ಉತ್ತರಾಖಂಡ: ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಇಬ್ಬರಿಗೆ ಗೆಲುವು

Update: 2022-03-11 03:48 GMT
ಕಿಶೋರ್ ಉಪಾಧ್ಯಾಯ

ಡೆಹ್ರಾಡೂನ್: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ಇಬ್ಬರು ಪ್ರಮುಖ ಮುಖಂಡರು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅಂತೆಯೇ ಇಬ್ಬರು ಮಾಜಿ ಸಿಎಂಗಳು ಪುತ್ರಿಯರು ತಮ್ಮ ತಂದೆಯ ಸೋಲಿಗೆ ಆದ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರಾಖಂಡ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಮತ್ತು ಮಾಜಿ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ಆರ್ಯ ಕ್ರಮವಾಗಿ ತೆಹ್ರಿ ಮತ್ತು ನೈನಿತಾಲ್ ನಲ್ಲಿ ಗೆದ್ದಿದ್ದಾರೆ.

ಸರಿತಾ ಆರ್ಯ ಅವರು ಕುಮಾನ್ ಪ್ರದೇಶದ ಪ್ರಮುಖ ದಲಿತ ಮುಖಂಡ ಯಶಪಾಲ್ ಆರ್ಯ ಅವರ ಪುತ್ರ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಸಂಜೀವ್ ಆರ್ಯ ರನ್ನು ನೈನಿತಾಲ್ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಅಂತೆಯೇ ಉಪಾಧ್ಯಾಯ ಅವರು ಕಾಂಗ್ರೆಸ್‌ನ ದಿನೇಶ್ ಧಾನೈ ಅವರನ್ನು 951 ಮತಗಳ ಅಂತರದಿಂದ ತೆಹ್ರಿಯಲ್ಲಿ ಪರಾಭವಗೊಳಿಸಿದ್ದಾರೆ.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ರಾವತ್ ಸ್ವತಃ ಲಖೂವಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರೆ, ಅವರ ಪುತ್ರಿ ಅನುಪಮಾ ರಾವತ್ ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ ಸಚಿವ ಯತೀಶ್ವರಾನಂದ ಅವರನ್ನು 4472 ಮತಗಳ ಅಂತರದಿಂದ ಸೋಲಿಸಿ ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಭುವನಚಂದ್ರ ಖಂಡೂರಿಯವರ ಪುತ್ರಿ ರಿತು ಖಂಡೂರಿ ಭೂಷಣ್ ಕೂಡಾ ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದು, ಕೋತದ್ವಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುರೇಂದ್ರ ಸಿಂಗ್ ನೇಗಿ ಅವರನ್ನು 3687 ಮಗಳಿಂದ ಸೋಲಿಸಿದ್ದಾರೆ.

ಖಂಡೂರಿ 2012ರಲ್ಲಿ ಕೋತದ್ವಾರ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಹರೀಶ್ ರಾವತ್ ಹರಿದ್ವಾರ ಗ್ರಾಮೀಣ ಕ್ಷೇತ್ರದಲ್ಲಿ 2017ರಲ್ಲಿ ಪರಾಭವಗೊಂಡಿದ್ದರು. ಸಿಎಂ ಆಗಿ ಅಧಿಕಾರದಲ್ಲಿದ್ದ ಅವಧಿಯಲ್ಲೇ ಇಬ್ಬರೂ ಸೋಲು ಅನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News