ಉಕ್ರೇನ್ ಮೇಲೆ ಆಕ್ರಮಣಗೈದ ಪುಟಿನ್ ರನ್ನು ಯುದ್ಧಾಪರಾಧಕ್ಕಾಗಿ ತನಿಖೆ ನಡೆಸಬೇಕು: ಅಮೆರಿಕಾ ಸೆನೆಟ್ ನಿರ್ಣಯ
ಹೊಸದಿಲ್ಲಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣಗೈದಿರುವ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಆ ದೇಶದ ಉನ್ನತ ಮಿಲಿಟರಿ ನಾಯಕರನ್ನು ಯುದ್ಧಾಪರಾಧಿಗಳು ಎಂದು ಪರಿಗಣಿಸಿ ಅವರ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿ ನಿರ್ಣಯವನ್ನು ಅಮೆರಿಕಾದ ಸೆನೆಟ್ ಮಂಗಳವಾರ ಸರ್ವಾನುಮತದಿಂದ ಅನುಮೋದಿಸಿದೆ. ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಉಕ್ರೇನ್‍ನಲ್ಲಿ ರಷ್ಯಾ ಆಕ್ರಮಣದ ವೇಳೆ ನಡೆದ ಅಪರಾಧಗಳಿಗೆ ಪುಟಿನ್ ಮತ್ತು ಅವರ ಮಿಲಿಟರಿಯನ್ನು ಹೊಣೆಯಾಗಿಸಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಈ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು ಹಾಗೂ ಎರಡೂ ಪಕ್ಷಗಳು ಯಾವುದೇ ವಿರೋಧವಿಲ್ಲದೆ ಅವುಗಳನ್ನು ಅಂಗೀಕರಿಸಿವೆ.
"ಉಕ್ರೇನ್ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳ ಕುರಿತಂತೆ ಪುಟಿನ್ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಸಭೆಯಲ್ಲಿ ಡೆಮಾಕ್ರೆಟ್‍ಗಳು ಮತ್ತು ರಿಪಬ್ಲಿಕನ್ನರು ಜತೆಗೂಡಿ ನಿರ್ಧರಿಸಿದರು" ಎಂದು ಡೆಮಾಕ್ರೆಟ್ ಸೆನೆಟ್ ನಾಯಕ ಚಕ್ ಸ್ಚೂಮರ್ ಹೇಳಿದ್ದಾರೆ.