×
Ad

ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ಕೊರತೆಯೇ ಲಿಂಗ ಅಸಮಾನತೆಗೆ ಕಾರಣ

Update: 2022-03-15 09:10 IST

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಸ್ತಾವವನ್ನು ತುಂಬಾ ಹಿಂದೆಯೇ ಮುಂದಿಡಲಾಗಿತ್ತು. ಆದರೆ ದಶಕಗಳ ಬಳಿಕವೂ ಅದು ನೆರವೇರಿಲ್ಲ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದ ಮಸೂದೆಯು ರಾಜಕೀಯ ಇಚ್ಛಾಶಕ್ತಿಯಿಲ್ಲದೆ ಮಸೂದೆಯಾಗಿಯೇ ಉಳಿದಿದೆ. ಈ ಅಸಮಾನತೆಗೆ ಮುಖ್ಯವಾದ ಕಾರಣವೆಂದರೆ, ರಾಜಕೀಯ, ತಾಂತ್ರಿಕ ಮತ್ತು ನಾಯಕತ್ವ ಮುಂತಾದ ವಿಭಾಗಗಳಲ್ಲಿ ಮಹಿಳೆಯರ ಸರಿಯಾದ ಪ್ರಾತಿನಿಧ್ಯದ ಕೊರತೆಯಿರುವುದು.

‘ತಾರತಮ್ಯವನ್ನು ಕೊನೆಗೊಳಿಸಿ’ ಎಂಬ ವಿಷಯದೊಂದಿಗೆ 2022 ಮಾರ್ಚ್ 8ರಂದು ಅಂತರ್‌ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಆದರೆ, ಭಾರತದಲ್ಲಿ ಲಿಂಗ ಅಸಮಾನತೆಯು 62.5 ಶೇಕಡಕ್ಕೆ ವಿಸ್ತರಿಸಿದೆ ಎನ್ನುವುದನ್ನು ಅಧ್ಯಯನಗಳು ತೋರಿಸುತ್ತವೆ.

ರಾಜಕೀಯ ಮಹಿಳಾ ಸಬಲೀಕರಣದಲ್ಲಿ ಭಾರತದ ಸಾಧನೆ ತೀರಾ ಕಳಪೆಯಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ ವರದಿ ಮಾಡಿದೆ. ಅದು 23.9 ಶೇಕಡದಿಂದ 9.1 ಶೇಕಡಕ್ಕೆ ಕುಸಿದಿದೆ. ಆರೋಗ್ಯ ಮತ್ತು ಬದುಕುಳಿಯುವಿಕೆ ಕ್ಷೇತ್ರಗಳಲ್ಲಿ ಭಾರತವು ಕೊನೆಯ ಐದರ ಗುಂಪಿನಲ್ಲಿದೆ. ಆರ್ಥಿಕ ಚಟುವಟಿಕೆ ಮತ್ತು ಅವಕಾಶಗಳ ಅಂತರವೂ 2020ಕ್ಕೆ ಹೋಲಿಸಿದರೆ 3 ಶೇಕಡಾದಷ್ಟು ಇಳಿದಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಈಗಿನ ಸ್ಥಾನ 114 ಆಗಿದೆ.

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಸ್ತಾವವನ್ನು ತುಂಬಾ ಹಿಂದೆಯೇ ಮುಂದಿಡಲಾಗಿತ್ತು. ಆದರೆ ದಶಕಗಳ ಬಳಿಕವೂ ಅದು ನೆರವೇರಿಲ್ಲ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದ ಮಸೂದೆಯು ರಾಜಕೀಯ ಇಚ್ಛಾಶಕ್ತಿಯಿಲ್ಲದೆ ಮಸೂದೆಯಾಗಿಯೇ ಉಳಿದಿದೆ. ಈ ಅಸಮಾನತೆಗೆ ಮುಖ್ಯವಾದ ಕಾರಣವೆಂದರೆ, ರಾಜಕೀಯ, ತಾಂತ್ರಿಕ ಮತ್ತು ನಾಯಕತ್ವ ಮುಂತಾದ ವಿಭಾಗಗಳಲ್ಲಿ ಮಹಿಳೆಯರ ಸರಿಯಾದ ಪ್ರಾತಿನಿಧ್ಯದ ಕೊರತೆಯಿರುವುದು. ಮಹಿಳೆಯರು ಕಾರ್ಮಿಕರಾಗಿ ಕೆಲಸ ಮಾಡುವ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇಳಿದಿದೆ. ಅವರನ್ನು ಕಳಪೆ ಆರೋಗ್ಯ ರಕ್ಷಣಾ ವ್ಯವಸ್ಥೆಗಳು ಕಾಡುತ್ತಿವೆ. ಹಾಗೂ ಪುರುಷ-ಮಹಿಳಾ ಸಾಕ್ಷರತೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಹಾಗೂ ಆದಾಯ ಅಸಮಾನತೆ ಹೆಚ್ಚುತ್ತಿದೆ.

