×
Ad

ಚೀನಾ ಸಂಸ್ಥೆಗಳಿಗೆ ದತ್ತಾಂಶ ಸೋರಿಕೆ ವರದಿ ಸುಳ್ಳು: ಪೇಟಿಎಂ

Update: 2022-03-14 22:36 IST

ಹೊಸದಿಲ್ಲಿ, ಮಾ. 14: ಚೀನಾ ಸಂಸ್ಥೆಗಳಿಗೆ ದತ್ತಾಂಶ ಸೋರಿಕೆ ಮಾಡಿದೆ ಎಂದು ಹೇಳುವ ವರದಿ ಸುಳ್ಳು ಹಾಗೂ ಕೋಲಾಹಲಕಾರಿಯಾಗಿದೆ ಎಂದು ಪೇಟಿಎಂ ಬ್ಯಾಂಕ್ ಸೋಮವಾರ ಹೇಳಿದೆ.

ಪೇಟಿಎಂ ಪಾವತಿ ಬ್ಯಾಂಕ್‌ನಲ್ಲಿ ಪರೋಕ್ಷವಾಗಿ ಪಾಲು ಹೊಂದಿರುವ ಚೀನಾ ಮೂಲದ ಸಂಸ್ಥೆಗಳೊಂದಿಗೆ ಕಂಪೆನಿಯ ಸರ್ವರ್‌ಗಳು ಮಾಹಿತಿ ಹಂಚಿಕೊಳ್ಳುತ್ತಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪತ್ತೆ ಮಾಡಿದೆ ಎಂದು ಸುದ್ದಿ ಸಂಸ್ಥೆ ಬ್ಲೂಮ್‌ಬರ್ಗ್ ವರದಿ ಮಾಡಿತ್ತು. ಈ ಆರೋಪವನ್ನು ನಿರಾಕರಿಸಿರುವ ಪೇಟಿಎಂ ಬ್ಯಾಂಕ್, ಪೇಟಿಎಂ ಪಾವತಿ ಬ್ಯಾಂಕ್ ಸಂಪೂರ್ಣ ಸ್ವದೇಶಿ ಬ್ಯಾಂಕ್ ಆಗಿರುವುದಕ್ಕೆ ಹೆಮ್ಮೆ ಪಡುತ್ತದೆ. ದತ್ತಾಂಶ ಸ್ಥಳೀಕರಣದ ಕುರಿತು ಆರ್‌ಬಿಐಯ ನಿರ್ದೇಶನಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ. ಬ್ಯಾಂಕ್‌ನ ಎಲ್ಲ ದತ್ತಾಂಶಗಳು ಭಾರತದ ಒಳಗೇ ಇದೆ ಎಂದಿದೆ. ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟೇ ಪ್ರತಿಕ್ರಿಯಸಬೇಕಿದೆ.

 ಹೊಸ ಗ್ರಾಹಕರನ್ನು ನೋಂದಾಯಿಸಿಕೊಳ್ಳುವುದನ್ನು ನಿಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಶುಕ್ರವಾರ ಪೇಟಿಎಂಗೆ ಸೂಚಿಸಿತ್ತು. ಬ್ಯಾಂಕ್‌ನಲ್ಲಿ ನಿರ್ದಿಷ್ಟ ಸಾಮಗ್ರಿಗಳಲ್ಲಿ ಕಳವಳಕಾರಿ ಅಂಶಗಳ ಬಗ್ಗೆ ಉಲ್ಲೇಖಿಸಿ ಅದರ ಐಟಿ ವ್ಯವಸ್ಥೆಗಳ ಲೆಕ್ಕ ಪರಿಶೋಧನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿತ್ತು. ಐಟಿ ಪರಿಶೋಧಕರ ವರದಿ ಪರಿಶೀಲಿಸಿದ ಬಳಿಕ ನಿರ್ದಿಷ್ಟ ಅನುಮತಿಗೆ ಒಳಪಟ್ಟು ಹೊಸ ಗ್ರಾಹಕರನ್ನು ಸೇರಿಸಲು ಪೇಟಿಎಂಗೆ ಅವಕಾಶ ನೀಡಲಾಗುವುದು ಎಂದು ಆರ್‌ಬಿಐ ಹೇಳಿತ್ತು. ಆರ್‌ಬಿಐಯ ಈ ನಡೆಯ ಬಳಿಕ ಪೇಟಿಎಂನ ಶೇರುಗಳು ಕುಸಿದವು. ಪೇಟಿಎಂನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ್ ಶೇಖರ್ ಶರ್ಮಾ ಅವರು ಪೊಲೀಸ್ ಕಾರಿಗೆ ಢಿಕ್ಕಿ ಹೊಡೆದು ಪರಾರಿಯಾದ ನಂತರ ಅವರನ್ನು ಸ್ಪಲ್ಪ ಕಾಲ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬುದು ಬಹಿರಂಗಗೊಂಡಾಗ ಕೂಡ ವಾರಾಂತ್ಯದಲ್ಲಿ ಕಂಪೆನಿ ಶೇರುಗಳು ಕುಸಿದಿದ್ದವು.

ಪೇಟಿಎಂ ಪಾವತಿ ಬ್ಯಾಂಕ್‌ನಲ್ಲಿ ಶರ್ಮಾ ಅವರು ಶೇ. 51 ಪಾಲು ಹೊಂದಿದ್ದಾರೆ. ಪೇಟಿಎಂನ ಪೋಷಕ ಸಂಸ್ಥೆ ಒನ್ 97 ಉಳಿದ ಪಾಲನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News