ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಅಂಬಾನಿ ಬಂಡವಾಳ ಹೂಡುತ್ತಿರುವ ಸಂಸ್ಥೆ: ಅಲ್‌ಜಝೀರಾ ವರದಿ

Update: 2022-03-15 09:48 GMT

ಹೊಸದಿಲ್ಲಿ, ಮಾ.14: 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಿಲಯನ್ಸ್ ಒಡೆತನದ ಮಾಧ್ಯಮ ಸಂಸ್ಥೆಯೊಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ನಿರ್ಲಜ್ಜವಾಗಿ ಬಿಜೆಪಿಗೆ ಸಹಕರಿಸಿತ್ತ್ತು ಎಂದು ‘aljazeera.com’ ಬಹಿರಂಗಪಡಿಸಿದೆ.

ಮುಕೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್‌ಗೆಸೇರಿದ ಜಿಯೋ ಫ್ಲಾಟ್‌ಫಾರಂ ಲಿ.ನ ಅಂಗಸಂಸ್ಥೆಯಾದ ನ್ಯೂಜೆ (ನ್ಯೂ ಎಮರ್ಜಿಂಗ್ ವರ್ಲ್ಡ್‌ಆಫ್ ಜರ್ನಲಿಸಂ ಲಿ.) ಸಾಮಾಜಿಕ ಜಾಲತಾಣದಿಂದ ಫೇಸ್‌ಬುಕ್ ಮೂಲಕ ಬಿಜೆಪಿ ಪರವಾದ ಪ್ರಚಾರ ಗಳನ್ನು ನಡೆಸಲಾಗಿತ್ತು ಹಾಗೂ ಬಿಜೆಪಿ ವಿರೋಧಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿತ್ತು ಎಂದು ಅಲ್‌ಜಝೀರಾ ನಡೆಸಿದ ಸರಣಿ ತನಿಖಾ ವರದಿಗಳು ಬಹಿರಂಗಪಡಿಸಿವೆ.

2019ರ ಚುನಾವಣೆಗೆ ತಿಂಗಳಿರುವಾಗ ನ್ಯೂ ಜೆ ಜಾಹೀರಾತು ಸಂಸ್ಥೆ ಕೂಡ ಬಿಜೆಪಿ ಸರಕಾರದ ಯೋಜನೆಗಳನ್ನು ಫೇಸ್‌ಬುಕ್ ಜಾಹೀರಾತುಗಳ ಮೂಲಕ ಪ್ರಶಂಸಿಸುವ ಸರಣಿ ವೀಡಿಯೊಗಳನ್ನು ಬಿಡುಗಡೆಗೊಳಿಸಿತ್ತು. ಪ್ರತಿಭಟನೆ ಹಾಗೂ ರೈತರ ಪ್ರತಿಭಟನೆೆ ಸೇರಿದಂತೆ ಕೇಂದ್ರ ಸರಕಾರದ ವಿರುದ್ಧದ ಯಾವುದೇ ಟೀಕೆಯ ವೀಡಿಯೊವನ್ನು ಕಂಪೆನಿ ನಿರಂತರ ಪ್ರಕಟಿಸುತ್ತಿತ್ತು. 2019 ಲೋಕಸಭೆ ಚುನಾವಣೆ ಸಂದರ್ಭ ರಿಲಯನ್ಸ್ ಒಡೆತದ ಜಾಹೀರಾತು ಸಂಸ್ಥೆ ನ್ಯೂಜೆ ಬಿಜೆಪಿ ವಿರೋಧಿ ನಾಯಕರ ಮಾನಹಾನಿಕರ ವೀಡಿಯೊಗಳ ಸರಣಿಯನ್ನು ಬಿಡುಗಡೆ ಮಾಡಿತ್ತು. ಉದಾರಣೆಗೆ ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಅವರು ಪಾಕ್ ಭಯೋತ್ಪಾದಕ ಮಸೂದ್ ಅಝರ್‌ನನ್ನು ಮಸೂದ್ ಅಝರ್ ಜೀ ಎಂದು ಗೌರವಾನ್ವಿತವಾಗಿ ಉಲ್ಲೇಖಿಸಿದ್ದಾರೆಂದು ಬಿಂಬಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿಸಿತ್ತು. ಈ ವೀಡಿಯೊವನ್ನು ನಾಲ್ಕು ದಿನಗಳಲ್ಲಿ 650,000 ಜನರು ವೀಕ್ಷಿಸಿದ್ದರು. ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರನ್ನು ಪಾಕಿಸ್ತಾನದ ಬೆಂಬಲಿಗರು ಎಂದು ಇನ್ನೊಂದು ವೀಡಿಯೊದಲ್ಲಿ ಬ್ರಾಂಡ್ ಮಾಡಲಾಗಿತ್ತು. 2020ರ ನವೆಂಬರ್‌ನಲ್ಲಿ ಭಾರತದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲವನ್ನು ಕ್ರೋಡೀಕರಿಸಲು ನ್ಯೂಡಬ್ಲುಜೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳ ಮೇಲೆ ಮುಸ್ಲಿಮರ ಗುಂಪುಗಳು ದಾಳಿ ನಡೆಸುವ ವೀಡಿಯೊಗಳನ್ನು ಪ್ರಸಾರ ಮಾಡಿತ್ತು. ‘ಮುಸ್ಲಿಮರು ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಆಕ್ರೋಶಕ್ಕೆ ತುತ್ತಾಗುತ್ತಾರೆ’ ಎಂಬ ಶೀರ್ಷಿಕೆಯನ್ನು ವೀಡಿಯೊಗೆ ನೀಡಲಾಗಿತ್ತು.

