×
Ad

"ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ": ವಿದ್ಯಾರ್ಥಿಗಳು, ಹೆತ್ತವರಿಂದ ಲಿಖಿತ ಸಹಿ ಪಡೆಯುತ್ತಿರುವ ವಿವಿ

Update: 2022-03-15 17:44 IST

ಹೊಸದಿಲ್ಲಿ: ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದಲ್ಲಿರುವ ಟೈಮ್ಸ್ ಗ್ರೂಪ್ ಒಡೆತನದ  ಬೆನ್ನೆಟ್ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳು ಯಾವುದೇ ರೀತಿಯ ದೇಶ ವಿರೋಧಿ  ಅಥವಾ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಕ್ಯಾಂಪಸ್ ಒಳಗೆ ಅಥವಾ ಹೊರಗೆ ಭಾಗವಹಿಸಬಾರದೆಂದು ಹೇಳಿಕೊಂಡು ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಂದ ಲಿಖಿತ ಹೇಳಿಕೆಗೆ ಸಹಿ ಹಾಕಿಸುತ್ತಿದೆ.

ಈ ಹೇಳಿಕೆಯ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಮಾರ್ಚ್ 14ರಂದು ಇಮೇಲ್ ಮೂಲಕ ಕಳುಹಿಸಲಾಗಿದ್ದು ಉತ್ತರ ಪ್ರದೇಶ ಸರಕಾರದಿಂದ ದೊರೆತ ಸೂಚನೆಯ ಅನುಸಾರ ಈ ಕ್ರಮಕೈಗೊಳ್ಳಲಾಗಿದೆ ಎಂದು ವಿವಿ ಹೇಳಿದೆ.

ಇದು ರಾಜ್ಯ ಸರಕಾರದ ಸೂಚನೆ ಹಾಗೂ ಕಾನೂನಾತ್ಮಕ ಅಗತ್ಯವಾಗಿದೆ ಎಂದು ವಿವಿ ಕುಲಸಚಿವರಾಗಿರುವ ಗುಲ್ಜಿತ್ ಸಿಂಗ್ ಚಡ್ಡಾ ಹೇಳಿದ್ಧಾರೆ.

ಜೂನ್ 2019ರಲ್ಲಿ ಉತ್ತರ ಪ್ರದೇಶದ ಸಚಿವ ಸಂಪುಟ ಅಂಗೀಕರಿಸಿದ ಸುಗ್ರೀವಾಜ್ಞೆಯೊಂದರ ಪ್ರಕಾರ ರಾಜ್ಯದ ಪ್ರಸಕ್ತ ಹಾಗೂ ಹೊಸ ವಿವಿಗಳು ತಾವು ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕಿದೆ.

ವಿವಿಯ ಅಭಿಪ್ರಾಯದಲ್ಲಿ ಕಾನೂನುಬಾಹಿರ ಎಂದು ತಿಳಿಯಲಾದ ಯಾವುದೇ ಚಟುವಟಿಕೆ ದೇಶವಿರೋಧಿ ಚಟುವಟಿಕೆಯಾಗಿದೆ ಎಂದು  ತಿಳಿಸಲಾಗಿದ್ದು ಒಟ್ಟು  ಐದು ವಿಧದ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸರಕಾರ ಅಥವಾ ಇತರ ಜನರ ವಿರುದ್ಧ ಹಿಂಸೆಗೆ ಪ್ರೇರೇಪಣೆ ನೀಡುವ ಚಟುವಟಿಕೆ, ದೇಶದ ಹಿತಾಸಕ್ತಿಗೆ ವಿರುದ್ಧವಾದ, ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲ ಚಟುವಟಿಕೆ, ಆಂತರಿಕ ಸಮಸ್ಯೆ ಸೃಷ್ಟಿಸಲು ಸರಕಾರವನ್ನು ಬೀಳಿಸಲು ಅಥವಾ ವಿವಿಧ ಸಮುದಾಯ, ಗುಂಪುಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ಕಾನೂನುಬಾಹಿರ ಸಭೆ ಅಥವಾ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ದೇಶವಿರೋಧಿ ಚಟುವಟಿಕೆ ಎಂದು ತಿಳಿಯಲಾಗುವುದು ಎಂದು ವಿವಿ ಹೇಳಿದೆ.

ಆಗಸ್ಟ್ 2016ರಲ್ಲಿ ಸ್ಥಾಪಿಸಲಾಗಿರುವ ಈ ಬೆನ್ನೆಟ್ಟ್ ವಿವಿ ಟೈಮ್ಸ್ ಗ್ರೂಪ್‍ನ ಮಾತೃ ಸಂಸ್ಥೆ ಬೆನ್ನೆಟ್, ಕೋಲ್ಮೆನ್ ಎಂಡ್ ಕೋ ಲಿಮಿಟೆಡ್ ಹೆಸರಿನ ಒಂದು ಭಾಗವನ್ನು ಹೊಂದಿದೆ ಹಾಗೂ ಅಲ್ಲಿ ಸುಮಾರು 2,500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News