ಪೆಲೆಸ್ತೀನಿಯನ್ ಸಂಗಾತಿಗಳಿಗೆ ಪ್ರಜಾಹಕ್ಕು ನಿಷೇಧಿಸುವ ʼಪೌರತ್ವ ಕಾಯ್ದೆʼಗೆ ಇಸ್ರೇಲ್ ಸಂಸತ್ತು ಅನುಮೋದನೆ‌

Update: 2022-03-11 18:34 GMT

 ಜೆರುಸಲೇಂ, ಮಾ.11: ಆಕ್ರಮಿತ ಪಶ್ಚಿಮದಂಡೆ ಅಥವಾ ಗಾಝಾ ಪಟ್ಟಿಯಲ್ಲಿನ ಪೆಲೆಸ್ತೀನಿಯರು ಇಸ್ರೇಲ್ ಪ್ರಜೆಗಳನ್ನು ವಿವಾಹವಾಗಿ ಪ್ರಜಾಹಕ್ಕುಗಳನ್ನು ಪಡೆಯುವುದನ್ನು ನಿಷೇಧಿಸುವ ಕಾನೂನಿಗೆ ಇಸ್ರೇಲ್ ಸಂಸತ್ತು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಇದರಿಂದ ಸಾವಿರಾರು ಪೆಲೆಸ್ತೀನ್ ಕುಟುಂಬಗಳು ವಲಸೆ ಹೋಗುವ ಅಥವಾ ಪ್ರತ್ಯೇಕವಾಗಿ ಜೀವಿಸುವ ಅನಿವಾರ್ಯತೆ ಎದುರಾಗಿದೆ. ‌

ʼಪೌರತ್ವ ಕಾಯ್ದೆʼ ಎಂಬ ಹೆಸರಿನ ಕಾನೂನಿಗೆ ಇಸ್ರೇಲ್ ಸಂಸತ್ತಿನಲ್ಲಿ 45-15 ಮತಗಳಿಂದ ಅನುಮೋದನೆ ದೊರಕಿದೆ. ಇದುವರೆಗೆ ಚಾಲ್ತಿಯಲ್ಲಿದ್ದ, ಇದೇ ಉದ್ದೇಶದ ತಾತ್ಕಾಲಿಕ ಕಾಯ್ದೆಯ ಸ್ಥಾನದಲ್ಲಿ ಈ ಕಾಯ್ದೆ ಜಾರಿಯಾಗಲಿದೆ. 2003ರಲ್ಲಿ ಅಂಗೀಕಾರಗೊಂಡಿದ್ದ ತಾತ್ಕಾಲಿಕ ಕಾಯ್ದೆಯನ್ನು ಪ್ರತೀ ವರ್ಷ ನವೀಕರಿಸಲಾಗುತ್ತಿತ್ತು. ಆದರೆ ಬಹುಮತದ ಕೊರತೆಯಿಂದ ಕಳೆದ ಜುಲೈಯಲ್ಲಿ ತಾತ್ಕಾಲಿಕ ಮಸೂದೆಯ ನವೀಕರಣ ಸಾಧ್ಯವಾಗಿಲ್ಲ. 

ಇಸ್ರೇಲ್ ದೇಶದ ಭದ್ರತೆ ಮತ್ತು ಯೆಹೂದಿ ದೇಶವಾಗಿ ಅದರ ಬಲವರ್ಧನೆಗೆ ಪೂರಕವಾದ ಕಾಯ್ದೆಗೆ ಅನುಮೋದನೆ ಪಡೆಯಲು ಸಮ್ಮಿಶ್ರ ಸರಕಾರ ಮತ್ತು ವಿಪಕ್ಷಗಳ ಶಕ್ತಿಗಳು ಯಶಸ್ವಿಯಾಗಿವೆ ಎಂದು ಇಸ್ರೇಲ್ ನ ಆಂತರಿಕ ಸಚಿವಾಲಯ ಹೇಳಿದೆ. 120 ಸದಸ್ಯ ಬಲದ ಸಂಸತ್ತಿನಲ್ಲಿ ಹಲವು ಸದಸ್ಯರು ಮತದಾನದಲ್ಲಿ ಭಾಗವಹಿಸಲಿಲ್ಲ. ನೂತನ ಕಾಯ್ದೆ ಒಂದು ವರ್ಷದ ವಾಯಿದೆ ಹೊಂದಿದ್ದು ಇದರ ಪ್ರಕಾರ, ಇಸ್ರೇಲ್ ಪ್ರಜೆಗಳ ಪೆಲೆಸ್ತೀನ್ ಸಂಗಾತಿ(ಪತಿ/ಪತ್ನಿ) 2 ವರ್ಷದ ತಾತ್ಕಾಲಿಕ ನಿವಾಸ ಪರವಾನಿಗೆ(ರೆಸಿಡೆನ್ಸಿ ಪರ್ಮಿಟ್) ಪಡೆಯಬಹುದು. ಆದರೆ ಭದ್ರತೆಯ ಕಾರಣಕ್ಕೆ ಇದನ್ನು ಯಾವಾಗ ಬೇಕಾದರೂ ರದ್ದುಗೊಳಿಸಬಹುದಾಗಿದೆ. 

1948ರ ಇಸ್ರೇಲ್-ಪೆಲೆಸ್ತೀನ್ ಯುದ್ಧದ ಸಂದರ್ಭ ಮನೆಬಿಟ್ಟು ಪಲಾಯನ ಮಾಡಿರುವ ಸಾವಿರಾರು ಪೆಲೆಸ್ತೀನೀಯರು ಮತ್ತೆ ತಮ್ಮ ಮನೆಗೆ ಮರಳುವ ಹಕ್ಕನ್ನು ಪ್ರತಿಪಾದಿಸುವುದನ್ನು ತಡೆಯುವ ಉದ್ದೇಶದ ಕಾಯ್ದೆ ಇದಾಗಿದೆ ಎಂದು ಸಂಸತ್ತಿನ ಸದಸ್ಯರು ಹೇಳಿದ್ದಾರೆ. ಇಸ್ರೇಲ್ ದೇಶವು ಯಹೂದಿ ಸ್ವರೂಪವನ್ನು ಹೊಂದಿದೆ ಮತ್ತು ಹೀಗೆಯೇ ಮುಂದುವರಿಯಲಿದೆ ಎಂದು ಕಟ್ಟಾ ಬಲಪಂಥೀಯ ಪಕ್ಷ ಝಿಯೊನಿಸ್ಟ್ ಪಕ್ಷದ ಸದಸ್ಯ ಸಿಮ್ಚ ರಾಥ್ಮನ್ ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News