ದ್ವಿತೀಯ ಟೆಸ್ಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

Update: 2022-03-14 13:40 GMT

ಬೆಂಗಳೂರು, ಮಾ.14: ನಾಯಕ ಡಿ.ಕರುಣರತ್ನೆ ಶತಕದ(107 ರನ್)ಹೊರತಾಗಿಯೂ ಶ್ರೀಲಂಕಾವನ್ನು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 208 ರನ್‌ಗೆ ನಿಯಂತ್ರಿಸಿದ ಭಾರತವು ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು 238 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಮೂರನೇ ದಿನದಾಟವಾದ ಸೋಮವಾರ ಗೆಲ್ಲಲು 447 ರನ್ ಗುರಿ ಪಡೆದಿದ್ದ ಶ್ರೀಲಂಕಾವು ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್(4-55) ,ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(3-23) ಹಾಗೂ ಅಕ್ಷರ್‌ ಪಟೇಲ್(2-37) ಕರಾರುವಾಕ್ ದಾಳಿಗೆ ತತ್ತರಿಸಿ 59.3 ಓವರ್‌ಗಳಲ್ಲಿ 208 ರನ್‌ಗೆ ಆಲೌಟಾಯಿತು.

ರವಿವಾರ 2ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದ ಲಂಕ ತಂಡವನ್ನು ಇಂದು ಕರುಣರತ್ನೆ(107 ರನ್, 174 ಎಸೆತ, 15 ಬೌಂ.) ಹಾಗೂ ಕುಸಾಲ್ ಮೆಂಡಿಸ್(54, 60 ಎಸೆತ, 8 ಬೌಂಡರಿ) 2ನೇ ವಿಕೆಟಿಗೆ 97 ರನ್ ಜೊತೆಯಾಟ ನಡೆಸುವುದರೊಂದಿಗೆ ಆಸರೆಯಾದರು. ಆದರೆ ಈ ಇಬ್ಬರು ಔಟಾದ ಬಳಿಕ ಶ್ರೀಲಂಕಾ ಎಂದಿನಂತೆ ಕುಸಿತದ ಹಾದಿ ಹಿಡಿಯಿತು.

ಡೇಲ್ ಸ್ಟೇಯ್ನ್ ದಾಖಲೆ ಮುರಿದ ಅಶ್ವಿನ್

ಬೆಂಗಳೂರು, ಮಾ.14: ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಸೋಮವಾರ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಅವರ ಗರಿಷ್ಠ ಟೆಸ್ಟ್ ವಿಕೆಟ್ ದಾಖಲೆ(439 ವಿಕೆಟ್)ಯನ್ನು ಮುರಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ 8ನೇ ಬೌಲರ್ ಆಗಿ ಹೊರಹೊಮ್ಮಿದರು.
 
ಅಶ್ವಿನ್ ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನವಾದ ಸೋಮವಾರ ಧನಂಜಯ ಡಿ'ಸಿಲ್ವಾ ವಿಕೆಟನ್ನು ಪಡೆಯುವುದರೊಂದಿಗೆ 440ನೇ ಟೆಸ್ಟ್ ವಿಕೆಟ್ ಪಡೆದರು. ಇದರೊಂದಿಗೆ ಸ್ಟೇಯ್ನ್ ದಾಖಲೆ ಮುರಿದರು. ಮುತ್ತಯ್ಯ ಮುರಳೀಧರನ್(800), ಶೇನ್ ವಾರ್ನ್(708)ಹಾಗೂ ಜೇಮ್ಸ್ ಆ್ಯಂಡರ್ಸನ್(640)ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ-3 ಸ್ಥಾನದಲ್ಲಿದ್ದಾರೆ. ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್(537) ಬಳಿಕ ಅಶ್ವಿನ್ ಸಕ್ರಿಯರಾಗಿರುವ ಮೂರನೇ ಬೌಲರ್ ಆಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ(619 ವಿಕೆಟ್)ಬಳಿಕ ಅಶ್ವಿನ್ ಎರಡನೇ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ ಆಗಿದ್ದಾರೆ. ಮೊಹಾಲಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಒಟ್ಟು 434 ವಿಕೆಟ್‌ಗಳನ್ನು ಕಬಳಿಸಿದ್ದ ಅಶ್ವಿನ್ ಭಾರತದ ದಂತಕತೆ ಕಪಿಲ್‌ದೇವ್ ದಾಖಲೆಯನ್ನು ಮುರಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News