ಸಮಾಜವಾದಿ ಪಕ್ಷದ ಪರಿಷತ್ ಅಭ್ಯರ್ಥಿಯಾಗಿ ಡಾ. ಕಫೀಲ್ ಖಾನ್ ಅವರನ್ನು ಆಯ್ಕೆಮಾಡಿದ ಅಖಿಲೇಶ್ ಯಾದವ್

Update: 2022-03-16 12:10 GMT
Twitter/ @drkafeelkhan

ಲಕ್ನೋ : ಮುಂಬರುವ ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಗೋರಖಪುರ್ ಮೂಲದ ವೈದ್ಯ ಡಾ ಕಫೀಲ್ ಖಾನ್ ಅವರನ್ನು  ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಯ್ಕೆ ಮಾಡಿದ್ದಾರೆ.  ಗೋರಖಪುರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 2017ರಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ 63 ಮಕ್ಕಳ ಸಾವು ಪ್ರಕರಣದಲ್ಲಿ ಮಕ್ಕಳನ್ನು ವೀರೋಚಿತವಾಗಿ ರಕ್ಷಿಸಿದ್ದ ಕಫೀಲ್ ಖಾನ್ ಅವರ ಮೇಲೆಯೇ ಆರೋಪ ಹೊರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಖಾನ್ ಅವರನ್ನು ಕಳೆದ ವರ್ಷ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅವರನ್ನು ಗೋರಖಪುರ್-ದಿಯೋರ ಪ್ರಾಂತ್ಯದ ಪರಿಷತ್ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಗೋರಖಪುರದವರೇ ಆಗಿರುವುದರಿಂದ ಕಫೀಲ್ ಖಾನ್ ಅವರ ಅಭ್ಯರ್ಥಿತನ ಮಹತ್ವ ಪಡೆದಿದೆ.

ಕಫೀಲ್ ಖಾನ್ ಅವರು ಆಸ್ಪತ್ರೆ ದುರಂತದ ನಂತರ ಒಂಬತ್ತು ತಿಂಗಳು ಜೈಲಿನಲ್ಲಿರುವಂತಾಗಿತ್ತಲ್ಲದೆ ನಂತರ ಜಾಮೀನು ಅವರಿಗೆ ದೊರಕಿತ್ತು. ಸಮಿತಿಯೊಂದು ತನಿಖೆ ನಡೆಸಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತಾದರೂ ಇದರಿಂದ ಸಮಾಧಾನಗೊಳ್ಳದ ಉತ್ತರ ಪ್ರದೇಶ ಸರಕಾರ ಮತ್ತೊಂದು ಸಮಿತಿಯನ್ನು ತನಿಖೆಗಾಗಿ ನೇಮಿಸಿತ್ತು.

ರಾಜ್ಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಗಳಲ್ಲೂ ಭಾಗವಹಿಸಿದ್ದ ಡಾ ಕಫೀಲ್ ಖಾನ್ ಅವರು ಪ್ರಚೋದನಾತ್ಮಕ ಭಾಷಣ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದರಲ್ಲದೆ ರಾಷ್ಟ್ರೀಯ ಸುರಕ್ಷತಾ ಕಾಯಿದೆಯನ್ನೂ ಅವರ ವಿರುದ್ಧ ಹೇರಲಾಗಿತ್ತು. ಆದರೆ ಈ ಕಾಯಿದೆ ಹೇರಿಕೆಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು.

ತಮ್ಮನ್ನು ಸೇವೆಯಿಂದ ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನೂ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News