ಬಿಜೆಪಿಯ ಗೆಲುವಿನ ಸ್ಥಾನಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇವೆ: ಅಖಿಲೇಶ್ ಯಾದವ್

Update: 2022-03-11 06:50 GMT

ಲಕ್ನೊ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ದಾಖಲೆಯ ಗೆಲುವಿನ ಮರುದಿನ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತದಾರರಿಗೆ ತನ್ನನ್ನು ಬೆಂಬಲಿಸಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.  ಬಿಜೆಪಿಯ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ತಾವು ತೋರಿಸಿಕೊಟ್ಟಿದ್ದೇವೆ  ಎಂದು ಅವರು ಹೇಳಿದರು.

ಇಂದು ಬೆಳಿಗ್ಗೆಈ ಕುರಿತು  ಟ್ವೀಟಿಸಿದ ಯಾದವ್, ತಮ್ಮ ಸ್ಥಾನಗಳ ಸಂಖ್ಯೆಯಲ್ಲಿ ಎರಡೂವರೆ ಪಟ್ಟು ಹೆಚ್ಚಳ ಮತ್ತು ಅವರ ಮತ ಹಂಚಿಕೆಯಲ್ಲಿ ಒಂದೂವರೆ ಪಟ್ಟು ಹೆಚ್ಚಳ ಮಾಡಿರುವ ರಾಜ್ಯದ ಮತದಾರರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

"ಬಿಜೆಪಿಯ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ನಾವು ತೋರಿಸಿದ್ದೇವೆ. ಈ ಕುಸಿತ ಮುಂದುವರಿಯುತ್ತದೆ. ಅರ್ಧಕ್ಕಿಂತ ಹೆಚ್ಚು ಸುಳ್ಳುಗಳನ್ನು ಅಳಿಸಿಹಾಕಲಾಗಿದೆ, ಉಳಿದವುಗಳನ್ನು ಸ್ವಲ್ಪ ದಿನಗಳಲ್ಲಿ ಮಾಡಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಹೋರಾಟವು ಮುಂದುವರಿಯುತ್ತದೆ" ಎಂದು ಅವರು ಫಲಿತಾಂಶಬಂದ ಬಳಿಕ ತಮ್ಮ ಮೊದಲ ಸಾರ್ವಜನಿಕ ಪ್ರತಿಕ್ರಿಯೆಯಲ್ಲಿ ಹೇಳಿದರು.

ರಾಜಕೀಯವಾಗಿ ಮಹತ್ವದ ರಾಜ್ಯದ 403 ಸ್ಥಾನಗಳ ಪೈಕಿ ಬಿಜೆಪಿ ಹಾಗೂ  ಅದರ ಮಿತ್ರಪಕ್ಷಗಳು ಒಟ್ಟು 273 ಸ್ಥಾನಗಳನ್ನು ಗೆದ್ದಿವೆ. 2017ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸರಕಾರವನ್ನು ಪದಚ್ಯುತಗೊಳಿಸಿದಾಗ ಗಳಿಸಿದ ಸ್ಥಾನಕ್ಕಿಂತ 49 ಸ್ಥಾನಗಳು ಕುಸಿತವಾಗಿದೆ.

ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಸ್ವಂತ ಬಲದಿಂದ 111 ಸ್ಥಾನಗಳನ್ನು ಗೆದ್ದುಕೊಂಡಿತು ಹಾಗೂ ಅದರ ಮೈತ್ರಿಪಕ್ಷಗಳೊಟ್ಟಿಗೆ ಸೇರಿ ಒಟ್ಟು 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2017 ರ ಚುನಾವಣೆಗಿಂತ 73 ಹೆಚ್ಚು ಸ್ಥಾನ ಗಳಿಸಿದೆ. ಇದು ಸಮಾಜವಾದಿ ಪಕ್ಷದ ಅತ್ಯುತ್ತಮ ಪ್ರದರ್ಶನವೂ ಆಗಿದೆ.

ಮತ ಹಂಚಿಕೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು ಶೇಕಡಾ 32 ರಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯು ಶೇಕಡಾ 41 ರಷ್ಟು ಮತ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News