ಪ್ರಜಾಪ್ರಭುತ್ವ: ವ್ಯವಸ್ಥೆ ಮತ್ತು ಮೌಲ್ಯಗಳು
1949, ನವೆಂಬರ್ 4ರಂದು ಸಂವಿಧಾನ ರಚನಾ ಸಭೆಯ ಮುಂದೆ, ಸಂವಿಧಾನದ ಕರಡು ಪ್ರತಿಯನ್ನು ಮಂಡಿಸಿದಾಗ ಅಂಬೇಡ್ಕರ್ ಮಾಡಿದ ಚಾರಿತ್ರಿಕವಾದ ಭಾಷಣ, ಅವರ ಬಗೆಗಿದ್ದ ಅನುಮಾನಗಳನ್ನು ಅಳಿಸಿಹಾಕುವುದಲ್ಲದೆ, ಈ ರಾಜಕೀಯ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿಸುವುದರಲ್ಲಿ ಅವರಿಗಿದ್ದ ಆತಂಕ, ಈ ರಾಷ್ಟ್ರದ ಬಗೆಗಿನ ಕಾಳಜಿಗಳನ್ನೂ ವ್ಯಕ್ತಪಡಿಸುತ್ತದೆ. ಅಧಿಕಾರ ರಾಜಕಾರಣ ಮುಂದೆ ಪಡೆದುಕೊಳ್ಳಬಹುದಾದ ಅಮಾನವೀಯ ಆಕೃತಿಯನ್ನು ಮನಗಂಡಿದ್ದ ಅವರ ಈ ಮಾತುಗಳು ದಾರ್ಶನಿಕವಾದವು. ಈ ಕಾರಣದಿಂದಲೇ ಇದು ಮುಖ್ಯವಾದವು. ಈ ಭಾಷಣದ ಒಂದು ಭಾಗ ಇಲ್ಲಿ ಕೊಡಲಾಗಿದೆ.
ರಾಜಕೀಯ ಪ್ರಜ್ಞೆ ಇದ್ದಂತಹ ಭಾರತೀಯರು ಸಹ ಒಂದು ಕಾಲಕ್ಕೆ ‘ಭಾರತೀಯರಾದ ನಾವು’ ಪದಸಮುಚ್ಚಯಕ್ಕೆ ತೀವ್ರವಾಗಿ ಆಕ್ಷೇಪವೆತ್ತಿದ್ದನ್ನು ನಾನು ಇನ್ನೂ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಅವರು ಆ ಪದಗಳ ಬದಲಾಗಿ ಭಾರತ ರಾಷ್ಟ್ರ ಎಂಬ ಪದಸಮುಚ್ಚಯ ಸೂಕ್ತ ಎಂದು ಹೇಳುತ್ತಿದ್ದರು. ನಾವು ಒಂದು ರಾಷ್ಟ್ರ ಎಂದು ಹೇಳುವಾಗ, ನಾವು ಒಂದು ಭ್ರಮಾಲೋಕವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಸಾವಿರಾರು ಜಾತಿಗಳ ಹೆಸರಿನಲ್ಲಿ ವಿಂಗಡವಾಗಿರುವ ಜನತೆಯನ್ನು ಒಂದು ರಾಷ್ಟ್ರ ಎಂದು ಕರೆಯಲು ಹೇಗೆ ಸಾಧ್ಯ? ನಾವು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಇನ್ನೂ ಒಂದು ರಾಷ್ಟ್ರ ಆಗಿಲ್ಲ ಎಂಬುದನ್ನು ಎಷ್ಟು ಬೇಗ ಅರ್ಥಮಾಡಿಕೊಳ್ಳುವೆವೋ ಅಷ್ಟು ಕ್ಷೇಮ. ಆಗ ಮಾತ್ರ ನಾವು ರಾಷ್ಟ್ರ ಆಗುವ ಅಗತ್ಯತೆಯನ್ನು ಮನಗಾಣುತ್ತೇವೆ ಮತ್ತು ಇಂತಹ ಒಂದು ಧ್ಯೇಯದ ಸಾಧನೆಗಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಗಂಭೀರವಾಗಿ ಯೋಚಿಸುತ್ತೇವೆ.
