ನಾಲ್ಕು ರಾಜ್ಯಗಳಲ್ಲಿ ಮತಗಳಿಕೆ ಹೆಚ್ಚಿಸಿಕೊಂಡ ಬಿಜೆಪಿ

Update: 2022-03-11 03:13 GMT

ಹೊಸದಿಲ್ಲಿ: ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಿರುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಆದರೆ ಉತ್ತರಾಖಂಡದಲ್ಲಿ ಮಾತ್ರ ಬಿಜೆಪಿ ಮತ ಗಳಿಕೆ ಕುಸಿದಿದೆ. ಪಂಜಾಬ್‌ನಲ್ಲಿ ಕೇವಲ ಎರಡು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೂ, ಮತಗಳಿಕೆ ಅಲ್ಪ ಏರಿಕೆ ಕಂಡಿದೆ.

ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ 38.67ರಷ್ಟು ಇದ್ದ ಬಿಜೆಪಿ ಮತಗಳಿಕೆ ಈ ಬಾರಿ ಶೇಕಡ 2.13ರಷ್ಟು ಹೆಚ್ಚಿ 41.8 ಶೇಕಡ ಆಗಿದೆ. ಆದರೆ ಪಕ್ಷ ಗೆದ್ದ ಸ್ಥಾನಗಳ ಸಂಖ್ಯೆ 312ರಿಂದ 274ಕ್ಕೆ ಇಳಿದಿದೆ. ಸಮಾಜವಾದಿ ಪಕ್ಷದ ಮತ ಪ್ರಮಾಣ 2017ರಲ್ಲಿ ಶೇಕಡ 21.82 ಇದ್ದುದು ಈ ಬಾರಿ 32.02 ಕ್ಕೆ ಏರಿದೆ. 124 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ ಅಥವಾ ಮುನ್ನಡೆಯಲ್ಲಿದೆ. ಹೀಗೆ ವಿರೋಧ ಪಕ್ಷವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಬಹುಜನ ಸಮಾಜ ಪಕ್ಷದ ಮತಗಳಿಕೆ ಕಳೆದ ಬಾರಿ ಶೇಕಡ 22.23 ಇದ್ದುದು ಈ ಬಾರಿ 12.66ಕ್ಕೆ ಕುಸಿದಿದೆ. ಐದು ವರ್ಷಗಳ ಹಿಂದೆ 19 ಸ್ಥಾನ ಗೆದ್ದಿದ್ದ ಬಿಎಸ್ಪಿ ಈ ಬಾರಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2017ರಲ್ಲಿ ಶೇಕಡ 6.25 ಮತ ಗಳಿಸಿದ್ದ ಕಾಂಗ್ರೆಸ್‌ನ ಗಳಿಕೆ ಈ ಬಾರಿ ಶೇಕಡ 2.4ಕ್ಕೆ ಕುಸಿದಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಮತಗಳಿಕೆ ಶೇಕಡ 10.2ರಷ್ಟು ಹೆಚ್ಚಿದ್ದರೆ, ಬಿಎಸ್ಪಿ ಗಳಿಕೆ ಶೇಕಡ 9.57ರಷ್ಟು ಕಡಿಮೆಯಾಗಿದೆ.

ಆದರೆ ಉತ್ತರಾಖಂಡದಲ್ಲಿ ಬಿಜೆಪಿ ಮತಗಳಿಕೆ 2017ರಲ್ಲಿ ಶೇಕಡ 46.5 ಇದ್ದುದು ಈ ಬಾರಿ ಶೇಕಡ 44.3ಕ್ಕೆ ಇಳಿದಿದೆ. 70 ಸ್ಥಾನಗಳ ಪೈಕಿ ಕಳೆದ ಬಾರಿ 57 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 47ಕ್ಕೆ ತೃಪ್ತಿಪಟ್ಟುಕೊಂಡಿದೆ. ಉತ್ತರಾಖಂಡ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಮತಗಳಿಕೆ ಕುಸಿದಿದೆ. ಉತ್ತರಾಖಂಡದಲ್ಲಿ ಮತಗಳಿಕೆ ಹೆಚ್ಚಿದ್ದರೂ ಅದು ಸೀಟುಗಳಾಗಿ ಪರಿವರ್ತನೆಯಾಗಿಲ್ಲ. ಕಳೆದ ಬಾರಿ 11 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಗೋವಾದಲ್ಲಿ ಬಿಜೆಪಿ ಮತ ಪ್ರಮಾಣ ಶೇಕಡ 32.5ರಿಂದ 33.3ಕ್ಕೇರಿದೆ. ಆದರೆ ಕಳೆದ ಬಾರಿಗಿಂತ ಏಳು ಸ್ಥಾನಗಳನ್ನು ಹೆಚ್ಚಾಗಿ ಗೆದ್ದುಕೊಂಡಿದೆ. ಈ ಕರಾವಳಿ ರಾಜ್ಯದಲ್ಲಿ ಕಾಂಗ್ರೆಸ್ ಮತಗಳಿಕೆ ಶೇಕಡ 28.4ರಿಂದ ಶೇಕಡ 23.5ಕ್ಕೆ ಇಳಿದಿದೆ. ಐದು ವರ್ಷಗಳ ಹಿಂದೆ 17 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 11ಕ್ಕೆ ತೃಪ್ತಿಪಟ್ಟುಕೊಂಡಿದೆ.

ಆಮ್ ಆದ್ಮಿ ಪಕ್ಷದ ಸಾಧನೆ ಪಂಜಾಬ್‌ನಲ್ಲಿ ಅಮೋಘವಾಗಿದ್ದು, ಕಳೆದ ಚುನಾವಣೆಯಲ್ಲಿ 20 ಸ್ಥಾನ ಹೊಂದಿದ್ದ ಪಕ್ಷ ಈ ಬಾರಿ 92ಕ್ಕೇರಿಸಿಕೊಂಡಿದೆ. ಮತ ಗಳಿಕೆ ಕೂಡಾ ಐದು ವರ್ಷಗಳ ಹಿಂದೆ ಶೇಕಡ 23.7 ಇದ್ದುದು ಶೇಕಡ 42ಕ್ಕೇರಿದೆ. ಇಲ್ಲಿ ಕಾಂಗ್ರೆಸ್ ಮತಗಳಿಕೆ ಶೇಕಡ 38.5ರಿಂದ 23ಕ್ಕೆ ಕುಸಿದಿದೆ. ಐದು ವರ್ಷ ಹಿಂದೆ 77 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 18ಕ್ಕೆ ತೃಪ್ತಿಪಟ್ಟಿದೆ. ಬಿಜೆಪಿ ಮತಪ್ರಮಾಣ ಶೇಕಡ 5.4ರಿಂದ 6.6ಕ್ಕೇರಿದೆ.

ಮಣಿಪುರದಲ್ಲಿ ಬಿಜೆಪಿ ಮತ ಗಳಿಕೆ ಶೇಕಡ 36.3ರಿಂದ 37.5ಕ್ಕೇರಿದೆ. ಸ್ಥಾನಗಳ ಸಂಖ್ಯೆ 21ರಿಂದ 32ಕ್ಕೇರಿದೆ. ಕಳೆದ ಬಾರಿ ಶೇಕಡ 35.1ರಷ್ಟು ಮತ ಗಳಿಸಿದ್ದ ಕಾಂಗ್ರೆಸ್ ಈ ಬಾರಿ 16.5 ಶೇಕಡ ಮತ ಮಾತ್ರ ಗಳಿಸಿದೆ. ಕೊನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮತ ಗಳಿಕೆ ಶೇಕಡ 5.1ರಿಂದ 16.48ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News