ಮಹಿಳೆಯರ ಆದಾಯ ಕಡಿಮೆಯಾಗಿದೆ ಹಾಗೂ ಅದು ಪುರುಷರ ಆದಾಯದ ಐದನೇ ಒಂದು ಭಾಗದಷ್ಟಿದೆ.

ಲಿಂಗ ಅಸಮಾನತೆ ಹೋಗಲು 135 ವರ್ಷ

2021ರಲ್ಲಿ 156 ದೇಶಗಳಲ್ಲಿ ಲಿಂಗ ಅಸಮಾನತೆಯನ್ನು ನಾಲ್ಕು ಮಾನದಂಡಗಳ ಮೂಲಕ ಅಧ್ಯಯನ ಮಾಡಲಾಯಿತು. ಜಗತ್ತಿನಾದ್ಯಂತ ಲಿಂಗ ಅಸಮಾನತೆ ಹೋಗಬೇಕಾದರೆ 135.6 ವರ್ಷಗಳು ಬೇಕಾಗುತ್ತದೆ ಎಂದು ಅಧ್ಯಯನವು ಲೆಕ್ಕ ಹಾಕಿತು. ಶಿಕ್ಷಣ, ಆರೋಗ್ಯ ಮತ್ತು ಬದುಕುಳಿಯುವಿಕೆ ಕ್ಷೇತ್ರಗಳಲ್ಲಿನ ಅಂತರವನ್ನು ಒಂದು ಹಂತಕ್ಕೆ ಮುಚ್ಚಲಾಗಿದೆ. ಆದರೆ, ರಾಜಕೀಯ ಸಬಲೀಕರಣ, ಆರ್ಥಿಕ ಭಾಗೀದಾರಿಕೆ ಮತ್ತು ಅವಕಾಶಗಳ ಕ್ಷೇತ್ರದಲ್ಲಿನ ಅಂತರವು ಹೆಚ್ಚಾಗಿದೆ ಎಂಬುದಾಗಿ ಲೆಕ್ಕ ಹಾಕಲಾಗಿದೆ.

ಭಾರತವು ಬಾಂಗ್ಲಾದೇಶಕ್ಕಿಂತಲೂ ಕೆಳಗೆ

156 ದೇಶಗಳ ಪೈಕಿ ಭಾರತದ ಸ್ಥಾನವು 140ರಲ್ಲಿದೆ. ಅದು 28 ಸ್ಥಾನಗಳಷ್ಟು ಕೆಳಗೆ ಜಾರಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಅಸಮಾನತೆ ವರದಿ 2021 ಹೇಳುತ್ತದೆ. ದಕ್ಷಿಣ ಏಶ್ಯದಲ್ಲಿ ಭಾರತದ ನಿರ್ವಹಣೆಯು ಅತ್ಯಂತ ಕಳಪೆ ನಿರ್ವಹಣೆ ನೀಡಿರುವ ದೇಶಗಳ ಪೈಕಿ ಒಂದಾಗಿದೆ.

ಭಾರತವು ಬಾಂಗ್ಲಾದೇಶಕ್ಕಿಂತಲೂ ಹಿಂದಿದೆ. ಆದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಗಿಂತ ಮುಂದಿದೆ. ಮೊದಲ ಐದು ಸ್ಥಾನಗಳಲ್ಲಿ ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್, ನಾರ್ವೆ, ನ್ಯೂಝಿಲ್ಯಾಂಡ್ ಮತ್ತು ಸ್ವೀಡನ್‌ಗಳಿವೆ. ಅದೇ ವೇಳೆ, ಲಿತುವೇನಿಯ, ಸರ್ಬಿಯ, ಟೈಮರ್ ಲೆಸ್ಟೆ, ಟೋಗೊ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಮ್ಮ ಸ್ಥಾನಗಳನ್ನು ಉತ್ತಮಪಡಿಸಿಕೊಂಡಿವೆ.