ನ್ಯೂ ಜೆಯನ್ನು 1 ಲಕ್ಷ ರೂಪಾಯಿ ಬಂಡವಾಳದಲ್ಲಿ 2018 ಜನವರಿಯಲ್ಲಿ ಆರಂಭಿಸಲಾಗಿತ್ತು. ನ್ಯೂಜೆನ ಸಂಸ್ಥಾಪಕ ಶಲಭ್ ಉಪಾಧ್ಯಾಯ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಧ್ಯಮ ನಿರ್ದೇಶಕರಾಗಿದ್ದರು ಹಾಗೂ ರಿಲಯನ್ಸ್ ನೆಟ್‌ವರ್ಕ್ 18 ಗ್ರೂಪ್‌ನ ಮಾಜಿ ಅಧ್ಯಕ್ಷ. ಶಲಭ್ ಅವರ ಮಾವ ಸತೀಶ್ ಅವರು ಪಕ್ಷದ ದಿಲ್ಲಿ ಘಟಕದ ಅಧ್ಯಕ್ಷರಾಗಿದ್ದಾರೆ.

ನ್ಯೂ ಜೆಯಲ್ಲಿ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್‌ಮೆಂಟ್ ಆ್ಯಂಡ್ ಹೋಲ್ಡಿಂಗ್ಸ್ ಲಿಮಿಟೆಡ್ ಶೇ. 75 ಶೇರು ಹೊಂದಿತ್ತು. ರಿಲಯನ್ಸ್ ಸಮೂಹ ಈ ಕಂಪೆನಿಯಲ್ಲಿ 8.4 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ನ್ಯೂ ಜೆ ಇಂತಹ ವೀಡಿಯೊಗಳನ್ನು ಮುಖ್ಯವಾಗಿ ಫೇಸ್‌ಬುಕ್ ಹಾಗೂ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡುತ್ತಿತ್ತು. 2019ರಲ್ಲಿ ರಿಲಯನ್ಸ್ ಸಮೂಹ ನ್ಯೂ ಜೆಯಲ್ಲಿ ಮತ್ತೆ 12.5 ಕೋಟಿ ರೂಪಾಯಿ ಹೂಡಿಕೆ ಮಾಡಿತು. ರಿಲಯನ್ಸ್ ಇನ್ವೆಸ್ಟ್‌ಮೆಂಟ್ ಹಾಗೂ ಹೋಲ್ಡಿಂಗ್ ಲಿಮಿಟೆಡ್ ಅನ್ನು ಆನಂತರ ಇನ್ನೊಂದು ರಿಲಯನ್ಸ್ ಸಮೂಹ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿತು. ಈ ವೀಡಿಯೊಗಳನ್ನು ನ್ಯೂ ಜೆ ರೂಪಿಸಿತ್ತು ಹಾಗೂ ಫೇಸ್‌ಬುಕ್‌ನಲ್ಲಿ ಪಾವತಿ ಜಾಹೀರಾತಿನಂತೆ ಪೋಸ್ಟ್ ಮಾಡಿತ್ತು. ಈ ಬಗ್ಗೆ ಅಲ್ ಜಝಿರಾ ನ್ಯೂ ಜೆಯನ್ನು ವಿವರಣೆ ನೀಡುವಂತೆ ಕೋರಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯೂ ಜೆ ನಮ್ಮ ಕೆಲಸ 2019ರ ಚುನಾವಣೆಯ ಬಳಿಕವೂ ಮುಂದುವರಿಯಲಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News