಾಡುತ್ತೇನೆ ಎಂದು ಅವರು ಹೇಳಿದರು.
ರಷ್ಯಾ ಎರಡು ವಾರಗಳ ಹಿಂದೆ ಉಕ್ರೇನ್‌ನ ಮೇಲೆ ಆಕ್ರಮಣವನ್ನು ಆರಂಭಿಸಿದಾಗಿನಿಂದ 44 ವರ್ಷದ ನಾಯಕ ಝೆಲೆನ್ಸ್ಕಿ ಮೂರು ಹತ್ಯೆಯ ಪ್ರಯತ್ನಗಳಿಂದ ಬದುಕುಳಿದರು ಎಂದು ವರದಿಯಾಗಿದೆ.