ಉಕ್ರೇನ್ ಮೇಲೆ ರಷ್ಯಾ ಸಂಭಾವ್ಯ ರಾಸಾಯನಿಕ ದಾಳಿ: ಅಮೆರಿಕ ಎಚ್ಚರಿಕೆ
ವಾಷಿಂಗ್ಟನ್: ಉಕ್ರೇನ್ ಜತೆಗಿನ ಯುದ್ಧದಲ್ಲಿ ರಷ್ಯಾ ರಾಸಾಯನಿಕ ದಾಳಿ ಅಥವಾ ಜೈವಿಕ ಶಸ್ತ್ರಾಸ್ತ್ರ ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕ ಬಹಿರಂಗ ಎಚ್ಚರಿಕೆ ನೀಡಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಾಕಿ ಈ ಸಂಬಂಧ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿ ಅಕ್ರಮವಾಗಿ ರಾಸಾಯನಿಕ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದ್ದ ಸ್ಥಳದ ಮೇಲೆ ತಾನು ದಾಳಿ ನಡೆಸಿದ್ದಾಗಿ ರಷ್ಯಾ ಹೇಳಿಕೆ ನೀಡಿರುವುದನ್ನು ಅಲ್ಲಗಳೆದಿದ್ದಾರೆ.
ಉಕ್ರೇನ್ ತನ್ನ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಾಸಾಯನಿಕ ಹಾಗೂ ಜೈವಿಕ ಶಸ್ತ್ರಾಸ್ತ್ರ ಪ್ರಯೋಗಾಲಯಗಳನ್ನು ನಿರ್ವಹಿಸುತ್ತಿದ್ದು, ಇದಕ್ಕೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ವಕ್ತಾರ ಮರಿಯಾ ಝಕರೊವಾ ಆರೋಪ ಮಾಡಿದ್ದರು.
ರಷ್ಯಾದ ಆರೋಪವನ್ನು ಕಾಲ್ಪನಿಕ ಎಂದು ಅವರು ಹೇಳಿದ್ದಾರೆ. ಉಕ್ರೇನ್ ವಿರುದ್ಧ ಸಾಮೂಹಿಕ ವಿನಾಶದ ಇಂಥ ಅಸ್ತ್ರಗಳನ್ನು ಬಳಸಲು ರಷ್ಯಾ ವೇದಿಕೆ ಸಜ್ಜುಗೊಳಿಸುವ ಹುನ್ನಾರ ಇದಾಗಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.
ಏತನ್ಮಧ್ಯೆ ಉಕ್ರೇನ್‌ನ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ಬುಧವಾರ ನಡೆಸಿದ ಬಾಂಬ್ ದಾಳಿಯನ್ನು ಬರ್ಬರ ಕೃತ್ಯ ಎಂದು ಅಮೆರಿಕ ಬಣ್ಣಿಸಿದೆ. ಮರಿಯೊಪೋಲ್ ನಗರದಿಂದ ಜನ ಸ್ಥಳಾಂತರಗೊಳ್ಳಲು ಅನುವಾಗುವಂತೆ ಮಾಡಿಕೊಂಡಿದ್ದ ಕದನ ವಿರಾಮವನ್ನು ಉಲ್ಲಂಘಿಸಿ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಮಂದಿ ರೋಗಿಗಳು ಜೀವಂತ ಸಮಾಧಿಯಾಗಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಹೆರಿಗೆ ವಾರ್ಡ್‌ನಲ್ಲಿ ಹಲವು ಮಹಿಳೆಯರು ಗಾಯಗೊಂಡ ಹಾಗೂ ಮಕ್ಕಳು ಭಗ್ನಾವಶೇಷದಡಿ ಸಿಲುಕಿರುವ ಘಟನೆ 14 ದಿನಗಳ ದಾಳಿಯಲ್ಲೇ ಬರ್ಬರ ಕೃತ್ಯ ಎಂದು ಅಭಿಪ್ರಾಯಪಟ್ಟಿದೆ. 1945ರ ಬಳಿಕ ಯೂರೋಪಿಯನ್ ದೇಶದ ಮೇಲೆ ನಡೆದ ಬಹುದೊಡ್ಡ ದಾಳಿ ಎಂದು ಹೇಳಿದೆ.
ಯುದ್ಧಪೀಡಿತ ಉಕ್ರೇನ್‌ಗೆ 140 ಕೋಟಿ ಡಾಲರ್ ತುರ್ತು ನೆರವನ್ನು ನೀಡಲು ಐಎಂಎಫ್ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಉಕ್ರೇನ್‌ನಲ್ಲಿ ಈ ವರ್ಷ ಗಂಭೀರ ಆರ್ಥಿಕ ಹಿಂಜರಿತ ನಿರೀಕ್ಷಿಸಲಾಗಿದೆ ಎಂದು ಐಎಂಎಫ್ ಅಧ್ಯಕ್ಷ ಜಾರ್ಜಿವಾ ಹೇಳಿದ್ದಾರೆ.