×
Ad

ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮನುವಾದದ ಪೋಷಣೆ

Update: 2022-03-18 00:05 IST

ಅಧಿಕಾರದಲ್ಲಿರುವವರು ಬಹಿರಂಗವಾಗಿಯೋ ಅಥವಾ ರಹಸ್ಯವಾಗಿಯೋ ತಾವು ಮನುವಿನ ಸಂವಿಧಾನವನ್ನು ಅನುಸರಿಸುತ್ತಿರುವ ಹಾಗೆ ವರ್ತಿಸುತ್ತಿದ್ದಾರೆ. ಈ ವ್ಯತಿರಿಕ್ತತೆಯು ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಕಟವಾಗುತ್ತಿದೆ. ವಾಸ್ತವಿಕವಾಗಿ ಹೇಳುವುದಾದರೆ ಈ ಸಂಸ್ಥೆಗಳ ಕಾರ್ಯವೈಖರಿಯು ಅಧಿಕಾರಶಾಹಿಯ ಮೂಲಕವೇ ಮನುವಾದಿ ಪರಿಣಾಮಗಳನ್ನು ಸೃಷ್ಟಿಸುತ್ತಿದೆ.


  ಭಾರತವು ದ್ವಂದ್ವ ಸ್ಥಿತಿಯಲ್ಲಿದೆ. ಒಂದೆಡೆ ನಮ್ಮ ಸಂವಿಧಾನವು ಸ್ವಾತಂತ್ರ, ಭ್ರಾತೃತ್ವ ಹಾಗೂ ಸಮಾನತೆಯ ವೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರೆ, ಇನ್ನೊಂದೆಡೆ ಬದ್ಧತೆಗಳೊಂದಿಗೆ ಬದುಕುತ್ತಿರುವಂತಹ ಅಧಿಕಾರದ ಹಲವಾರು ಹುದ್ದೆಗಳು ನಮ್ಮ ಸಾಂವಿಧಾನಿಕ ವೌಲ್ಯಗಳಿಗೆ ಸಂಪೂರ್ಣವಾಗಿ ಅತಾತ್ವಿಕವಾದುದಾಗಿವೆ. ಇನ್ನೂ ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ ಅಧಿಕಾರದಲ್ಲಿರುವವರು ಬಹಿರಂಗವಾಗಿಯೋ ಅಥವಾ ರಹಸ್ಯವಾಗಿಯೋ ತಾವು ಮನುವಿನ ಸಂವಿಧಾನವನ್ನು ಅನುಸರಿಸುತ್ತಿರುವ ಹಾಗೆ ವರ್ತಿಸುತ್ತಿದ್ದಾರೆ. ಈ ವ್ಯತಿರಿಕ್ತತೆಯು ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರಕಟವಾಗುತ್ತಿದೆ. ವಾಸ್ತವಿಕವಾಗಿ ಹೇಳುವುದಾದರೆ ಈ ಸಂಸ್ಥೆಗಳ ಕಾರ್ಯವೈಖರಿಯು ಅಧಿಕಾರಶಾಹಿಯ ಮೂಲಕವೇ ಮನುವಾದಿ ಪರಿಣಾಮಗಳನ್ನು ಸೃಷ್ಟಿಸುತ್ತಿದೆ.