ಭಾರತವು 1950 ಜನವರಿ 26ನೇ ತಾರೀಕಿನಂದು ಸ್ವತಂತ್ರ ಗಣರಾಜ್ಯವಾಗಲಿದೆ. ಅಂದರೆ ಭಾರತ ದೇಶವು, ಭಾರತ ಜನತೆಯಿಂದ, ಜನರಿಗೋಸ್ಕರ, ಜನತಾ ಸರಕಾರವು ರೂಢಿಸಿಕೊಳ್ಳಲಿದೆ. ಪುನಃ ಈ ಸಂದರ್ಭದಲ್ಲೂ ಅದೇ ತಲ್ಲಣವು ನನ್ನನ್ನು ಕಾಡುತ್ತಿದೆ. ಸಂವಿಧಾನವು ತನ್ನ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಉಳಿಸಿಕೊಳ್ಳಲಿದೆಯೇ ಉಳಿಸಿಕೊಳ್ಳುತ್ತದೆಯೇ ಅಥವಾ ಮತ್ತೊಮ್ಮೆ ಕಳೆದುಕೊಳ್ಳುತ್ತದೆಯೇ? ಈ ಎರಡನೆಯ ವಿಚಾರ ಅಥವಾ ಚಿಂತೆಯು ನನಗೆ ಮೊದಲನೆಯ ಚಿಂತೆಯಷ್ಟೇ ನನ್ನನ್ನು ತಲ್ಲಣಗೊಳಿಸುತ್ತಿದೆ.
ಭಾರತಕ್ಕೆ ಪ್ರಜಾಪ್ರಭುತ್ವ ಎಂದರೆ ಏನು ಎಂದು ತಿಳಿದಿರಲಿಲ್ಲ ಎಂದು ಹೇಳಲು ಬರುವಂತಿಲ್ಲ. ಭಾರತವು ಒಂದಾನೊಂದು ಕಾಲದಲ್ಲಿ ಅನೇಕ ಗಣರಾಜ್ಯಗಳನ್ನು ಅನೇಕ ರಾಜಮಹಾರಾಜರನ್ನು ಹೊಂದಿತ್ತು. ಇವರ ಪೈಕಿ ಅನೇಕರು, ಚುನಾಯಿತರಾಗುವವರೂ ಇದ್ದರು ಅಥವಾ ಅವರ ಅಧಿಕಾರಗಳು ಸೀಮಿತವಾಗಿದ್ದವು. ಆದರೆ ಅವರು ಎಂದೂ ನಿರಂಕುಶ ಪ್ರಭುಗಳಾಗಿರಲಿಲ್ಲ. ಭಾರತಕ್ಕೆ ಸಂಸತ್ತುಗಳು ಅಥವಾ ಸಂಸತ್ತುಗಳಲ್ಲಿ ನಡೆಯುವ ವಿಧಿವಿಧಾನಗಳು ಗೊತ್ತಿರಲಿಲ್ಲ ಎಂದಲ್ಲ. ಬೌದ್ಧ ಭಿಕ್ಷುಗಳ ಸಂಘಗಳ ರಚನೆಯನ್ನು ಅಧ್ಯಯನ ಮಾಡಿದರೆ ನಮ್ಮಲ್ಲಿ ಆ ಸಂಘಗಳಿಗೆ ಪರ್ಯಾಯವಾಗಿ ಸಂಘಗಳು ಇವೆ ಮತ್ತು ಸಂಘಗಳು ಎಂದರೆ ಸಂಸತ್ತುಗಳೇ ಹೊರತು ಇನ್ನೇನೂ ಅಲ್ಲ ಎಂದು ವೇದ್ಯವಾಗುತ್ತದೆ. ಆಧುನಿಕ ಯುಗದಲ್ಲಿನ ಸಂಸತ್ತುಗಳು ಯಾವ ವಿಧಿವಿಧಾನಗಳನ್ನು ಅನುಸರಿಸಿ ರಚನೆಯಾಗುತ್ತದೆಯೋ, ಆ ಸಂಘಗಳೂ ಕೂಡ ಅದೇ ಬಗೆಯ ವಿಧಿವಿಧಾನಗಳನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತಿದ್ದವು. ಅವುಗಳಲ್ಲಿ ಆಸನಗಳ ವ್ಯವಸ್ಥೆ, ನಿರ್ಣಯಗಳನ್ನು ಕೈಗೊಳ್ಳಲು ಅನುಸರಿಸತಕ್ಕ ನಿಯಮಗಳ ಕೋರಂ, ಸಚೇತಕರ, ಮತಚೀಟಿಗಳ ಮೂಲಕ ಮತದಾನ, ಛೀಮಾರಿ ನಿರ್ಣಯ, ಕಾರ್ಯಕಲಾಪಗಳನ್ನು ನಿಯಂತ್ರಿಸುವ ವಿಧಾನ, ಪೂರ್ವನ್ಯಾಯ ಇತ್ಯಾದಿಗಳೆಲ್ಲ ಇರುವುದನ್ನು ಕಾಣಬಹುದು. ಬುದ್ಧನು ಸಂಘಗಳ ಸಭೆಗಳ ಕಾರ್ಯ ನಿರ್ವಹಣೆಯ ಸಲುವಾಗಿ ಅನುಸರಿಸಬೇಕಾದ ವಿಧಿವಿಧಾನಗಳನ್ನು ಸಮಕಾಲೀನ ರಾಜಕೀಯ ಸಭೆಗಳಿಂದ ಅಥವಾ ರಾಜಕೀಯ ಪಕ್ಷಗಳಿಂದ ತೆಗೆದುಕೊಂಡಿರಬೇಕೆಂದು ತೋರುತ್ತದೆ.
ಆ ಪ್ರಜಾಪ್ರಭುತ್ವ ಪದ್ಧತಿಯನ್ನು ಭಾರತವು ಕಳೆದುಕೊಂಡಿತು. ಅದನ್ನು ಎರಡನೇ ಬಾರಿಯೂ ಕಳೆದುಕೊಳ್ಳಲಿದೆಯೇ? ನನಗೆ ಗೊತ್ತಿಲ್ಲ. ಆದರೆ ಭಾರತದಂಥ ದೇಶದಲ್ಲಿ ಈ ಬಗೆಯ ಪ್ರಜಾಪ್ರಭುತ್ವ ಪದ್ಧತಿಯು ಇತ್ತೀಚಿನ ಬಹಳ ವರ್ಷಗಳಿಂದ ಬಳಕೆಯಲ್ಲಿ ಇಲ್ಲದಿದ್ದ ಕಾರಣ ಈ ಪ್ರಜಾಪ್ರಭುತ್ವ ವ್ಯವಸ್ಥೆ ಹೊಸತೆನಿಸಬಹುದು. ಹೀಗಾಗಿ, ಪ್ರಜಾಪ್ರಭುತ್ವವ ಮರೆಯಾಗಿ ಸರ್ವಾಧಿಕಾರವು ತಲೆದೋರುವ ಅಪಾಯ ಸಂಭವವುಂಟು, ಈ ಹೊಸದಾಗಿ ಜನ್ಮತಳೆದ ಪ್ರಜಾಪ್ರಭುತ್ವವು ತನ್ನ ಸ್ವರೂಪವನ್ನು ಸತ್ವವನ್ನು ಉಳಿಸಿಕೊಳ್ಳಲಾರದೆ ಹೋದರೆ ಅದರ ಸ್ಥಳದಲ್ಲಿ ಸರ್ವಾಧಿಕಾರತ್ವವು ಸ್ಥಾಪಿತವಾಗುವ ಸಂಭವವುಂಟು. ರಾಜಕೀಯ ಕ್ಷೇತ್ರದಲ್ಲಿ ಅಂತಹ ಭೂಕಂಪವೇನಾದರೂ ಉದ್ಭವಿಸಿದರೆ ನಾನು ಉಲ್ಲೇಖಿಸುತ್ತಿರುವ ಈ ಎರಡನೆಯ ಅನುಮಾನವು ಕೂಡ ವಾಸ್ತವ ಘಟನೆ ಆಗುವ ಸಾಧ್ಯತೆಯುಂಟು.
