ಮಾ.15 ಇಸ್ಲಾಮೊಫೋಬಿಯಾದ ವಿರುದ್ಧ ಅಂತರರಾಷ್ಟ್ರೀಯ ದಿನ: ಒಐಸಿ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ‌

Update: 2022-03-16 16:53 GMT

ಹೊಸದಿಲ್ಲಿ, ಮಾ.16: ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಪರವಾಗಿ ಪಾಕಿಸ್ತಾನವು ಮಂಡಿಸಿದ್ದ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಗಳವಾರ ಒಮ್ಮತದಿಂದ ಅಂಗೀಕರಿಸಿದೆ. ನಿರ್ಣಯದಲ್ಲಿ ಮಾ.15ನ್ನು ಇಸ್ಲಾಮೊಫೋಬಿಯಾವನ್ನು ಎದುರಿಸಲು ಅಂತರರಾಷ್ಟ್ರೀಯ ದಿನವನ್ನಾಗಿ ಘೋಷಿಸಲಾಗಿದೆ.

ಒಐಸಿಯ 57 ಸದಸ್ಯ ರಾಷ್ಟ್ರಗಳು ಹಾಗೂ ಚೀನಾ ಮತ್ತು ರಶ್ಯ ಸೇರಿದಂತೆ ಇತರ ಎಂಟು ರಾಷ್ಟ್ರಗಳು ನಿರ್ಣಯವನ್ನು ಪ್ರಾಯೋಜಿಸಿದ್ದವು.
ಹಲವಾರು ಸದಸ್ಯ ರಾಷ್ಟ್ರಗಳು ನಿರ್ಣಯವನ್ನು ಶ್ಲಾಘಿಸಿದವಾದರೂ, ಭಾರತ, ಫ್ರಾನ್ಸ್ ಮತ್ತು ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಆಕ್ಷೇಪಗಳನ್ನು ವ್ಯಕ್ತಪಡಿಸಿದರು. ಧಾರ್ಮಿಕ ಅಸಹಿಷ್ಣುತೆಯು ವಿಶ್ವಾದ್ಯಂತ ಪ್ರಚಲಿತದಲ್ಲಿರುವಾಗ ನಿರ್ಣಯವು ಇಸ್ಲಾಮ್ನ್ನು ಮಾತ್ರ ಪ್ರತ್ಯೇಕಿಸಿದೆ ಮತ್ತು ಇತರರನ್ನು ಹೊರತುಪಡಿಸಿದೆ ಎಂದು ಅವರು ಹೇಳಿದರು.
ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿ ಟಿ.ಎಸ್.ಗುರುಮೂರ್ತಿ ಅವರು,ಇತರ ಧರ್ಮಗಳಲ್ಲಿ ಹಿಂದು ವಿರೋಧಿ ಫೋಬಿಯಾವನ್ನು ನಿರ್ಣಯವು ಒಳಗೊಂಡಿಲ್ಲ ಎಂದು ದೂರಿದರು.

ಈ ನಡುವೆ ಈ ಬೆಳವಣಿಗೆ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಜಾಗತಿಕ ಮುಸ್ಲಿಮ್ ಸಮುದಾಯವನ್ನು ಅಭಿನಂದಿಸಿದ್ದಾರೆ.
ವಿಶ್ವವು ಎದುರಿಸುತ್ತಿರುವ ಇಸ್ಲಾಮೊಫೋಬಿಯಾ, ಧಾರ್ಮಿಕ ಚಿಹ್ನೆಗಳು ಮತ್ತು ಆಚರಣೆಗಳಿಗೆ ಗೌರವ,ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮತ್ತು ತಾರತಮ್ಯಗಳನ್ನು ಮೊಟಕುಗೊಳಿಸುವ ಗಂಭೀರ ಸವಾಲನ್ನು ವಿಶ್ವಸಂಸ್ಥೆಯು ಕೊನೆಗೂ ಗುರುತಿಸಿದೆ ಎಂದು ಅವರು ಹೇಳಿದ್ದಾರೆ.

 ತನ್ನ ನಿಬಂಧನೆಗಳಡಿ ನಿರ್ಣಯವು ವ್ಯಕ್ತಿಗಳ ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಅವರ ವಿರುದ್ಧದ ಹಿಂಸಾಚಾರ ಕೃತ್ಯಗಳು ಮತ್ತು ಅವರ ಆರಾಧನಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳನ್ನು ಬಲವಾಗಿ ಖಂಡಿಸಿದೆ ಮತ್ತು ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಂ ಅವರು, ಇಸ್ಲಾಮೊಫೋಬಿಯಾ ವಾಸ್ತವವಾಗಿದೆ ಎಂದರು. ಈ ವಿದ್ಯಮಾನವು ಬೆಳೆಯುತ್ತಿದೆ ಎಂದು ಬೆಟ್ಟು ಮಾಡಿದ ಅವರು ಅದನ್ನು ಪರಿಹರಿಸುವ ಅಗತ್ಯವನ್ನು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News