‘ಆರೋಗ್ಯ ಮತ್ತು ಬದುಕುಳಿಯುವಿಕೆ’ ಕ್ಷೇತ್ರಗಳ ಮೇಲೆ ಭಾರತ ಹೆಚ್ಚಿನ ಗಮನವನ್ನು ನೀಡಬೇಕಾದ ಅಗತ್ಯವಿದೆ ಎನ್ನುವುದನ್ನು ನಾಗರಿಕ ಸಮಾಜದ ನಾಯಕರು ತಿಳಿದುಕೊಳ್ಳಬೇಕಾಗಿದೆ. ಲಿಂಗ ಆಯ್ಕೆ ಪ್ರವೃತ್ತಿ ಹೆಚ್ಚುತ್ತಿರುವುದು ಲಿಂಗಾನುಪಾತ ಕುಸಿತಕ್ಕೆ ಕಾರಣವಾಗಿದೆ. ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಕಡಿಮೆ ಭಾಗವಹಿಸುವಿಕೆಯಿಂದಾಗಿ ಲಿಂಗ ಆಯ್ಕೆ ಪ್ರವೃತ್ತಿ ಹೆಚ್ಚುತ್ತಿದೆ.

ಮಹಿಳೆಯರ ಆದಾಯದಲ್ಲಿ ಕುಸಿತ

ವಿಶ್ವ ಆರ್ಥಿಕ ವೇದಿಕೆ ರ್ಯಾಂಕಿಂಗ್ ಆಧಾರಿತ ಮಾಧ್ಯಮ ವರದಿಯು, ಬೇಟಿ ಬಚಾವೊ ಬೇಟಿ ಪಢಾವೊ, ಮಹಿಳೆಯರ ಖಾತೆಗಳಿಗೆ 500 ರೂಪಾಯಿ ನಗದು ನೇರ ಹಸ್ತಾಂತರ, ಉಜ್ವಲ ಯೋಜನೆ, ವನ್ ಸ್ಟಾಪ್ ಸೆಂಟರ್ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದೆ.

ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಕುಸಿತ

ಕಳೆದ ಎರಡು ದಶಕಗಳ ಅವಧಿಯಲ್ಲಿ ಭಾರತದಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣವು 20 ಶೇಕಡದಷ್ಟು ಕುಸಿದಿದೆ. ದೇಶಾದ್ಯಂತ ಗಂಡು ಮಕ್ಕಳಿಗಾಗಿ ಹೆತ್ತವರು ಹಂಬಲಿಸುವುದು ಮುಂದುವರಿದಿದೆ. ಇದು ಜನಸಂಖ್ಯೆಯಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಶಾಲಾ ಮಧ್ಯಪ್ರವೇಶ ಕಾರ್ಯಕ್ರಮ

ನಮ್ಮದು ಬೃಹತ್ ಆರ್ಥಿಕತೆ ಮತ್ತು ಬೃಹತ್ ಜನಸಂಖ್ಯೆ. ಆದರೂ, ಲಿಂಗ ಸಮಾನತೆಯನ್ನು ಸಾಧಿಸುವುದು ಅಷ್ಟು ಸುಲಭವಲ್ಲ.