 ಕೆಳಜಾತಿಗಳ ಸದಸ್ಯರು ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂದೇಹಾಸ್ಪದವಾದ ರೀತಿಯಲ್ಲಿ ‘ಕೆಳ ಜಾತಿ’ಗಳ ಸದಸ್ಯರ ಅನುಪಸ್ಥಿತಿ ಬಹುತೇಕವಾಗಿ ಕಂಡುಬರುತ್ತದೆ. ಆಡಳಿತಾತ್ಮಕ ಶ್ರೇಣಿಗಳಲ್ಲಿ ಈ ಅನುಪಸ್ಥಿತಿಯು ಸಂಪೂರ್ಣ ಮಟ್ಟದಲ್ಲಿ ಕಂಡುಬರುತ್ತದೆ. ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ನಾಯಕತ್ವದ ಹುದ್ದೆಗಳು ವಸ್ತುಶಃ ಬ್ರಾಹ್ಮಣರಿಗೆ ಮೀಸಲಾಗಿ ಬಿಟ್ಟಿದೆ. ಅರ್ಹತೆಯ ನೆಲೆಯಲ್ಲಿ ಈ ಮೀಸಲಾತಿಯನ್ನು ಈ ತನಕ ಯಾರೂ ಪ್ರಶ್ನಿಸಿಲ್ಲ. ಎದ್ದುಕಾಣುವಂತಹ ಈ ಅಸಮಾನತೆಗೆ ಕಟ್ಟಕಡೆಯ ಕಾರಣವಾದರೂ ಏನು?. ಐತಿಹಾಸಿಕವಾಗಿ, ಬಹುತೇಕ ಭಾರತೀಯರು ವಿದ್ಯುಕ್ತವಾದ ಶಿಕ್ಷಣದಿಂದ ವಂಚಿತರಾದವರಾಗಿದ್ದರು. ಸಹಜವಾಗಿಯೇ, ಐತಿಹಾಸಿಕವಾಗಿ ಅವಕಾಶವಂಚಿತ ಸಮುದಾಯಗಳು ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡಲು ಅರ್ಹತೆಯನ್ನು ಹೊಂದುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಆದರೆ ಈ ಐತಿಹಾಸಿಕ ಅಂಶಗಳು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಕೆಳ ಜಾತಿಗಳ’ ಹೆಚ್ಚಿನ ಅನುಪಸ್ಥಿತಿಗೆ ವಿವರಣೆಯನ್ನು ನೀಡುವುದೇ?. ಐಐಟಿ ಮದ್ರಾಸ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗಿ ನನ್ನ ವೈಯಕ್ತಿಕ ಅನುಭವದ ಆಧಾರದಲ್ಲಿ ಇದನ್ನು ನಾನು ಹೇಳುತ್ತಿದ್ದೇನೆ. ವಾಸ್ತವಿಕವಾಗಿ ಭಾರತದ ಪ್ರಧಾನ ಶೈಕ್ಷಣಿಕ ಸಂಸ್ಥೆಗಳಲ್ಲಿನ ಬೋಧಕವರ್ಗದ ಹುದ್ದೆಗಳಿಗೆ ಪ್ರತಿಭಾವಂತ ವ್ಯಕ್ತಿಗಳನ್ನು ಹೊರಗಿಡುವಲ್ಲಿ ಜಾತಿ ತಾರತಮ್ಯವು ಗಣನೀಯವಾದಂತಹ ಪಾತ್ರವನ್ನು ವಹಿಸುತ್ತಿದೆ.

ಬೋಧಕವರ್ಗದ ನೇಮಕಾತಿಯಲ್ಲಿ ಜಾತಿತಾರತಮ್ಯವನ್ನು ನಡೆಸಲು ಹಲವಾರು ದಾರಿಗಳಿವೆ. ಅದು ಎಷ್ಟರಮಟ್ಟಿಗಿದೆಯೆಂದರೆ ಉಪೇಕ್ಷಿತ ಸಮುದಾಯದ ಅರ್ಹ ಅಭ್ಯರ್ಥಿಯನ್ನು ಅನರ್ಹನೆಂದು ಪರಿಭಾವಿಸುವ ಸಾಧ್ಯತೆಯನ್ನು ಕೂಡಾ ಇಲ್ಲಿ ಅಲ್ಲಗಳೆಯಲಾಗುವುದಿಲ್ಲ. ಜಾಹೀರಾತಿನ ಹಂತದಲ್ಲೇ ಇದಕ್ಕೆ ಆಸ್ಪದ ಮಾಡಿಕೊಡಲಾಗುತ್ತದೆ. ನೂತನ ಬೋಧಕವರ್ಗದ ನೇಮಕಾತಿಯು ನಿರ್ದಿಷ್ಟ ಕೋರ್ಸ್‌ಗಳ ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಆಗಿರುವುದೇ ಇಲ್ಲ. ಹಲವಾರು ಅಪಾರದರ್ಶಕವಾದ ಕಾರಣಗಳನ್ನು ಆಧರಿಸಿ ಬೋಧಕ ವರ್ಗದ ಹುದ್ದೆಗಳ ನೇಮಕಾತಿಗೆ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ಹುದ್ದೆಗಳ ನೇಮಕಾತಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ತಮ್ಮ ಬಂಧು, ಬಾಂಧವರ ಅರ್ಹತೆಗೆ ತಕ್ಕುದಾದ ಜಾಹೀರಾತುಗಳನ್ನು ಪೋಣಿಸಲು ಶೈಕ್ಷಣಿಕ ಅಧಿಕಾರಿಗಳು ಸಿದ್ಧವಾಗಿರುತ್ತಾರೆ. ಒಂದು ವೇಳೆ ಬಹುತೇಕ ಅಧಿಕಾರಿಗಳು ಒಂದೇ ಜಾತಿಗೆ ಸೇರಿದವರಾಗಿದ್ದರೆ, ಉದ್ಯೋಗದ ನಿರೀಕ್ಷೆಯಲ್ಲಿರುವ ತಮ್ಮ ಜಾತಿ, ಸದಸ್ಯರಿಗೆ ಹೊಂದಿಕೊಳ್ಳುವಂತಹ ಜಾಹೀರಾತುಗಳನ್ನು ಸಿದ್ಧಪಡಿಸುತ್ತಾರೆ. ಐಐಟಿ ಮದ್ರಾಸ್‌ನಲ್ಲಿ ಎಲ್ಲಾ ನಿರ್ದೇಶಕರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಹುತೇಕ ಡೀನ್‌ಗಳು ಹಾಗೂ ಇಲಾಖಾ ಮುಖ್ಯಸ್ಥರು ಕೂಡಾ ಬ್ರಾಹ್ಮಣ ಸಮುದಾಯದವರಾಗಿದ್ದಾರೆ. ಬ್ರಾಹ್ಮಣರಲ್ಲಿನ ಜಾತಿ ಬಾಂಧವ್ಯ, ನೀತಿ ರೂಪಕ ಹುದ್ದೆಗಳಲ್ಲಿನ ಅವರ ಪ್ರಾಬಲ್ಯತೆ, ಇದರ ಜೊತೆಗೆ ಬೋಧಕವರ್ಗದ ನೇಮಕಾತಿ ಜಾಹೀರಾತುಗಳ ಮೂಲದ ಬಗ್ಗೆ ಅಪಾರದರ್ಶಕತೆ, ಹೀಗೆ ನೇಮಕಾತಿ ಪ್ರಕ್ರಿಯೆಯ ಪ್ರಾರಂಭಿಕ ಹಂತದಲ್ಲಿಯೇ ನಿರ್ಲಕ್ಷಿತ ಸಮುದಾಯಗಳ ಸದಸ್ಯರು ಹೊರತುಪಡಿಸುವಿಕೆಯನ್ನು ಎದುರಿಸುತ್ತಿರುತ್ತಾರೆ.

ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವಾಗಲೂ ಜಾತಿ ತಾರತಮ್ಯ ಕಂಡುಬರುತ್ತಿದೆ. ವಿವಿಧ ವಿಶ್ವವಿದ್ಯಾನಿಲಯಗಳ ವೈವಿಧ್ಯಮಯವಾದ ಶೈಕ್ಷಣಿಕ ವಿಭಾಗಗಳಿಂದ ಡಾಕ್ಟರೇಟ್ ಪದವಿಗಳನ್ನು ಹೊಂದಿರುವ ವ್ಯಕ್ತಿಗಳ ಬೋಧಕವರ್ಗದ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಾರೆ. ನಿರ್ದಿಷ್ಟವಾದ ಶೈಕ್ಷಣಿಕ ವಿಭಾಗದಲ್ಲಿಯೂ ಕೂಡಾ ಅರ್ಜಿದಾರರು ವಿಭಿನ್ನವಾದ ಉಪಕ್ಷೇತ್ರಗಳು ಹಾಗೂ ವೈವಿಧ್ಯಮಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ ಪ್ರಬಂಧಗಳನ್ನು ಅವರು ಅರ್ಜಿಗಳೊಂದಿಗೆ ಸಲ್ಲಿಸುತ್ತಾರೆ. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ ಆಯ್ಕೆಗಾರರು ಏಕರೂಪವಾದ ತೀರ್ಪನ್ನು ಅವಲಂಬಿಸಬೇಕಾಗುತ್ತದೆ. ಈ ತೀರ್ಪುಗಾರರು ಭಾರತೀಯ ಸಾಮಾಜಿಕ ಹಿನ್ನೆಲೆಗಳಿಂದಲೇ ಬಂದವರಾಗಿರುವುದರಿಂದ ಅವರು ತಮ್ಮೆಂದಿಗೆ ಜಾತಿ ಭಾವನೆಗಳನ್ನು ಒಂದಲ್ಲ ಒಂದು ರೂಪದಲ್ಲಿ ತಂದಿರುತ್ತಾರೆ. ಹೀಗಾಗಿ ಈ ತೀರ್ಪು ಶೋಷಿತ ಸಮುದಾಯಗಳ ಅಭ್ಯರ್ಥಿಗಳ ವಿರುದ್ಧ ಪಕ್ಷಪಾತ ಮಾಡದೆ ಇರುವ ಸಾಧ್ಯತೆ ತೀರಾ ವಿರಳವೆನ್ನಲಾಗಿದೆ.

ಬೋಧಕವರ್ಗದ ನೇಮಕಾತಿಗಾಗಿನ ಸಂದರ್ಶನವು ಜಾತಿ ತಾರತಮ್ಯ ನಡೆಯುವ ಮೂರನೇ ದಾರಿಯಾಗಿದೆ. ನೇಮಕಾತಿಗಾಗಿನ ಸಂದರ್ಶನ ನಡೆಸುವವರು ಸಂದರ್ಶದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ಆಯಾ ಜಾತಿ ಅಥವಾ ಸಮುದಾಯಗಳಿಗೆ ಅನುಗುಣವಾಗಿ ಸಂದರ್ಶಕರ ನಡವಳಿಕೆ ಹಾಗೂ ವರ್ತನೆಗಳು ಕೂಡಾ ಬದಲಾಗುತ್ತಿರುತ್ತವೆ, ಆ ಮೂಲಕ ಕೆಲವರಿಗೆ ಬೇಸ್ತುಬೀಳುವಂತಹ ಪ್ರಶ್ನೆಗಳನ್ನು ಕೇಳಿದರೆ, ಇನ್ನು ಕೆಲವರಿಗೆ ಹಿತವಾಗಿ ನಡೆದುಕೊಳ್ಳುತ್ತಾರೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರವಾಗಿದ್ದರೆ, ಕೆಲವರಿಗೆ ಅತ್ಯಂತ ಸಮರ್ಥರಾದ ಅಭ್ಯರ್ಥಿಗಳು ಕೂಡಾ ಉತ್ತರಿಸಲು ಸಾಧ್ಯವಿಲ್ಲದಂತಹ ಪ್ರಶ್ನೆಗಳನ್ನು ಕೇಳಿಬಿಡುತ್ತಾರೆ. ಇನ್ನು ಕೆಲವರಿಗೆ ಅತ್ಯಂತ ದಡ್ಡ ಅಭ್ಯರ್ಥಿ ಕೂಡಾ ಉತ್ತರಿಸಬಲ್ಲಂತಹ ಪ್ರಶ್ನೆಗಳನ್ನು ಕೂಡಾ ಕೇಳುತ್ತಾರೆ. ಸಹಜವಾಗಿಯೇ ಸಂದರ್ಶನದಲ್ಲಿ ಯಾರು ಆಯ್ಕೆಯಾಗುತ್ತಾರೆಂಬುದು, ಸಂದರ್ಶಕ ಸಮಿತಿಯಲ್ಲಿರುವವರು ಹಾಗೂ ಪ್ರಶ್ನೆಗಳನ್ನು ಕೇಳಿದವರನ್ನು ಆಧರಿಸಿರುತ್ತದೆ. ಈವರೆಗೆ ಇಂತಹ ಸಂದರ್ಶಕ ಸಮಿತಿಗಳಲ್ಲಿ ಕೆಳಜಾತಿಗಳ ಸದಸ್ಯರನ್ನು ಹೊರಗಿಡುತ್ತಲೇ ಬರಲಾಗುತ್ತಿದೆ. ಆ ಮೂಲಕ ಅವರನ್ನು ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ಬೋಧಕ ವರ್ಗದಿಂದ ವ್ಯವಸ್ಥಿತವಾಗಿ ಹೊರಗಿಡುತ್ತಲೇ ಬರಲಾಗಿದೆ.

