×
Ad

ಹೆಣ್ಣು ಸಂಸಾರದ ಕಣ್ಣು

Update: 2022-03-08 20:23 IST
ಸಾಂದರ್ಭಿಕ ಚಿತ್ರ (photo- pti)

ಹೆಣ್ಣು ಸಂಸಾರದ ಕಣ್ಣು ಅನ್ನುತ್ತಾರೆ. ಹೆಣ್ಣನ್ನು ಭೂಮಿ ತೂಕದ ಸಹನೆಗೆ ಹೋಲಿಸುತ್ತಾರೆ. ಅಷ್ಟೇಕೆ ಹೆಣ್ಣೆಂದರೆ ಹುಟ್ಟಿದ ಮನೆ, ಸೇರಿದ ಮನೆ ಎರಡನ್ನೂ ಬೆಳಗುವವಳು ಎನ್ನುತ್ತಿದ್ದ ಕಾಲ ಒಂದಿತ್ತು. ನಂತರದ ದಿನಗಳಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಮೂಗು ಮುರಿಯುತ್ತಿದ್ದ ಕಾಲವೂ ಬಂತು.    ಗಂಡೆಂದರೆ ವಂಶ ಉದ್ಧಾರ ಮಾಡುವ ಕುಲಪುತ್ರ ಎಂದು,  ಗಂಡು ಸಂತಾನ ಬೇಕೇ ಬೇಕೆನ್ನುವವರೂ, ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ, ದೇಶಕ್ಕೊಬ್ಬ ಮಗ ಇರಲಿ ಎಂದು ಹರಸುವ ಕಾಲವೂ ಒಂದಿತ್ತು.   ಆದರೆ ಆರತಿಗೆಂದು ಹುಟ್ಟುವ ಮಗಳೇ ಇಂದು ದೇಶವನ್ನೂ ಆಳುತ್ತಾಳೆ.  ಕೀರ್ತಿಯನ್ನು ತರುತಾಳೆ ಜೊತೆಗೆ ಸೈನ್ಯದಲ್ಲಿ ಸೇರಿ ತಾಯ್ನಾಡನ್ನು ರಕ್ಷಿಸಲು ಹೋರಾಡುತ್ತಾಳೆ, ಕಾದಾಡುತ್ತಾಳೆ, ಪ್ರಾಣ ತ್ಯಾಗಕ್ಕೂ ಸಿದ್ಧವಾಗಿ ಮಡಿಯುತ್ತಾಳೆ ಕೂಡ. 

ಇಂದು ಜಗತ್ತಿನ ಎಲ್ಲಾ ಭಾಗಗಳಲ್ಲೂ ಎಲ್ಲಾ ರಂಗಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಪುರುಷ ಸಮಾಜದಲ್ಲಿ ಹೆಣ್ಣಿನ ಸ್ಥಾನವನ್ನು ಭದ್ರವಾಗಿಸಿಕೊಂಡಿರುವುದು ಅದೇ ಹೆಣ್ಣು.  ಓದಿನಲ್ಲಿ ಮುಂದು, ಗಳಿಕೆಯಲ್ಲಿ ಮುಂದು, ಸಂಸಾರ ತೂಗಿಸುವುದರಲ್ಲಂತೂ ಅವಳ ಪಾತ್ರ ಬಹು ಮುಖ್ಯವಾದದ್ದು.  ಹೀಗೆ ಶಕ್ತಿ ದೇವತೆಯಂತೆ ರಾರಾಜಿಸುತ್ತಿರುವ ಇಂದಿನ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಾ ಬಂದಿದ್ದಾಳೆ.

ಬಹಳ ಹಿಂದೆ ಗಂಡಿನ ಮನೆಯವರು ವಧುವಿನ ಮನೆಗೆ ತೆರ ಕಟ್ಟಿ ಹೆಣ್ಣು ತರುತ್ತಿದ್ದರಂತೆ.  ನಂತರದ ದಿನಗಳಲ್ಲಿ ಗಂಡಿನ ಮನೆಯವರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಿ ಕೇಳಿದಷ್ಟು ವರದಕ್ಷಿಣೆ, ವರೋಪಚಾರದೊಂದಿಗೆ, ಅವರು ಹೇಳಿದ ಊಟ ತಿಂಡಿಗಳನ್ನು ಮಾಡಿಸಿ, ಸಂತೃಪ್ತಿಗೊಳಿಸುವಲ್ಲಿ ಹೆಣ್ಣು ಹೆತ್ತವರ ಪಾಡು ಹೇಳತೀರದು.  ಅದಕ್ಕಾಗಿ ಸಾಲ ಸೋಲ ಮಾಡಿ, ಮನೆ, ಜಮೀನು ಮಾರಿಯಾದರೂ ಕನ್ಯಾದಾನದ ಪುಣ್ಯ ಕಟ್ಟಿಕೊಳ್ಳುತ್ತಿದ್ದರು.