ಈ ವಿಷಯದಲ್ಲಿ ಭಾರತವು ಹಲವು ದೇಶಗಳಿಂದ ಹಿಂದಿದೆ. ಹರ್ಯಾಣದಲ್ಲಿ, ‘ಬ್ರೇಕ್‌ತ್ರೂ’ ಎಂಬ ಎನ್‌ಜಿಒ ಶಾಲಾ ಮಧ್ಯಪ್ರವೇಶ ಎಂಬ ಕಾರ್ಯಕ್ರಮವೊಂದನ್ನು ಆರಂಭಿಸಿತು. ಅದು ಯಶಸ್ವಿಯಾಯಿತು. ಈ ಎನ್‌ಜಿಒದ ಕಾರ್ಯಕರ್ತರು 2014 ಎಪ್ರಿಲ್‌ನಿಂದ 2016 ಅಕ್ಟೋಬರ್‌ವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ಶಾಲಾ ಅವಧಿಯಲ್ಲಿ 45 ನಿಮಿಷಗಳ ಕಲಿಕಾ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟರು. ತರಗತಿಗಳಲ್ಲಿ ಚರ್ಚೆಗಳನ್ನು ನಡೆಸುವ ಎರಡೂವರೆ ವರ್ಷಗಳ ಕಾರ್ಯಕ್ರಮ ಅದಾಗಿತ್ತು. ತರಗತಿಗಳನ್ನು ನಡೆಸಿಕೊಟ್ಟವರು ಮಾನವಹಕ್ಕುಗಳ ಬಗ್ಗೆ ವಿವರಿಸಿದರು. ಮಹಿಳೆಯರನ್ನು ಹೇಗೆ ಗೌರವಿಸಬೇಕು, ಆರ್ಥಿಕತೆಗೆ ಅವರ ಕೊಡುಗೆಗಳೇನು, ಮಹಿಳೆಯರಿಗೆ ಹೆಚ್ಚಿನ ಶಿಕ್ಷಣ ಪಡೆಯುವ ಅವಕಾಶವನ್ನು ಒದಗಿಸಿದರೆ ಮಕ್ಕಳ ಬೆಳವಣಿಗೆಯಲ್ಲಿ ಅವರು ವಹಿಸಬಹುದಾದ ಹೆಚ್ಚಿನ ಪಾತ್ರದ ಬಗ್ಗೆ ವಿವರಗಳನ್ನು ನೀಡಿದರು. ಭಾಷಣಕಾರರ ಮಾತುಗಳನ್ನು ಕೇಳಿದ ಬಳಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಸಂಬಳ ಪಡೆಯದೆ ಮನೆಗಳಲ್ಲಿ ಅಡುಗೆ ಮಾಡುವ ಮಹಿಳೆಯರಿಗೆ ಹೋಲಿಸಿದರೆ, ಬಾಣಸಿಗರಾಗಿ ಕೆಲಸ ಮಾಡುವ ಪುರುಷರನ್ನು ಸಮಾಜ ಹೇಗೆ ಗೌರವಿಸುತ್ತದೆ ಎಂಬ ಬಗ್ಗೆ ವಿದ್ಯಾರ್ಥಿಗಳು ಯೋಚನೆ ಮಾಡುವಂತೆ ಈ ತರಗತಿಗಳು ಮಾಡಿದವು.

 ಸೀಮಾ ಜಯಚಂದ್ರನ್ ಅಧ್ಯಯನ

ಐಪಿಆರ್ ಅರ್ಥಶಾಸ್ತ್ರ ಪ್ರೊಫೆಸರ್ ಸೀಮಾ ಜಯಚಂದ್ರನ್ ತನ್ನ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಈ ಕಾರ್ಯಕ್ರಮವನ್ನು ಪಂಜಾಬ್‌ಗೆ ವಿಸ್ತರಿಸಿದರು. ಪಂಜಾಬ್‌ನ 314 ಶಾಲೆಗಳ 14,000 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ‘‘ಲಿಂಗ ಸಮಾನತೆಗೆ ಹೆಚ್ಚು ಬೆಂಬಲ ನೀಡುವಂತೆ ಬಾಲಕರು ಮತ್ತು ಬಾಲಕಿಯರನ್ನು ಈ ಕಾರ್ಯಕ್ರಮ ಪ್ರೇರೇಪಿಸಿತು ಎನ್ನುವುದನ್ನು ನಾವು ಕಂಡುಕೊಂಡೆವು’’ ಎಂದು ಸೀಮಾ ಹೇಳಿದರು. ಅಸಮಾನತೆಯನ್ನು ಒಪ್ಪಿಕೊಂಡಿದ್ದ ವಿದ್ಯಾರ್ಥಿಗಳ ಪೈಕಿ 16 ಶೇಕಡದಷ್ಟು ವಿದ್ಯಾರ್ಥಿಗಳ ಮನ ಪರಿವರ್ತನೆ ಮಾಡುವಲ್ಲಿ ಕಾರ್ಯಕ್ರಮವು ಯಶಸ್ವಿಯಾಯಿತು ಎಂದು ಅವರು ಹೇಳಿದರು. ಈಗ ಅವರು ಹಿಂದಿಗಿಂತ ಹೆಚ್ಚಿನ ಸಮಾನತಾವಾದಿಗಳಾಗಿದ್ದಾರೆ ಎಂದರು.

