×
Ad

ಪಶ್ಚಿಮ ಬಂಗಾಳ: ಟಿಎಂಸಿ, ಕಾಂಗ್ರೆಸ್ ಕೌನ್ಸಿಲರ್‌ಗಳ ಗುಂಡಿಕ್ಕಿ ಹತ್ಯೆ

Update: 2022-03-14 10:36 IST

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪಾನಿಹಟಿ ಮತ್ತು ಝಲ್ಡಾ ಪ್ರದೇಶಗಳಲ್ಲಿ ರವಿವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಟಿಎಂಸಿ ಹಾಗೂ ಕಾಂಗ್ರೆಸ್‌ನ ಇಬ್ಬರು ಚುನಾಯಿತ ಕೌನ್ಸಿಲರ್‌ಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಪಾನಿಹಟಿ ಪುರಸಭೆಯ ವಾರ್ಡ್ ಸಂಖ್ಯೆ 8ರ ಟಿಎಂಸಿ ಕೌನ್ಸಿಲರ್ ಅನುಪಮ್ ದತ್ತಾ ಅವರು ಸಂಜೆ ಅಗರ್‌ಪಾರಾದ ಉತ್ತರ ಸ್ಟೇಷನ್ ರಸ್ತೆಯಲ್ಲಿರುವ ಉದ್ಯಾನವನಕ್ಕೆ ತೆರಳುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಅಪರಿಚಿತ ಯುವಕರು ಸಮೀಪದಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೌನ್ಸಿಲರ್‌ಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಪುರುಲಿಯಾ ಜಿಲ್ಲೆಯ ಝಲ್ಡಾ ಮುನ್ಸಿಪಾಲಿಟಿಯಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಕೌನ್ಸಿಲರ್ ಆಗಿದ್ದ ತಪನ್ ಕಂದು ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಇನ್ನೋರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೌನ್ಸಿಲರ್ ಅವರು ತಮ್ಮ ವಾರ್ಡ್ ಸಂಖ್ಯೆ 2ರ ನಿವಾಸದ ಬಳಿ ಸಂಜೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದ್ದಾರೆ ಎಂದು ಅವರು ಹೇಳಿದರು.

ನೆಲಕ್ಕೆ ಕುಸಿದು ಬಿದ್ದಿದ್ದ ಕಂದು ಅವರನ್ನು ಸ್ಥಳೀಯರು ನೆರೆಯ ಜಾರ್ಖಂಡ್‌ನ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ವೈದ್ಯರು ಕಂದು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಕಂದು ಕಳೆದ ತಿಂಗಳು ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಝಲ್ಡಾ ಪುರಸಭೆಯ ವಾರ್ಡ್ ಸಂಖ್ಯೆ ಎರಡರಿಂದ ಗೆದ್ದಿದ್ದಾರೆ ಹಾಗೂ ಈ ಪ್ರದೇಶದಲ್ಲಿ ಜನಪ್ರಿಯ ನಾಯಕರಾಗಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News