ತೀರಾ ಇತ್ತೀಚಿನ ದಿನಗಳಲ್ಲಿ ಸರಾಸರಿಯಲ್ಲಿ ಹೇಳುವುದಾದರೆ ಹೆಣ್ಣಿನ ಸಂಖ್ಯೆ ಕಡಿಮೆ ಎಂದು ಅಂದಾಜಿದೆ.  ಜೊತೆಗೆ ಹೆಣ್ಣುಮಕ್ಕಳು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತೆ ಓದಿ ತನ್ನ ಕಾಲಮೇಲೆ ತಾನು ನಿಂತು ಎಲ್ಲಾ ರಂಗಗಳಲ್ಲೂ ಅವಳದ್ದೇ ಆದ ಸ್ಥಾನ ಕಂಡುಕೊಂಡಿರುವುದು ಹೆಣ್ಣು ಕೇವಲ ಒಂದು ರಂಗಕ್ಕೆ ಸೀಮಿತವಲ್ಲ ಎಂದು ಸಾಬೀತುಪಡಿಸಿದಂತಾಗಿದೆ.  ಮದುವೆಯಾಗಬೇಕೆನ್ನುವ ವರನಿಗೆ ಹೆಣ್ಣು ಸಿಗುವುದೇ ಕಷ್ಟ ಎನ್ನುವಂತಾಗಿದೆ. ಇನ್ನು ಓದಿರುವ ಹೆಣ್ಣು ಎಂದರೆ ಅವಳಿಗಿಂತ ಹೆಚ್ಚು ಓದಿರುವ ಗಂಡು ಸಿಗುವುದೂ ಕಷ್ಟವೇ.  ಇಬ್ಬರೂ ಸರಿಸಮಾನವಾಗಿ ಓದಿದ್ದರೂ ಹೇಳಿಕೊಳ್ಳುವುದಕ್ಕಾದರೂ ಹುಡುಗನ ಸ್ಥಾನ ಮಾನ, ವರಮಾನ ಎಲ್ಲವೂ ಹೆಚ್ಚು ಇರಬೇಕು ಎನ್ನುತ್ತಾರೆ.  ಹಾಗಾಗಿ ಹೆಚ್ಚು ಓದಿದ ಹುಡುಗಿಗೆ ಅವಳಿಗಿಂತಾ ಹೆಚ್ಚು ಓದಿದ ಹುಡುಗನನ್ನೇ ನೋಡಬೇಕಲ್ಲವೇ ? ಎಲ್ಲ ರಂಗದಲ್ಲೂ ಸಮಾನತೆ ಎಂದರೂ, ಹೆಣ್ಣೊಬ್ಬಳು ಆಯ್ಕೆ ಎಂದು ಬಂದಾಗ ತನಗಿಂತ ಹೆಚ್ಚಿನ ಓದು, ಗಳಿಕೆ ಇರುವ ಗಂಡನ್ನೇ ಬಯಸುವುದಂತೂ ಸತ್ಯ.

