×
Ad

ಮೀಡಿಯಾ ಒನ್ ಟಿವಿಯ ಪರವಾನಿಗೆಯನ್ನು ನಿರಾಕರಿಸಲು ಆಧಾರವಾಗಿದ್ದ ಕಡತಗಳನ್ನು ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2022-03-10 22:28 IST
photo pti

ಹೊಸದಿಲ್ಲಿ,ಮಾ.10: ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಟಿವಿಯ ಪರವಾನಿಗೆಯನ್ನು ನಿರಾಕರಿಸಲು ಆಧಾರವಾಗಿದ್ದ ಕಡತಗಳನ್ನು ತನ್ನೆದುರು ಹಾಜರುಪಡಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಕೇಂದ್ರಕ್ಕೆ ಸೂಚಿಸಿದೆ. ಫೆಬ್ರವರಿಯಲ್ಲಿ ಕೇಂದ್ರ ಸರಕಾರವು ನಿಷೇಧವನ್ನು ಸಮರ್ಥಿಸಿಕೊಳ್ಳಲು ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಉಲ್ಲೇಖಿಸಿತ್ತು.

ವಾಹಿನಿಯ ಒಡೆತನವನ್ನು ಹೊಂದಿರುವ ಮಾಧ್ಯಮಂ ಬ್ರಾಡ್ಕಾಸ್ಟಿಂಗ್ ಲಿ. ಕೇರಳ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಸೂರ್ಯಕಾಂತ ಮತ್ತು ವಿಕ್ರಮನಾಥ ಅವರ ಪೀಠವು ಕೇಂದ್ರಕ್ಕೆ ನೋಟಿಸನ್ನು ಹೊರಡಿಸಿತು. ಮಾ.2ರಂದು ಟಿವಿ ವಾಹಿನಿಯ ಮೇಲೆ ಕೇಂದ್ರದ ನಿಷೇಧವನ್ನು ಎತ್ತಿಹಿಡಿದಿದ್ದ ಉಚ್ಚ ನ್ಯಾಯಾಲಯವು ವಿಷಯಕ್ಕೆ ಸಂಬಂಧಿಸಿದ ರಹಸ್ಯ ಕಡತಗಳನ್ನು ತಾನು ಪರಿಶೀಲಿಸಿದ್ದೇನೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇರುವುದು ತನಗೆ ಮನವರಿಕೆಯಾಗಿದೆ ಎಂದು ಹೇಳಿತ್ತು.

ಮೀಡಿಯಾ ಒನ್ ಟಿವಿ ಜ.31ರಿಂದ ಪ್ರಸಾರವನ್ನು ಸ್ಥಗಿತಗೊಳಿಸಿದೆ. 

ರಾಷ್ಟ್ರೀಯ ಭದ್ರತೆಗೆ ಬೆದರಿಕೆಯು ತನ್ನ ಪರವಾನಿಗೆಯನ್ನು ರದ್ದಗೊಳಿಸಲು ಒಂದು ನೆಪವಾಗಿದೆ ಎಂದು ಮಾಧ್ಯಮಂ ಬ್ರಾಡಕಾಸ್ಟಿಂಗ್ ಲಿ.ತನ್ನ ಮೇಲ್ಮನವಿಯಲ್ಲಿ ಪ್ರತಿಪಾದಿಸಿದೆ. ವಾಹಿನಿಯ ಪರವಾನಿಗೆಯನ್ನು ರದ್ದುಗೊಳಿಸಿರುವ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶವು ವಾಕ್ ಸ್ವಾತಂತ್ರವನ್ನು ಖಚಿತಪಡಿಸಿರುವ ಸಂವಿಧಾನದ ವಿಧಿ 19(1) ಮತ್ತು ಕಾನೂನಿನೆದುರು ಸಮಾನತೆಯನ್ನು ಒದಗಿಸಿರುವ ವಿಧಿ 14ನ್ನು ಉಲ್ಲಂಘಿಸಿದೆ ಎಂದು ಅದು ಬೆಟ್ಟುಮಾಡಿದೆ.ಪ್ರಕರಣದ ಮುಂದಿನ ವಿಚಾರಣೆಯು ಮಾ.15ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News