×
Ad

ಹಿಜಾಬ್ ಕುರಿತು ಹೈಕೋರ್ಟ್‌ ತೀರ್ಪಿನ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ ವಿವಿಧ ರಾಜಕೀಯ ಮುಖಂಡರು

Update: 2022-03-15 14:45 IST

ಹೊಸದಿಲ್ಲಿ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಇಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ವಿವಾದದ ಕುರಿತು ನೀಡಿರುವ ತೀರ್ಪಿಗೆ ಅಸಾದುದ್ದೀನ್‌ ಓವೈಸಿ, ಮೆಹಬೂಬಾ ಮುಫ್ತಿ, ಒಮರ್‌ ಅಬ್ದುಲ್ಲಾ ಸೇರಿದಂತೆ ಅನೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿ, ಹೈಕೋರ್ಟ್ ಆದೇಶ ಬಹಳಷ್ಟು ನಿರಾಶಾದಾಯಕ ಎಂದಿದ್ದಾರೆ. "ನಾವು ಮಹಿಳಾ ಸಬಲೀಕರಣದ ಕುರಿತು ಒಂದೆಡೆ ಮಾತನಾಡುತ್ತೇವೆ ಹಾಗೂ ಇನ್ನೊಂದೆಡೆ ಅವರ ಒಂದು ಸರಳ  ಆಯ್ಕೆಯ ಹಕ್ಕನ್ನು ನಿರಾಕರಿಸುತ್ತೇವೆ. ಇದು ಧರ್ಮದ ವಿಚಾರ ಮಾತ್ರವಲ್ಲ, ಬದಲು ಆಯ್ಕೆ ಮಾಡುವ ಸ್ವಾತಂತ್ರ್ಯದ ವಿಚಾರ" ಎಂದು ಮೆಹಬೂಬಾ ತಮ್ಮ ಟ್ವೀಟ್ ಒಂದರಲ್ಲಿ ಹೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ ತಾವು ಈ ತೀರ್ಪಿಗೆ ಅಸಮ್ಮತಿ ಹೊಂದಿರುವುದಾಗಿ ತಿಳಿಸಿದ್ದಾರೆ.

"ತೀರ್ಪಿಗೆ ಅಸಮ್ಮತಿ ಸೂಚಿಸುವುದು ನನ್ನ ಹಕ್ಕು ಹಾಗೂ ಅರ್ಜಿದಾರರು ಸುಪ್ರೀಂಗೆ ಅಪೀಲು ಸಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವರು ಈ ತೀರ್ಪಿನ ಕುರಿತು ತಮ್ಮ ನಿರಾಸೆ ವ್ಯಕ್ತಪಡಿಸಿದ್ದಾರೆ.  "ಹಿಜಾಬ್ ಎಂದರೆ ಕೇವಲ ಒಂದು ಬಟ್ಟೆಯಲ್ಲ, ಅದು ಮಹಿಳೆಗೆ ತಾನು ಹೇಗೆ ಉಡುಗೆ ಧರಿಸಬೇಕು ಎಂದು ಆಯ್ಕೆ ಮಾಡುವ ಹಕ್ಕು. ನ್ಯಾಯಾಲಯ ಈ ಮೂಲಭೂತ ಹಕ್ಕನ್ನು ಎತ್ತಿಹಿಡಿದಿಲ್ಲವೆಂಬುದು ದುರಾದೃಷ್ಟಕರ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News