ದಕ್ಷಿಣ ಆಫ್ರಿಕಾ ವಿಶ್ವದ ಅತ್ಯಂತ ಅಸಮಾನ ದೇಶ: ವರದಿ

Update: 2022-03-10 18:57 GMT
photo pti

ನ್ಯೂಯಾರ್ಕ್, ಮಾ.10: ಸಮಾಜದಲ್ಲಿ ಜನಾಂಗವು ನಿರ್ಣಾಯಕ ಪಾತ್ರ ವಹಿಸಿರುವ, 10% ಜನತೆ ದೇಶದ 80%ಕ್ಕೂ ಅಧಿಕ ಸಂಪತ್ತನ್ನು ಹೊಂದಿರುವ ದಕ್ಷಿಣ ಆಫ್ರಿಕಾವು ವಿಶ್ವದ ಅತ್ಯಂತ ಅಸಮಾನ ದೇಶವಾಗಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ವಿಶ್ವದ 164 ಅತ್ಯಂತ ಅಸಮಾನ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ನ ವರದಿ ಹೇಳಿದೆ. ವರ್ಣಭೇದ ನೀತಿ ಅಂತ್ಯಗೊಂಡ ಸುಮಾರು 3 ದಶಕಗಳ ಬಳಿಕವೂ ಜನಾಂಗವು ಸಮಾಜದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದು ಶಿಕ್ಷಣ, ಕಾರ್ಮಿಕರ ಮಾರುಕಟ್ಟೆಯ ಮೇಲೆ ಬೀರುವ ಪರಿಣಾಮದಿಂದ ಅಸಮಾನತೆಗೆ ಪ್ರಮುಖ ಕಾರಣವಾಗಿ ಉಳಿದಿದೆ . ಜನಾಂಗವು ಆದಾಯದ ಅಸಮಾನ ಹಂಚಿಕೆಗೆ 41%ದಷ್ಟು ಮತ್ತು ಶಿಕ್ಷಣದ ಅಸಮಾನತೆಗೆ 30%ದಷ್ಟು ಕಾರಣವಾಗಿದೆ. ಜನಾಂಗೀಯ ಮತ್ತು ಪ್ರಾದೇಶಿಕ ಪ್ರತ್ಯೇಕತೆಯಲ್ಲಿ ಬೇರೂರಿರುವ ವಸಾಹತುಶಾಹಿ ಮತ್ತು ವರ್ಣಭೇಧ ನೀತಿಯ ಪರಂಪರೆಯು ಅಸಮಾನತೆಯನ್ನು ಬಲಪಡಿಸುತ್ತಿದೆ. ವಿಶ್ವದಲ್ಲಿ ಅತ್ಯಂತ ಅಸಮಾನ ದೇಶಗಳಲ್ಲಿ ದಕ್ಷಿಣ ಆಫ್ರಿಕಾದ ಇತರ ನೆರೆಯ ದೇಶಗಳಾದ ಬೋಟ್ಸ್ವಾನ, ಎಸ್ವಾಟಿನಿ, ಲೆಸೊಥೊ ಮತ್ತು ನಮೀಬಿಯಾ ದೇಶಗಳೂ ಅಗ್ರಸ್ಥಾನದಲ್ಲಿಯೇ ಕಾಣಿಸಿಕೊಂಡಿವೆ ಎಂದು ವರದಿ ಹೇಳಿದೆ.
ಆಫ್ರಿಕಾ ಪ್ರದೇಶದಲ್ಲಿ ಒಂದೇ ಮಟ್ಟದ ಶಿಕ್ಷಣ ಪಡೆದಿದ್ದರೂ ಮಹಿಳೆಯರು ಪುರುಷರಿಗಿಂತ 30% ಕಡಿಮೆ ಸಂಬಳ ಪಡೆಯುತ್ತಿದ್ದರೆ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಪ್ರಮಾಣ 38%ದಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಭೂಮಿಯ ಅಸಮಾನ ಹಂಚಿಕೆಯೂ ಅಸಮಾನತೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ನಮೀಬಿಯಾದಲ್ಲಿ 39.7 ಮಿಲಿಯನ್ ಹೆಕ್ಟೇರ್ ಪ್ರದೇಶದ 70%ದಷ್ಟು ವಾಣಿಜ್ಯ ಕೃಷಿ ಜಮೀನು ಈಗಲೂ ಯುರೋಪ್ ಮೂಲದ ನಮೀಬಿಯನ್ನರ ಬಳಿಯಿದೆ ಎಂದು ವರದಿ ಹೇಳಿದೆ. ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ ತಯಾರಿಸಲಾದ ಈ ವರದಿಯಲ್ಲಿ ಗಿನಿ ಗುಣಾಂಕವನ್ನು ಬಳಸಿ ಆದಾಯದ ಅಸಮಾನತೆಯನ್ನು ಲೆಕ್ಕ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News