ಇದು ಮದುವೆಯ ವಿಷಯವಾದರೆ ಇನ್ನು ಸಂಸಾರ ಸಾಗಿಸುವ ವಿಷಯದಲ್ಲಿ ಸಮಾನತೆಯನ್ನು ಕಾಪಾಡುವ ತವಕದಲ್ಲಿ ಕುಟುಂಬದ ಎಲ್ಲಾ ಕೆಲಸಗಳನ್ನು ಹಂಚಿಕೊಂಡು ಮಾಡುವುದು, ಗಂಡಿನಷ್ಟೇ ಕಷ್ಟಪಟ್ಟು ದುಡಿಯುವ ಮಹಿಳೆ ಮನೆ ಕೆಲಸದಲ್ಲೂ ಗಂಡ ಸಮಪಾಲು ವಹಿಸಿಕೊಳ್ಳಲಿ ಎನ್ನುವುದು ಸಾಮಾನ್ಯ.  ಹೀಗೆ ಎಲ್ಲದರಲ್ಲೂ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಗಂಡು ಹೆಣ್ಣು ಇಬ್ಬರೂ ಮದುವೆಗೆ ಮುಂಚೆ ಎಲ್ಲದಕ್ಕೂ ಒಪ್ಪುತ್ತಾರಾದರೂ ನಂತರದ ದಿನಗಳಲ್ಲಿ ಅಪಸ್ವರ ಮಿಡಿಯುವುದೇ ಹೆಚ್ಚು.  ಹಾಗಾಗಿ ಇವತ್ತಿನ ದಾವಂತದ ಬದುಕು, ಹಣದ ಅವಶ್ಯಕತೆ, ಪೈಪೋಟಿಯ ನಾಗಾಲೋಟದೊಂದಿಗೆ ದಾಪುಗಾಲು ಹಾಕಲು ಹೆಣಗುತ್ತಿರುವ ಸಂಸಾರಗಳು ತಮಗೆ ಒಂದೇ ಮಗು ಸಾಕೆಂದು ನಿರ್ಧರಿಸಿದರೂ ಅದೊಂದು ಮಗುವನ್ನೇ ಸಾಕಲು ದುಸ್ತರ ಎನ್ನುವಂತಾಗಿದೆ.

ಮದುವೆಯಾದ ಕೂಡಲೇ ಎಲ್ಲದಕ್ಕೂ ಯೋಜನೆ ರೂಪಿಸಬೇಕು, ಹೆಚ್ಚು ಸಂಬಳದ ಕೆಲಸ, ಇಬ್ಬರು ದುಡಿಯುವುದರಿಂದ ತಮ್ಮದೇ ಆದ ಸ್ವಂತ ಸೂರು, ನಂತರ ಮಗು, ಮಗುವಿಗೆ ಹೆಸರಾಂತ ಶಾಲೆಯಲ್ಲಿ ಸೀಟು, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಪಟ್ಟಿ ಬೆಳೆದಂತೆಲ್ಲಾ ದುಡಿಯುವ ಗಳಿಸುವ ಧಾವಂತ ಹೆಚ್ಚುತ್ತದೆ.

ಅಪ್ಪ ಅಮ್ಮ ಮಾಡಿರುವ ಆಸ್ತಿ ಹಣ ಎಷ್ಟಿದ್ದರೂ ತಮ್ಮದೇ ದುಡಿಮೆ, ತಮ್ಮದೇ ಗಳಿಕೆಗೆ ಮುಂದಾಗುವುದರಿಂದ ಅನಿವಾರ್ಯವಾಗಿ ದುಡಿಮೆ ಹೆಚ್ಚಲೇಬೇಕು.  ಗಂಡ ಹೆಂಡತಿ ಹಗಲಿರುಳೂ ಗಳಿಕೆಯ ಹಿಂದೆ ಓಡಿದರೆ ಮನೆ, ಸಂಸಾರ, ಮಕ್ಕಳ ಪಾಲನೆ, ಪೋಷಣೆ ಎಲ್ಲವೂ ಕಷ್ಟವೇ.  ಮತ್ತದೇ, ಮಗು ನೋಡಿಕೊಳ್ಳಲು ಜನ, ಅಡಿಗೆ ಮಾಡಲು ಜನ, ಕಚೇರಿಗೆ ಬೇಗ ತಲುಪಲು ಕಾರು, ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ಜನ ಹೀಗೆ ಖರ್ಚೂ ಹೆಚ್ಚುತ್ತಲೇ ಹೋಗುತ್ತದೆ.  ಕೆಲವರಂತೂ ಮನೆಯಲ್ಲಿ ಅಡಿಗೆ ಮಾಡುವುದೇ ಅಪರೂಪವಾಗುತ್ತದೆ.  ಹೋಟೆಲ್‌ ಊಟ, ವಾರಾಂತ್ಯದ ಮೋಜು ಹೀಗೆ ಎಲ್ಲೂ ಸಹಜವಾದ ಪ್ರೀತಿ, ವಾತ್ಸಲ್ಯ, ಮಕ್ಕಳೊಂದಿಗೆ ಬೆರೆಯುವ ಕೂತು ಮಾತನಾಡುವ ವ್ಯವಧಾನ ಯಾರಿಗೂ ಇಲ್ಲ.

