'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರ ವೀಕ್ಷಿಸಲು ಪೊಲೀಸರಿಗೆ ರಜೆ ನೀಡಲಿರುವ ಮಧ್ಯಪ್ರದೇಶ ಸರಕಾರ

Update: 2022-03-14 08:16 GMT

ಭೋಪಾಲ್: ಇತ್ತೀಚೆಗೆ ಬಿಡುಗಡೆಯಾಗಿರುವ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' ವೀಕ್ಷಿಸಲು ರಾಜ್ಯದ ಪೊಲೀಸರಿಗೆ ರಜೆ ನೀಡಲಾಗುವುದು ಎಂದು ಮಧ್ಯ ಪ್ರದೇಶ ಸರಕಾರ ಸೋಮವಾರ ಘೋಷಿಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಸುಧೀರ್ ಸಕ್ಸೇನಾ ಅವರಿಗೆ ಪೊಲೀಸರಿಗೆ ರಜೆ ನಿಡುವ ಕುರಿತು ಸೂಚನೆಗಳನ್ನು ನೀಡಲಾಗಿದೆ ಎಂದರು.

ಈ ಚಲನಚಿತ್ರಕ್ಕೆ ರಾಜ್ಯದಲ್ಲಿ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ರವಿವಾರವಷ್ಟೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದರು.

ರವಿವಾರ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ, "90ರ ದಶಕದಲ್ಲಿ ಕಾಶ್ಮೀರಿ ಹಿಂದುಗಳು ಅನುಭವಿಸಿದ ಯಾತನೆ, ನೋವುಗಳ ಮನತಟ್ಟುವ ಚಿತ್ರಣ,'' ಎಂದು ದಿ ಕಾಶ್ಮೀರ್ ಫೈಲ್ಸ್ ಅನ್ನು ವರ್ಣಿಸಿದ್ದರಲ್ಲದೆ ಈ ಚಿತ್ರವನ್ನು ಗರಿಷ್ಠ ಜನರು ವೀಕ್ಷಿಸಬೇಕೆಂಬ ಕಾರಣಕ್ಕೆ ಅದಕ್ಕೆ ರಾಜ್ಯ ಸರಕಾರ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದರು.

ವಿವೇಕ್ ಅಗ್ನಿಹೋತ್ರಿ ಅವರು ರಚಿಸಿ ನಿರ್ದೇಶಿಸಿರುವ ಹಾಗೂ ಝೀ ಸ್ಟುಡಿಯೋಸ್ ನಿರ್ಮಾಣದ ಈ ಚಲನಚಿತ್ರದಲ್ಲಿ ಪಾಕ್ ಮೂಲದ ಉಗ್ರರಿಂದ ನಿರಂತರ ಹತ್ಯೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಕಾಶ್ಮೀರಿ ಹಿಂದುಗಳು ರಾಜ್ಯ ಬಿಟ್ಟು ವಲಸೆ ಹೋಗುವ ಚಿತ್ರಣವಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಷಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News