ಜನರ ಗುಂಪಿನ ಮೇಲೆ ಹರಿದ ಶಾಸಕರ ವಾಹನ: 7 ಪೊಲೀಸರು ಸೇರಿದಂತೆ 22 ಮಂದಿಗೆ ಗಾಯ
ಭುವನೇಶ್ವರ,ಮಾ.12: ಅಮಾನತುಗೊಂಡಿರುವ ಬಿಜೆಡಿ ಶಾಸಕ ಪ್ರಶಾಂತ ಜಗದೇವ್ ಅವರ ಕಾರು ಗುಂಪೊಂದರ ಮೇಲೆ ನುಗ್ಗಿದ ಪರಿಣಾಮ ಏಳು ಪೊಲೀಸರು ಸೇರಿದಂತೆ ಕನಿಷ್ಠ 22 ಜನರು ಗಾಯಗೊಂಡಿರುವ ಘಟನೆ ಒಡಿಶಾದ ಖುರ್ದಾ ಜಿಲ್ಲೆಯ ಬಾನಪುರದಲ್ಲಿ ನಡೆದಿದೆ.
ಬಾನಪುರ ಬಿಡಿಒ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರ ಚುನಾವಣೆ ನಡೆಯುತ್ತಿದ್ದಾಗ ಹೊರಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಆಗಮಿಸಿದ್ದ ಚಿಲಿಕಾ ಶಾಸಕ ಜಗದೇವ್ ಕಾರು ನೇರವಾಗಿ ಗುಂಪಿನ ಮೇಲೆಯೇ ನುಗ್ಗಿತ್ತು. ಆಕ್ರೋಶಿತ ಜನರು ಜಗದೇವ್ರನ್ನು ಹಿಗ್ಗಾಮುಗ್ಗಾ ಥಳಿಸಿದ್ದು,ತೀವ್ರವಾಗಿ ಗಾಯಗೊಂಡಿರುವ ಅವರನ್ನು ಭುವನೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಾನಪುರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಆರ್.ಆರ್.ಸಾಹು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.
ಸುಮಾರು 15 ಬಿಜೆಪಿ ಕಾರ್ಯಕರ್ತರು ಮತ್ತು ಏಳು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈವರೆಗೆ ಯಾವುದೇ ಸಾವು ವರದಿಯಾಗಿಲ್ಲ. ಘಟನೆಯ ಕುರಿತು ತನಿಖೆಯು ಆರಂಭಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಪಕ್ಷವಿರೋಧಿ ಚಟುವಟಿಕೆಗಳಿಗಾಗಿ ಜಗದೇವ್ ಅವರನ್ನು ಕಳೆದ ವರ್ಷ ಅಮಾನತುಗೊಳಿಸಲಾಗಿತ್ತು.