ಬುಲ್ಲಿ ಬಾಯಿ, ಸಲ್ಲಿ ಡೀಲ್ಸ್ ʼಅಕ್ರಮ, ಅಮಾನವೀಯʼ: ಪೊಲೀಸರಿಂದ 2000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

Update: 2022-03-09 10:18 GMT

ಹೊಸದಿಲ್ಲಿ: ದಿಲ್ಲಿ ಪೊಲೀಸರು ಬುಲ್ಲಿ ಬಾಯಿ ಹಾಗೂ ಸಲ್ಲಿ ಡೀಲ್ಸ್ ಪ್ರಕರಣಗಳಲ್ಲಿ ಕ್ರಮವಾಗಿ 2000 ಪುಟಗಳ ಮತ್ತು 700 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣಗಳ ಆರೋಪಿಗಳು ವಿವಿಧ ಸಮುದಾಯಗಳ ಯುವತಿಯರನ್ನು ಟಾರ್ಗೆಟ್ ಮಾಡಿದ್ದಾರೆ, ಮುಸ್ಲಿಂ ಮಹಿಳೆಯರನ್ನು ಅವಹೇಳನಗೈದಿದ್ದಾರೆ ಹಾಗೂ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಯತ್ನ ನಡೆಸಿದ್ದಾರೆಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ.

ಈ ಎರಡು ಪ್ರಕರಣಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ಅವರನ್ನು ಆನ್‍ಲೈನ್‍ನಲ್ಲಿ ಮಾರಾಟಕ್ಕಿಟ್ಟು  ವ್ಯಾಪಕ ಆಕ್ರೋಶ ಸೃಷ್ಟಿಸಿದ್ದವು. ಮುಸ್ಲಿಂ ಪತ್ರಕರ್ತೆಯರು, ಹೋರಾಟಗಾರರು, ಕಲಾವಿದರು ಕೂಡ ಈ ಪ್ರಕರಣಗಳಲ್ಲಿ ಟಾರ್ಗೆಟ್ ಆಗಿದ್ದರು. ಸುಳ್ಳಿ ಡೀಲ್ಸ್ ವೆಬ್‍ಸೈಟ್ ಹಾಗೂ ಅದರ ಕ್ಲೋನ್ ಆ್ಯಪ್ ಬುಲ್ಲಿ ಬಾಯಿ ಎರಡೂ ಗಿಟ್‍ಹಬ್‍ನಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದವು.

ಬುಲ್ಲಿ ಬಾಯಿ ಪ್ರಕರಣದ ಪ್ರಮುಖ ಆರೋಪಿ, 20 ವರ್ಷದ ನೀರಜ್ ಬಿಷ್ಣೋಯಿಯನ್ನು ಉಲ್ಲೇಖಿಸಿದ ಚಾರ್ಜ್‍ಶೀಟ್ ಆತ ಸೃಷ್ಟಿಸಿದ ಈ ಆ್ಯಪ್ ಅಕ್ರಮ ಮಾತ್ರವಾಗಿರದೆ ಅಮಾನವೀಯವೂ ಆಗಿತ್ತೆಂದು ಹೇಳಿದೆ.

ಸಲ್ಲಿ ಡೀಲ್ಸ್ ಪ್ರಕರಣದ ಪ್ರಮುಖ ಆರೋಪಿ, 25 ವರ್ಷದ ಔಂಕಾರೇಶ್ವರ್ ಠಾಕೂರ್ ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಹದಗೆಡಿಸಲು ಯತ್ನಿಸಿದ್ದ ಹಾಗೂ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಕೆಟ್ಟ ಹೆಸರು ತರುವ ಉದ್ದೇಶ ಹೊಂದಿದ್ದ ಎಂದು ಚಾರ್ಜ್‍ಶೀಟ್ ಹೇಳಿದೆ.

ಎರಡೂ ಚಾರ್ಜ್‍ಶೀಟ್‍ಗಳನ್ನು ದಿಲ್ಲಿ ಪೊಲೀಸರ ಸೈಬರ್ ಸೆಲ್ ಘಟಕ ಮಾರ್ಚ್ 4ರಂದು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿದೆ.

ಮುಂಬೈ ಪೊಲೀಸರು ಕೂಡ ಬುಲ್ಲಿ ಬಾಯಿ ಪ್ರಕರಣದಲ್ಲಿ ಕಳೆದ ಶುಕ್ರವಾರ 2000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಷ್ಣೋಯಿ ಮತ್ತು ಠಾಕುರ್ ಒಳಗೊಂಡಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ಜನವರಿ 1ರಂದು ಬುಲ್ಲಿ ಬಾಯಿ ಆ್ಯಪ್ ಪ್ರಕರಣ ಬಹಿರಂಗಗೊಂಡಿತ್ತು,  ಈ ಪ್ರಕರಣದ ಆರೋಪಿ ಬಿಷ್ಣೋಯಿ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಆತನನ್ನು ಆಸ್ಸಾಂನ ಜೋರ್ಹಟ್‍ನಿಂದ ಬಂಧಿಸಲಾಗಿತ್ತು.

`ಟ್ರಡ್‍ಮಹಾಸಭಾ' ಎಂಬ ಗುಂಪು ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತೆಂದೂ ಮುಂಬೈ ಪೊಲೀಸ್ ಮೂಲಗಳು  ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News