ಪ್ರಜಾಪ್ರಭುತ್ವವನ್ನು ಅದರ ಸ್ವರೂಪವನ್ನಷ್ಟೇ ಅಲ್ಲದೇ, ಅದರ ತತ್ವವನ್ನು, ಸತ್ವವನ್ನು ಉಳಿಸಿಕೊಳ್ಳಬೇಕಾದರೆ, ನಾವು ಏನು ಮಾಡಬೇಕು? ನನ್ನ ಅಭಿಪ್ರಾಯದ ಪ್ರಕಾರ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳನ್ನು ಈಡೇರಿಸಿಕೊಳ್ಳಲು ನಾವು ಸಾಂವಿಧಾನಿಕ ವಿಧಾನಗಳನ್ನೇ ಅನುಸರಿಸಬೇಕು. ಅಂದರೆ ರಕ್ತಪಾತದ ಮಾರ್ಗವನ್ನು ಸಂಪೂರ್ಣವಾಗಿ ತೊರೆಯಬೇಕು. ಅಂದರೆ ನಾವು ಕಾಯ್ದೆಭಂಗ, ಅಸಹಕಾರ, ಸತ್ಯಾಗ್ರಹ ಮುಂತಾದ ಮಾರ್ಗಗಳನ್ನು ಸಹ ಬಿಡಬೇಕಾಗುತ್ತದೆ. ಆರ್ಥಿಕ ಮತ್ತು ಸಾಮಾಜಿಕ ಆಶೋತ್ತರಗಳ ಈಡೇರಿಕೆಗೆ ಸಂವಿಧಾನ ಸಮ್ಮತವಾದ ಮಾರ್ಗಗಳನ್ನು ಅನುಸರಿಸುವುದು ಒಂದು ದೃಷ್ಟಿಯಲ್ಲಿ ಸಮರ್ಥನೀಯವಾಗಿತ್ತು. ಆದರೆ ಎಲ್ಲಿ ಸಂವಿಧಾನ ಸಮ್ಮತವಾದ ಮಾರ್ಗಗಳಿಗೆ ಅವಕಾಶ ಇರುವುದೋ ಅಲ್ಲಿ ಸಂವಿಧಾನ ಬಾಹಿರವಾದ ಮಾರ್ಗಗಳಿಗೆ ಸಮರ್ಥನೆ ಇರುವುದಿಲ್ಲ. ಆ ಮಾರ್ಗಗಳೆಲ್ಲ ಅರಾಜಕತೆಯ ನೀತಿಸೂತ್ರಗಳಾಗಿದ್ದು, ಅವುಗಳನ್ನು ತೊರೆದಷ್ಟು ಜನಸಮುದಾಯಕ್ಕೆ ಕ್ಷೇಮ, ರಾಷ್ಟ್ರಕ್ಕೆ ಕ್ಷೇಮ.
ಎರಡನೆಯದಾಗಿ ಜಾನ್ ಸ್ಟುವರ್ಟ್‌ಮಿಲ್ ಅವರು ಪ್ರಜಾಪ್ರಭುತ್ವವನ್ನು ಕುರಿತಂತೆ ನುಡಿದ ಎಚ್ಚರಿಕೆಯನ್ನು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಆಸಕ್ತರಾದವರೆಲ್ಲರೂ ತಪ್ಪದೆ ಗಮನಿಸಬೇಕು, ಅನುಸರಿಸಬೇಕು. ಮಿಲ್ ಹೇಳುತ್ತಾರೆ. ‘‘ಎಂತಹ ಮಹಾನ್ ವ್ಯಕ್ತಿಯೇ ಆಗಲಿ, ಅವನ ಪಾದದಡಿಯಲ್ಲಿ ಸ್ವಾತಂತ್ರ್ಯವನ್ನು ಎಸೆಯಬಾರದು. ನಮ್ಮ ಯಾವುದೇ ಸಂಸ್ಥೆಗಳು ಬುಡಮೇಲಾಗಲು ಅವಕಾಶವಾಗುವ ಹಾಗೆ ಅವನಿಗೆ ಅಧಿಕಾರಗಳನ್ನು ನೀಡಬಾರದು’’ ದೇಶಸೇವೆಯಲ್ಲಿ ತಮ್ಮ ಜೀವಮಾನವನ್ನೆಲ್ಲ ಧಾರೆಯೆರೆದು ಯಾರೇ ಮಹಾನ್ ವ್ಯಕ್ತಿಗೆ ಚಿರಋಣಿಯಾಗಿ ಇರುವುದರಲ್ಲಿ ತಪ್ಪೇನೂ ಇಲ್ಲ. ಋಣಿಗಳಾಗಿರುವುದಕ್ಕೂ ಕೆಲವು ಮಿತಿಗಳಿರುತ್ತವೆ. ರಾಷ್ಟ್ರಪ್ರೇಮಿ ಡೇನಿಯಲ್ ಒ ಕಾನೆಲ್ ಹೇಳಿದ ಹಾಗೆ, ಯಾವುದೇ ವ್ಯಕ್ತಿಯು ತನ್ನ ಗೌರವವನ್ನು ಕಳೆದುಕೊಂಡು