 ಈ ಕಾರ್ಯಕ್ರಮದಡಿಯಲ್ಲಿ, 314 ಸರಕಾರಿ ಶಾಲೆಗಳ 150 ವಿದ್ಯಾರ್ಥಿಗಳಿಗೆ ಕಲಿಸಲಾಯಿತು ಹಾಗೂ ಅವರ ಮನಸ್ಸು ಪರಿವರ್ತನೆಯ ಯತ್ನ ಮಾಡಲಾಯಿತು. ಬಳಿಕ, ಲಿಂಗ ಅಸಮಾನತೆಗೆ ಸಂಬಂಧಿಸಿ ಅವರ ಮನೋಭಾವದಲ್ಲಿ ಆಗಿರುವ ಬದಲಾವಣೆಯನ್ನು ಸಮೀಕ್ಷೆ ಮಾಡಲಾಯಿತು. ಹಾಗೂ ಸಮೀಕ್ಷೆಯ ಫಲಿತಾಂಶವನ್ನು ಈ ಕಾರ್ಯಕ್ರಮ ನಡೆಯದ 164 ಶಾಲೆಗಳ ವಿದ್ಯಾರ್ಥಿಗಳ ಮನೋಭಾವದೊಂದಿಗೆ ತುಲನೆ ಮಾಡಲಾಯಿತು. ಲಿಂಗ ಸಮಾನತೆಯ ಮನೋಭಾವ ಬಾಲಕರು ಮತ್ತು ಬಾಲಕಿಯರಲ್ಲಿ ಅಚ್ಚೊತ್ತಿರುವುದನ್ನು ಸಮೀಕ್ಷೆಯು ತೋರಿಸಿತು.

ಲಿಂಗ ಅಸಮಾನತೆಯನ್ನು ನಿವಾರಿಸುವುದಕ್ಕಾಗಿ ಈ ಕಾರ್ಯಕ್ರಮಗಳಲ್ಲಿ ಬಾಲಕರು ಮತ್ತು ಪುರುಷರನ್ನು ಹೆಚ್ಚೆಚ್ಚು ತೊಡಗಿಸುವ ಅಗತ್ಯವನ್ನು ಸಮೀಕ್ಷೆಯು ಪ್ರತಿಪಾದಿಸಿತು ಎನ್ನುವುದು ಇನ್ನೊಂದು ಕುತೂಹಲಕರ ಅಂಶವಾಗಿದೆ. ಲಿಂಗ ಸಮಾನತೆ ವಿಷಯಗಳು ಮತ್ತು ಶಿಕ್ಷಣವನ್ನು ಬಾಲಕಿಯರು ಅಥವಾ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಲಿಂಗ ಸಮಾನತೆಯನ್ನು ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಪುರುಷರಿಗೆ ಕಲಿಸಬೇಕಾಗಿದೆ. ಯಾಕೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಲಿಂಗ ಅಸಮಾನತೆಯ ಬಲಿಪಶುಗಳು ಮಹಿಳೆಯರೇ ಆಗಿದ್ದಾರೆ. ಇಂಥ ಕಾರ್ಯಕ್ರಮಗಳ ವ್ಯಾಪ್ತಿಯನ್ನು ಹಿಗ್ಗಿಸಬೇಕಾದ ಅಗತ್ಯವಿದೆ. ಈ ಮಾದರಿಯ ಶೈಕ್ಷಣಿಕ ಮಧ್ಯಪ್ರವೇಶವನ್ನು ಇತರ ದೇಶಗಳಲ್ಲೂ ಮಾಡಬಹುದಾಗಿದೆ ಎಂದು ಸೀಮಾ ಜಯಚಂದ್ರನ್ ಹೇಳುತ್ತಾರೆ. ‘‘ವಿಷಯಗಳು ಮತ್ತು ಪಠ್ಯಗಳನ್ನು ಸ್ಥಳೀಯ ಹಿನ್ನೆಲೆಗೆ ತಕ್ಕಂತೆ ರೂಪಿಸಿಕೊಳ್ಳಬೇಕು. ಆದರೆ, ಲಿಂಗ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಮಾನವಹಕ್ಕುಗಳು ಮತ್ತು ಆರ್ಥಿಕ ಕಾರಣಗಳು ವಹಿಸುವ ಪಾತ್ರಗಳ ಬಗ್ಗೆ ಶಾಲೆಗಳಲ್ಲಿ ಚರ್ಚೆ ನಡೆಸುವ ಈ ಒಟ್ಟಾರೆ ಕಲ್ಪನೆಯು ಎಲ್ಲ ಸ್ಥಳಗಳಿಗೂ ಹೊಂದಿಕೊಳ್ಳುತ್ತದೆ ಎಂದು ನನಗನಿಸುತ್ತದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕೃಪೆ: countercurrents.org

Writer - ಡಾ. ಮಡಭೂಶಿ ಶ್ರೀಧರ್

contributor

Editor - ಡಾ. ಮಡಭೂಶಿ ಶ್ರೀಧರ್

contributor

Similar News