ಕೇವಲ ಖರ್ಚು ಹೆಚ್ಚಾದರೆ ಹೇಗೋ ನಿರ್ವಹಿಸಬಹುದು.  ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಭಿನ್ನಾಭಿಪ್ರಾಯಗಳು.  ಮದುವೆಗೆ ಮುನ್ನ ಎಷ್ಟೇ ಮಾತುಕತೆ ನಡೆಸಿದ್ದರೂ, ಎಷ್ಟೇ ಒಡನಾಟ ಪರಿಚಯ ಇದ್ದರೂ, ವಾಸ್ತವದ ಅರಿವು ಮೂಡುವುದು ಮದುವೆಯ ನಂತರ ಜೊತೆಯಲ್ಲಿ ಸಂಸಾರ ಮಾಡಿದಾಗ ಮಾತ್ರ.  ಹಾಗಾಗಿ ಇತ್ತೀಚೆಗೆ ಒಂದು ಮದುವೆ ಮಾಡಿ ಗೆದ್ದೆವಪ್ಪಾ ಎಂದು ಬೀಗುವ ಯಾವ ತಂದೆತಾಯಿಗಳು ಇಲ್ಲ.  ಮದುವೆಯಾಗಿ ಕೇವಲ ಒಂದು ತಿಂಗಳಿಗೆ ಬಿಡುಗಡೆಗೆ ಸಿದ್ಧರಾಗುವ ದಂಪತಿಗಳನ್ನು ನೋಡಿದ್ದೇವೆ.  ಮದುವೆ ಮುರಿಯಲು ಕಾರಣಗಳು ತೀರಾ ಸಾಮಾನ್ಯವಾದುವು. ಸಣ್ಣ ಸಣ್ಣ ಕಾರಣಗಳಿಗೇ ಮದುವೆ ಮುರಿಯುವುದನ್ನು ನೋಡುತ್ತೇವೆ. ಕಾರಣ ಹೊಂದಾಣಿಕೆಯ ಅಭಾವ.  ತನ್ನ ಮಗಳಿಗೆ ಯಾವುದಕ್ಕೂ ಕಡಿಮೆಯಾಗಬಾರದು ಎಂದು ಐಶಾರಾಮಿ ಜೀವನವನ್ನೇ ಅಭ್ಯಾಸ ಮಾಡಿಸುವ ತಂದೆ ತಾಯಿಗಳು ತಾಳ್ಮೆ, ಪ್ರೀತಿ ವಿಶ್ವಾಸ, ನಂಬಿಕೆ ಎನ್ನುವ ಪಾಠವನ್ನೂ ಹೇಳಿಕೊಡಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಹೊಂದಾಣಿಕೆ ಎನ್ನುವುದು ಮರೀಚಿಕೆಯಾಗುತ್ತಿದೆ.  ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ವಿಶ್ವಾಸ ಕಡಿಮೆಯಾಗುತ್ತಿದೆ.

ಹೆಣ್ಣು ಹೊರಗೆ ಹೋಗಿ ದುಡಿದರಷ್ಟೇ ದುಡಿಮೆಯಲ್ಲ.  ಮನೆಯಲ್ಲೇ ಇದ್ದು ಹೊತ್ತಿಗೆ ಸರಿಯಾಗಿ ಅಡಿಗೆ ಊಟದ ಜೊತೆಗೆ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಲೆ ತನ್ನ ಅರಿವಿನ ಜ್ಞಾನವನ್ನು ಮಕ್ಕಳಿಗೆ ಹೇಳಿಕೊಡಲು ಸಹಾಯವಾಗುತ್ತದೆ.   ಒಪ್ಪ ಓರಣದ ಸಂಸಾರದಿಂದ ಯಾವುದೇ ವಸ್ತು, ಪದಾರ್ಥಗಳೂ ಕೆಡದಂತೆ ಜೋಪಾನ ಮಾಡಿ, ಹಿತ ಮಿತವಾಗಿ ಸಂಸಾರ ಮಾಡಿದಲ್ಲಿ ಗಂಡಿನ ದುಡಿಮೆಯ ಅರ್ಧದಷ್ಟು ಉಳಿತಾಯವನ್ನು ಮನೆಯಲ್ಲಿದ್ದುಕೊಂಡೇ ಮಾಡಬಹುದಾಗಿದೆ.  ಜೊತೆಗೆ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಓದಿಗೆ ಮುಂದಿನ ಭವಿಷ್ಯಕ್ಕೆ ಎಲ್ಲಾ ರೀತಿಯ ಗುರುವೂ ಆಗಬಲ್ಲವಳೆಂದರೆ ಅದು ತಾಯಿ ಮಾತ್ರ.  ಒಬ್ಬ ತಾಯಿ ತನ್ನ ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದರಿಂದ ತನ್ನ ಮನೆಯೊಂದಿಗೆ ಮುಂದೆ ತನ್ನ ಮಕ್ಕಳ ಸಂಸಾರವನ್ನು ಸುರಕ್ಷಿತ ಮಾರ್ಗದಲ್ಲಿ ನಡೆಸಲು ತಾನೇ ಕಾರಣಳಾಗುತ್ತಾಳೆ.

