ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಮಾಜಿ ರಕ್ಷಣಾ ಕಾರ್ಯದರ್ಶಿ ವಿರುದ್ಧ ಸಿಬಿಐಯಿಂದ ಆರೋಪ ಪಟ್ಟಿ ಸಲ್ಲಿಕೆ

Update: 2022-03-16 17:17 GMT

ಹೊಸದಿಲ್ಲಿ, ಮಾ. 16: ಬಹುಕೋಟಿ ಅಗಸ್ಟಾ ವೆಸ್ಟ್‌ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿ ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಹಾಗೂ ಏರ್ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪನೇಸರ್ ವಿರುದ್ಧ ಸಿಬಿಐ ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ.

ರಕ್ಷಣಾ ಸಚಿವಾಲಯ ಅನುಮತಿ ನೀಡಿದ ಬಳಿಕ ಶಶಿಕಾಂತ್ ಶರ್ಮಾ ಹಾಗೂ ಭಾರತೀಯ ವಾಯು ಪಡೆಯ ಇತರ ನಾಲ್ವರು ಹಿರಿಯ ಅಧಿಕಾರಿಗಳು ಆರೋಪಿಗಳು ಎಂದು ಹೆಸರಿಸಲಾದ 3,200 ಕೋಟಿ ರೂಪಾಯಿ ಹಗರಣದಲ್ಲಿ ಸಿಬಿಐ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ. ಶರ್ಮಾ ಅವರು 2003 ಹಾಗೂ 2007ರ ನಡುವೆ ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ (ವಾಯು ಪಡೆ)ಯಾಗಿದ್ದರು. ಅನಂತರ ಅವರು 2011ರಿಂದ 13ರ ವರೆಗೆ ರಕ್ಷಣಾ ಕಾರ್ಯದರ್ಶಿ, 2013ರಿಂದ 2017ರ ವರೆಗೆ ಲೆಕ್ಕ ಪರಿಶೋಧಕರಾಗಿದ್ದರು.
ಟೆಸ್ಟಿಂಗ್ ಪೈಲಟ್ನ ಉಪ ವರಿಷ್ಠ ಎಸ್.ಎ. ಕುಂಟೆ, ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಥಾಮಸ್ ಮ್ಯಾಥ್ಯೂ ಹಾಗೂ ಗ್ರೂಪ್ ಕ್ಯಾಪ್ಟನ್ ಎನ್. ಸಂತೋಷ್ ಕುಮಾರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಕೂಡ ಸಿಬಿಐ ಕೋರಿದೆ.

ರಾಷ್ಟ್ರಪತಿ, ಪ್ರಧಾನಿ ಹಾಗೂ ಇತರರು ಸೇರಿದಂತೆ ಉನ್ನತ ನಾಯಕರಿಗೆ 12 ವಿವಿಐಪಿ ಹೆಲಿಕಾಪ್ಟರ್ ಪೂರೈಸಲು ಅಗಸ್ಟಾ ವೆಸ್ಟ್ಲ್ಯಾಂಡ್ನೊಂದಿಗಿನ ಒಪ್ಪಂದದಲ್ಲಿ ಲಂಚ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಗಳು ಭಾರತೀಯ ವಾಯು ಪಡೆ ನಿಗದಿಪಡಿಸಿದ 6,000 ಮೀಟರ್ ಕಾರ್ಯಾಚರಣೆ ಮಿತಿ ಮಾನದಂಡವನ್ನು ಪೂರೈಸದ ಕಾರಣ ಅನರ್ಹವಾಗಿದ್ದರೂ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು.
2016ರಲ್ಲಿ ಸಿಬಿಐಯ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಮಾಜಿ ಏರ್ ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ ಹಾಗೂ ಇತರ 11 ಮಂದಿ ವಿರುದ್ಧ 2017 ಸೆಪ್ಟಂಬರ್ 1ರಂದು ಮೊದಲ ಆರೋಪ ಪಟ್ಟಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News