ಯುದ್ಧದಲ್ಲಿ ರಶ್ಯ ಸೇನೆಗೆ ವ್ಯಾಪಕ ನಷ್ಟ: 8 ಉನ್ನತ ಅಧಿಕಾರಿಗಳ ವಜಾಗೊಳಿಸಿದ ಪುಟಿನ್; ಉಕ್ರೇನ್ ಹೇಳಿಕೆ
ಕೀವ್, ಮಾ.11: ಉಕ್ರೇನ್ ವಿರುದ್ಧದ ಯುದ್ಧವನ್ನು ಸುಲಭದಲ್ಲಿ ಗೆಲ್ಲಬಹುದು ಎಂಬ ರಶ್ಯ ಅಧ್ಯಕ್ಷ ಪುಟಿನ್ ಲೆಕ್ಕಾಚಾರ ತಲೆಕೆಳಗಾಗಿದ್ದು ಯುದ್ಧದಲ್ಲಿ ರಶ್ಯ ಸೇನೆಗೆ ಆಗಿರುವ ಭಾರೀ ನಷ್ಟದಿಂದ ತೀವ್ರ ಆಕ್ರೋಶಗೊಂಡು ಗುಪ್ತಚರ ಪಡೆ ಹಾಗೂ ಸೇನಾಪಡೆಯ 8 ಉನ್ನತ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ಉಕ್ರೇನ್ನ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಒಲೆಕ್ಸಿ ಡ್ಯನಿಲೊವ್ ಹೇಳಿದ್ದಾರೆ.
ಯೋಜಿಸಿದ ರೀತಿಯಲ್ಲಿ ಮುನ್ನಡೆ ಸಾಧ್ಯವಾಗದೆ ಪುಟಿನ್ ಹತಾಶರಾಗಿದ್ದು ಇದುವರೆಗೆ 8 ಉನ್ನತ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ. ಇವರ ಸ್ಥಾನದಲ್ಲಿ ನೂತನ ಸೇನಾ ಮುಖಂಡರನ್ನು ನೇಮಕಗೊಳಿಸಿ ಸಮರ ತಂತ್ರಗಾರಿಕೆಯನ್ನು ಬದಲಾಯಿಸಲಾಗಿದೆ. ರಶ್ಯ ಒಕ್ಕೂಟದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಉಕ್ರೇನ್ ದೇಶ ಇಷ್ಟೊಂದು ಒಗ್ಗಟ್ಟಾಗಿರುತ್ತದೆ ಎಂದು ರಶ್ಯ ಯಾವತ್ತೂ ಭಾವಿಸಿರಲಿಲ್ಲ . ಅವರು ಹತಾಶರಾಗಿದ್ದಾರೆ ಎಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಪುಟಿನ್ ತುಂಬಾ ಆಕ್ರೋಶಗೊಂಡಿದ್ದು ತಮ್ಮ ಗುಪ್ತಚರ ಪಡೆಯನ್ನು ದೂಷಿಸುತ್ತಿದ್ದಾರೆ. ಉಕ್ರೇನ್ ದುರ್ಬಲವಾಗಿದ್ದು ಸುಲಭದಲ್ಲಿ ಶರಣಾಗಬಹುದು ಎಂದು ವರದಿ ನೀಡಿದ್ದ ಎಫ್ಎಸ್ಬಿ(ರಶ್ಯ ಗುಪ್ತಚರ ವಿಭಾಗ)ಯ ಕಮಾಂಡರ್ಗಳ ವಿರುದ್ಧ ಕೆಂಡಕಾರುತ್ತಿದ್ದಾರೆ ಎಂದು ಭದ್ರತಾ ತಜ್ಞ, ಬ್ರಿಟನ್ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಫಿಲಿಪ್ ಇಂಗ್ರಾಮ್ ಹೇಳಿದ್ದಾರೆ. ಫೆ.24ರಂದು ಉಕ್ರೇನ್ ಮೇಲಿನ ರಶ್ಯ ಆಕ್ರಮಣ ಆರಂಭವಾಗಿದ್ದು ಉಕ್ರೇನ್ ರಾಜಧಾನಿ ಕೀವ್ ವಶಪಡಿಸಿಕೊಳ್ಳುವ ರಶ್ಯ ಪಡೆಯ ಪ್ರಯತ್ನ ಇದುವರೆಗೆ ಸಫಲವಾಗಿಲ್ಲ. ಮತ್ತೊಂದು ನಗರ ನಿಪ್ರೊದ ಮೇಲೆ ನಿರಂತರ ವಾಯುದಾಳಿ ನಡೆಸುತ್ತಿದೆ. ಇದುವರೆಗೆ ರಶ್ಯದ ದಾಳಿಯಲ್ಲಿ ಉಕ್ರೇನ್ನ 3,213 ಸೇನಾ ನೆಲೆಗಳಿಗೆ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ, ಕೀವ್ನ ಉತ್ತರಭಾಗದಲ್ಲಿ ರಶ್ಯ ಸೇನೆಯನ್ನು ಜಮಾವಣೆಗೊಳಿಸಿರುವುದು ಉಪಗ್ರಹದ ಚಿತ್ರಗಳಿಂದ ದೃಢಪಟ್ಟಿದೆ. ಈ ಮಾರ್ಗದ ಮೂಲಕ ಕೀವ್ನತ್ತ ನುಗ್ಗಲು ರಶ್ಯಾ ಯೋಜನೆ ರೂಪಿಸಿದೆ ಎಂದು ಅಮೆರಿಕದ ಮಾಕ್ಸರ್ ಟೆಕ್ನಾಲಜೀಸ್ ಸಂಸ್ಥೆ ಹೇಳಿದೆ.