ವೃತ್ತಿ ಬದುಕಿನ ಜೊತೆಗೆ ಸಂಸಾರವನ್ನು ಸಮನಾಗಿ ತೂಗಿಸಿಕೊಂಡು ಹೋಗುವ ಜಾಣ್ಮೆ, ತಾಳ್ಮೆ, ಸಹನೆ ಇರುವ ಎಷ್ಟೋ ಮಂದಿ ಇಂದು ವಿಜ್ಞಾನ, ಕೃಷಿ, ವೈದ್ಯಕೀಯ, ಶಿಕ್ಷಣ ಹೀಗೆ ಹತ್ತು ಹಲವು ರಂಗಗಳಲ್ಲಿ ದೇಶ ವಿದೇಶಗಳಲ್ಲಿ ಹೆಸರು ಮಾಡಿ ಕೀರ್ತಿಗೆ ಪಾತ್ರರಾಗಿದ್ದಾರೆ.

ಆದರೆ ಹೆಣ್ಣು ಎಂದು ಜರೆಯುವ ಗಂಡು ತನ್ನ ಸ್ಥಾನವನ್ನು ಅರಿತುಕೊಂಡು ಗೃಹಿಣಿಯಾಗಿ ಮತ್ತು ವೃತ್ತಿ ಬದುಕಿನಲ್ಲಿ ಅವಳು ನಿರ್ವಹಿಸುವ ಎಲ್ಲಾ ಪಾತ್ರಗಳಿಗೂ ಒತ್ತಾಸೆಯಾಗಿ ನಿಂತಾಗ ಮಾತ್ರ ಅವಳ ಶ್ರಮ ಸಾರ್ಥಕವಾಗುತ್ತದೆ.

ಹೀಗೆ ಹೆಣ್ಣು ಎಂದು ಮೂಗು ಮುರಿಯುತ್ತಿದ್ದ ಕಾಲದಿಂದ, ಹೆಣ್ಣು ಸಿಕ್ಕಿ ತಮ್ಮ ಮಕ್ಕಳಿಗೆ ಮದುವೆಯಾದರೆ ಸಾಕು ಎನ್ನುವ ಗಂಡುಮಕ್ಕಳ ಪೋಷಕರ ಪರದಾಟದ ದಿನಗಳ ವರೆಗೆ ಹೆಣ್ಣಿನ ಸ್ಥಾನ ವಿಸಿಷ್ಠ ಮತ್ತು ವಿಶೇಷವೇ.

ಹೆಣ್ಣು ಸಂಸಾರದ ಕಣ್ಣಾಗುವುದರ ಜೊತೆ ಸಮಾಜದ ಕಣ್ಣೂ ಆಗಬಲ್ಲಳು ಎಂದರೆ ಅತಿಶಯೋಕ್ತಿಯಲ್ಲ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಸ್ವಾಸ್ಥ್ಯ ಸಂಸಾರ ಮತ್ತು ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕಾಗಿ ಮಹತ್ತರವಾದ ಪಾತ್ರ ವಹಿಸುತ್ತಿರುವ ಎಲ್ಲಾ ಮಹಿಳೆಯರನ್ನು ಅಭಿನಂದಿಸಿ ಗೌರವಿಸುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವೇ ಸರಿ.

           

Writer - ಇಂದಿರಾ ನಾಡಿಗ್

contributor

Editor - ಇಂದಿರಾ ನಾಡಿಗ್

contributor

Similar News