×
Ad

ಪ್ರಥಮ ದರ್ಜೆ ಕ್ರಿಕೆಟ್‌ನಿಂದ ರವಿತೇಜ ನಿವೃತ್ತಿ

Update: 2022-03-12 12:38 IST

ಹೈದರಾಬಾದ್, ಮಾ.11: ಸುಮಾರು 16 ವರ್ಷಗಳ ವೃತ್ತಿಜೀವನದಲ್ಲಿ ಹೈದರಾಬಾದ್, ಆಂಧ್ರ ಹಾಗೂ ಮೇಘಾಲಯ ತಂಡಗಳಲ್ಲಿ ಆಡಿದ್ದ ಹೈದರಾಬಾದ್‌ನ ಮಾಜಿ ನಾಯಕ ಡಿ.ಬಿ. ರವಿತೇಜ ಶುಕ್ರವಾರ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾದರು. 34ರ ಹರೆಯದ ತೇಜ 2006ರಲ್ಲಿ ಕರಾಡ್‌ನಲ್ಲಿ ಮಹಾರಾಷ್ಟ್ರದ ವಿರುದ್ಧ ಚೊಚ್ಚಲ ರಣಜಿ ಪಂದ್ಯವನ್ನು ಆಡಿದ್ದರು. ಈ ತಿಂಗಳಾರಂಭದಲ್ಲಿ ರಾಜ್‌ಕೋಟ್‌ನಲ್ಲಿ ಗುಜರಾತ್ ವಿರುದ್ಧ ಮೇಘಾಲಯದ ಪರವಾಗಿ ತನ್ನ ಕೊನೆಯ ಪಂದ್ಯವನ್ನು ಆಡಿದ್ದರು. ‘‘ಈ ಅದ್ಭುತ ಕ್ರಿಕೆಟ್ ಪಂದ್ಯದಲ್ಲಿ ದೀರ್ಘ ವೃತ್ತಿಜೀವನ ಪೂರೈಸಿದ ಬಳಿಕ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ನನ್ನ ವೃತ್ತಿಬದುಕಿನ ವಿಭಿನ್ನ ದಿಕ್ಕಿನತ್ತ ಮುನ್ನಡೆಯುತ್ತಿರುವೆ’’ಎಂದು ಸಾಮಾಜಿಕ ಮಾಧ್ಯಮದಲ್ಲಿ ರವಿ ತೇಜ ಪೋಸ್ಟ್ ಮಾಡಿದ್ದಾರೆ. ರವಿ ತೇಜ ಅಂಡರ್-19 ತಂಡದ ಖಾಯಂ ಆರಂಭಿಕ ಬ್ಯಾಟರ್ ಆಗಿದ್ದರು. ರವಿ ತೇಜ 78 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 12 ಶತಕ ಹಾಗೂ 22 ಅರ್ಧಶತಕಗಳ ಸಹಿತ ಒಟ್ಟು 4,722 ರನ್ ಗಳಿಸಿದ್ದಾರೆ. ಔಟಾಗದೆ 204 ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 85 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ರವಿ ತೇಜ 2,942 ರನ್ ಗಳಿಸಿದ್ದರು. 89 ಟ್ವೆಂಟಿ-20 ಪಂದ್ಯಗಳಲ್ಲಿ 1,618 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News