ಭಾರತದ ಉನ್ನತ ಶಿಕ್ಷಣಸಂಸ್ಥೆಗಳಿಂದ ಕೆಳಜಾತಿಗಳವರನ್ನು ಹೊರಗಿಡುವುದು ಕೆಲವೇ ನೂರು ಉದ್ಯೋಗಿಗಳಿಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಕೋರ್ಸ್‌ಗಳು ಹಾಗೂ ಕಾರ್ಯಕ್ರಮಗಳ ಮೂಲಕ ಈ ಸಂಸ್ಥೆಗಳು ಸಾವಿರಾರು ಮನಸ್ಸುಗಳನ್ನು ರೂಪಿಸುತ್ತವೆ. ಸರಕಾರದ ನಿಯಂತ್ರಣ ಸಂಸ್ಥೆಗಳು ಹಾಗೂ ಖಾಸಗಿ ಕಾಲೇಜುಗಳ ಪ್ರಭಾವದ ಮೂಲಕ ಅವು ಸಂಶೋಧನೆ ಹಾಗೂ ಬೋಧನೆಯ ಕಾರ್ಯಸೂಚಿಯನ್ನು ರೂಪಿಸುತ್ತವೆ.

 ಕೆಳಜಾತಿಗಳಿಂದ ಬಂದಂತಹ ಬೋಧಕವರ್ಗದವರು ಬ್ರಾಹ್ಮಣ ಬೋಧಕವರ್ಗದವರಿಗಿಂತ ವಿಭಿನ್ನವಾದ ರೀತಿಯಲ್ಲಿ ಈ ಜಗತ್ತನ್ನು ನೋಡುವ ಸಾಧ್ಯತೆಯಿರುತ್ತದೆ. ಪ್ರತಿಷ್ಠಿತ ಅಕಾಡೆಮಿಕ್ ಸಂಸ್ಥೆಗಳ ಕೆಳಜಾತಿಗಳವರನ್ನು ಹೊರಗಿಡುವುದರಿಂದ ನಮ್ಮ ಗಣರಾಜ್ಯದ ಬಹುಸಂಖ್ಯಾಕ ಪೌರರ ಬದುಕಿನ ಮೇಲೆ ಪರಿಣಾಮಬೀರುವಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರಿಂದ ದೂರಸರಿದಂತಾಗುತ್ತದೆ. ಇದರಿಂದಾಗಿ ನಮ್ಮ ಸಾಂವಿಧಾನಿಕ ವೌಲ್ಯಗಳು ಮಾತ್ರವಲ್ಲದೆ ನಮ್ಮ ಜನತೆಯ ಬದುಕನ್ನು ಕೂಡಾ ಪಣಕ್ಕಿಟ್ಟಂತಾಗುತ್ತದೆ.

ಕೃಪೆ: thenewsminute.com

Writer - ವಿಪಿನ್ ಪಿ. ವೀಟಿಲ್

contributor

Editor - ವಿಪಿನ್ ಪಿ. ವೀಟಿಲ್

contributor

Similar News