ಗಾಂಧಿ ಕುಟುಂಬ ನಾಯಕತ್ವದ ಸ್ಥಾನದಿಂದ ಕೆಳಗಿಳಿಯಬೇಕು: ಕಪಿಲ್ ಸಿಬಲ್
ಹೊಸದಿಲ್ಲಿ, ಮಾ. 15: ಗಾಂಧಿ ಕುಟುಂಬದ ಸದಸ್ಯರು ಕಾಂಗ್ರೆಸ್ನ ನಾಯಕತ್ವ ಸ್ಥಾನದಿಂದ ಕೆಳಗಿಳಿಯಬೇಕು ಹಾಗೂ ಪಕ್ಷದ ನೇತೃತ್ವ ವಹಿಸಲು ಇತರರಿಗೆ ಅವಕಾಶ ಮಾಡಿ ಕೊಡಬೇಕು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಮಂಗಳವಾರ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ-ಪಂಚರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕಳಪೆ ಫಲಿತಾಂಶ ಬಂದ ಕೆಲವು ದಿನಗಳ ಬಳಿಕ ಸಿಬಲ್ ಅವರು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಂಜಾಬ್ನಲ್ಲಿ ಅಧಿಕಾರದಿಂದ ಕೆಳಗಿಳಿಯಿತು ಹಾಗೂ ಐದು ರಾಜ್ಯಗಳ ಒಟ್ಟು 690 ಸ್ಥಾನಗಳಲ್ಲಿ ಕೇವಲ 55 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸುವಲ್ಲಿ ಸಫಲವಾಗಿತ್ತು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಕಳಪೆ ಫಲಿತಾಂಶದ ಬಗ್ಗೆ ಪರಾಮರ್ಶೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರವಿವಾರ ಸಭೆ ನಡೆಸಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವ ಪ್ರಸ್ತಾವ ಮುಂದಿಟ್ಟಿದ್ದರು. ಆದರೆ, ಸಮಿತಿ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಸೋನಿಯಾ ಗಾಂಧಿ ಅವರು ಪಕ್ಷದ ವರಿಷ್ಠರಾಗಿ ಮುಂದುವರಿಯುವಂತೆ ಅದು ನಿರ್ಧರಿಸಿತ್ತು. ಕಪಿಲ್ ಸಿಬಲ್ ಅವರು ಮಂಗಳವಾರ ಪಕ್ಷದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಪಕ್ಷದ ಕುಸಿತದ ಹಿಂದಿರುವ ಕಾರಣಗಳ ಬಗ್ಗೆ ಅರಿವು ಇಲ್ಲಾ ಎಂದಾದಲ್ಲಿ, ಪಕ್ಷದ ನಾಯಕತ್ವ ಕಲ್ಪನಾ ಲೋಕದಲ್ಲಿ ಜೀವಿಸುತ್ತಿದೆ ಎಂದರ್ಥ ಎಂದಿದ್ದಾರೆ. ಗಾಂಧಿಗಳು ಸ್ವಯಂಪ್ರೇರಿತವಾಗಿ ನಾಯಕತ್ವದ ಸ್ಥಾನದಿಂದ ಕೆಳಗಿಳಿಯಬೇಕು. ಯಾಕೆಂದರೆ, ನಾಮ ನಿರ್ದೇಶನಗೊಂಡ ಸಮಿತಿ ಅವರು ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಎಂದಿಗೂ ಹೇಳಲಾರದು ಎಂದು ಸಿಬಲ್ ಹೇಳಿದ್ದಾರೆ.
ಪಕ್ಷದಲ್ಲಿ ಸುಧಾರಣೆ ತರುವಂತೆ ಕೋರಿ 2020ರಲ್ಲಿ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ ಪತ್ರಕ್ಕೆ ಸಹಿ ಮಾಡಿದವರಲ್ಲಿ ಸಿಬಲ್ ಕೂಡ ಸೇರಿದ್ದಾರೆ. ಜಿ-23 ಎಂದು ಕೂಡ ಕರೆಯಲಾಗುವ 23 ಕಾಂಗ್ರೆಸ್ ನಾಯಕರ ಗುಂಪು ಈ ಪತ್ರಕ್ಕೆ ಸಹಿ ಹಾಕಿತ್ತು. ಈ ನಡುವೆ ಕಾಂಗ್ರೆಸ್ ನಾಯಕ ಅನಿಲ್ ಶಾಸ್ತ್ರಿ ಅವರು ಮಂಗಳವಾರ ಟ್ವಿಟ್ಟರ್ನಲ್ಲಿ, ಗಾಂಧಿ ಕುಟುಂಬದ ಸದಸ್ಯರು ಇಲ್ಲದಿದ್ದರೆ ಪಕ್ಷ ದುರ್ಬಲಗೊಳ್ಳಲಿದೆ ಎಂದಿದ್ದಾರೆ. ಪಕ್ಷದ ಲೋಕಸಭಾ ವಿಪ್ ಮಾಣಿಕ್ಚಂದ್ ಠಾಕೂರ್ ಅವರು, ಸಿಬಲ್ ಅವರು ಆರ್ಎಸ್ಎಸ್ ಹಾಗೂ ಬಿಜೆಪಿಯ ಭಾಷೆಯಲ್ಲಿ ಮಾತಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.