×
Ad

ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಬೇಕಿದೆ: ಉನ್ನತಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ

Update: 2022-03-13 21:01 IST

ಹೊಸದಿಲ್ಲಿ,ಮಾ.13: ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿ ಜಾಗತಿಕ ಸನ್ನಿವೇಶಗಳ ಪುನರ್ಪರಿಶೀಲನೆಗಾಗಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆಯನ್ನು ನಡೆಸಲಾಗಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್,ವಿತ್ತಸಚಿವೆ ನಿರ್ಮಲಾ ಸೀತಾರಾಮನ್,ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್,ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು,ಇತರ ಹಿರಿಯ ಸರಕಾರಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡವರಲ್ಲಿ ಸೇರಿದ್ದರು.ಭಾರತೀಯ ಪ್ರಜೆಗಳು ಮತ್ತು ಭಾರತದ ನೆರೆಯ ದೇಶಗಳ ಕೆಲವು ಪ್ರಜೆಗಳನ್ನು ತೆರವುಗೊಳಿಸಲು ನಡೆಸಲಾಗಿದ್ದ ಆಪರೇಷನ್ ಗಂಗಾದ ವಿವರಗಳು ಸೇರಿದಂತೆ ಉಕ್ರೇನ್ನಲ್ಲಿಯ ಇತ್ತೀಚಿನ ಬೆಳವಣಿಗೆಗಳ ಕುರಿತು ಅಧಿಕಾರಿಗಳು ಪ್ರಧಾನಿಯವರಿಗೆ ವಿವರಿಸಿದರು ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನಿಯವರಿಗೆ ನೀಡಲಾದ ಮಾಹಿತಿಗಳಲ್ಲಿ ಗಡಿ ಪ್ರದೇಶಗಳಲ್ಲಿ,ಸಾಗರ ಹಾಗೂ ವಾಯು ಪ್ರದೇಶದಲ್ಲಿಯ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತದ ಭದ್ರತಾ ಸನ್ನದ್ಧತೆಯ ಕುರಿತು ವಿವಿಧ ಅಂಶಗಳೂ ಒಳಗೊಂಡಿದ್ದವು.ಖಾರ್ಕಿವ್‌ನಲ್ಲಿ ರಷ್ಯದ ಶೆಲ್ ದಾಳಿಯಲ್ಲಿ ಮೃತಪಟ್ಟ ನವೀನ ಶೇಖರಪ್ಪ ಗ್ಯಾನಗೌಡರ್ ಅವರ ಮೃತದೇಹವನ್ನು ಸ್ವದೇಶಕ್ಕೆ ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಡೆಸುವಂತೆ ಮೋದಿ ನಿರ್ದೇಶ ನೀಡಿದರು.

ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಪ್ರತಿಯೊಂದೂ ಪ್ರಯತ್ನವನ್ನು ಮಾಡಬೇಕು ಎಂದು ಒತ್ತಿ ಹೇಳಿದ ಮೋದಿ,ಅದು ದೇಶದ ಭದ್ರತೆಯನ್ನು ಬಲಗೊಳಿಸುವುದು ಮಾತ್ರವಲ್ಲ,ಆರ್ಥಿಕ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ ಎಂದರು.
ಗುರುವಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಮೋದಿ,ಭಾರತದ ಅಗತ್ಯಗಳು ರಷ್ಯ ಮತ್ತು ಉಕ್ರೇನ್ ಎರಡರೊಂದಿಗೂ ಸಂಬಂಧಿಸಿವೆ,ಆದರೆ ದೇಶವು ಶಾಂತಿಯ ಪರವಾಗಿದೆ ಮತ್ತು ಮಾತುಕತೆಗಳ ಮೂಲಕ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಆಶಿಸಿದೆ ಎಂದು ಹೇಳಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News