ಇನ್ನೊಬ್ಬನಿಗೆ ಹೊಣೆಯಾಗಕೂಡದು. ಯಾವುದೇ ಮಹಿಳೆಯು ತನ್ನ ಪಾವಿತ್ರ್ಯವನ್ನು ಬಲಿಕೊಟ್ಟು ಕೃತಜ್ಞತೆಯನ್ನು ತೋರಿಸಬೇಕಾಗಿಲ್ಲ. ಅದೇ ರೀತಿ, ಯಾವುದೇ ರಾಷ್ಟ್ರ ತನ್ನ ಸ್ವಾತಂತ್ರವನ್ನು ಬಲಿಕೊಟ್ಟು ಕೃತಜ್ಞತೆಯನ್ನು ವ್ಯಕ್ತಗೊಳಿಸುವ ಅಗತ್ಯವಿಲ್ಲ. ಈ ಎಚ್ಚರಿಕೆಯ ಮಾತು, ಇತರ ದೇಶಗಳಿಗಿಂತ ಭಾರತಕ್ಕೆ ಅಧಿಕವಾಗಿ ಅನ್ವಯಿಸುತ್ತದೆ. ಭಾರತದ ರಾಜಕೀಯದಲ್ಲಿದ್ದ ವ್ಯಕ್ತಿಪೂಜೆಯು ವಿಪರೀತವಾಗಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಈ ವಿಚಾರದಲ್ಲಿ ಪ್ರಪಂಚದ ಯಾವ ರಾಷ್ಟ್ರವೂ ಭಾರತಕ್ಕೆ ಸರಿಸಾಟಿ ಆಗಲಾರದು. ರಾಜಕೀಯ ಕ್ಷೇತ್ರದಲ್ಲಿ ವ್ಯಕ್ತಿಪೂಜೆಯು ಖಂಡಿತವಾಗಿಯೂ ಅವನತಿಗೆ ಮತ ನಿರಂಕುಶ ಪ್ರಭುತ್ವದ ಉದಯಕ್ಕೆ ಕಾರಣವಾಗುತ್ತದೆ.
ಮೂರನೆಯದಾಗಿ ನಾವು ಮಾಡಬೇಕಾದ ಒಂದು ಕೆಲಸ ಉಂಟು. ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತೃಪ್ತರಾಗಿ ಉಳಿಯಬಾರದು. ನಮಗೆ ದೊರೆತ ರಾಜಕೀಯ ಪ್ರಜಾಪ್ರಭುತ್ವಕ್ಕೆ ಆಧಾರವಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ರೂಪಿಸಿಕೊಳ್ಳಬೇಕು. ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದೆ ಹೋದರೆ, ರಾಜಕೀಯ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗಾದರೆ, ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಏನು? ಅದೊಂದು ಜೀವನ ಪದ್ಧತಿ. ಸ್ವಾತಂತ್ರ್ಯ, ಸೋದರತೆ ಮತ್ತು ಸಮಾನತೆಗಳನ್ನು ಒಳಗೊಂಡ ಪದ್ಧತಿ. ಈ ಮೂರು ಅಂಶಗಳನ್ನು ಪ್ರತ್ಯೇಕವೆಂದು ಪರಿಗಣಿಸುವಂತಿಲ್ಲ. ಏಕೆಂದರೆ ಒಂದು ಇಲ್ಲದೆ ಇನ್ನೊಂದಕ್ಕೆ ಅಸ್ತಿತ್ವವಿಲ್ಲ. ಒಂದಕ್ಕೆ ಇನ್ನೊಂದು ಪೂರಕ. ಅವುಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸಿದರೆ ಪ್ರಜಾಪ್ರಭುತ್ವದ ಉದ್ದೇಶವೇ ವಿಫಲವಾಗುತ್ತದೆ. ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರ್ಪಡಿಸುವಂತಿಲ್ಲ. ಹಾಗೆಯೇ ಸ್ವಾತಂತ್ರ್ಯ ಮತ್ತು ಸಮಾನತೆ ಇವುಗಳನ್ನು ಸೋದರತೆಯಿಂದ ಬೇರ್ಪಡಿಸುವಂತಿಲ್ಲ. ಎಲ್ಲಿ ಸಮಾನತೆ ಇರುವುದಿಲ್ಲವೋ ಅಲ್ಲಿ ಸ್ವಾತಂತ್ರ್ಯ ಎನ್ನುವುದು ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತರು ನಡೆಸುವ ಅಧಿಕಾರ ಆಗುತ್ತದೆ. ಸ್ವ-ಸ್ವಾತಂತ್ರ ಇಲ್ಲದ ಸಮಾನತೆಯು ವ್ಯಕ್ತಿತ್ವವನ್ನು ನಾಶಗೊಳಿಸುತ್ತದೆ. ಸೋದರತೆ ಇಲ್ಲದೆ ಸಮಾನತೆ ಮತ್ತ್ತು ಸ್ವಾತಂತ್ರ್ಯ ಇವು ಸುಸೂತ್ರವಾಗಿ ನಡೆಯುವಂತಿಲ್ಲ. ಆಗ ಅವುಗಳನ್ನು ಅನುಷ್ಠಾನಗೊಳಿಸಲು ಬಲಪ್ರಯೋಗವು ಅಗತ್ಯವಾಗುತ್ತದೆ. ಭಾರತೀಯ ಸಮಾಜದಲ್ಲಿ ಇವೆರಡೂ ಅಂಶಗಳ ಸಂಪೂರ್ಣ ಅಭಾವವುಂಟು ಎಂಬ ವಾಸ್ತವವನ್ನು ಒಪ್ಪಿಕೊಳ್ಳದೆ ವಿಧಿಯಿಲ್ಲ. ಅಂತಹ ಎರಡು ಅಂಶಗಳಲ್ಲಿ ಸಮಾನತೆ ಒಂದು. ಸಾಮಾಜಿಕ ಸ್ತರದ ಮಟ್ಟಿಗೆ ಹೇಳಬೇಕಾದರೆ, ಭಾರತದಲ್ಲಿ ಸಾಮಾಜಿಕ ವ್ಯವಸ್ಥೆಯು ಅಸಮಾನತೆಗಳ ಶ್ರೇಣಿಗಳ ಮೇಲೆ ನೆಲೆ ನಿಂತಿದೆ. ಅಂದರೆ ಕೆಲವರು ಕೀಳು ಮತ್ತು ಕೆಲವರು ಮೇಲು ಎಂಬ ಅರ್ಥದಲ್ಲಿ. ಇನ್ನೂ ಆರ್ಥಿಕ ಸ್ತರದ ಮಟ್ಟಿಗೆ ಹೇಳಬೇಕಾದರೆ, ಸಮಾಜದಲ್ಲಿ ಹೆಚ್ಚಿನವರು ಕಡುಬಡವರು, ಕೆಲವರು ಮಾತ್ರ ಶ್ರೀಮಂತರು 1950ನೇ ಜನವರಿ 26ನೇ ತಾರೀಕು ನಾವು ಇಂತಹ ಪರಸ್ಪರ ವೈರುಧ್ಯಗಳಿರುವ ಸಮಾಜ ವ್ಯವಸ್ಥೆಯನ್ನು ಪ್ರವೇಶಿಸಲಿದ್ದೇವೆ. ರಾಜಕೀಯ ಜೀವನದಲ್ಲಿ ನಾವು ಸಮಾನತೆಯನ್ನು ಪಡೆದಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ನಾವು ಅಸಮಾನತೆಯನ್ನು ಪಡೆದಿದ್ದೇವೆ. ರಾಜಕೀಯದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಮತ್ತು ಒಂದು ಮತಕ್ಕೆ ಒಂದು ಮೌಲ್ಯ ಎಂಬ ತತ್ವವನ್ನು ಸ್ವೀಕರಿಸಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ನಿಮಿತ್ತ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮತ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸಿದ್ದೇವೆ. ನಮ್ಮ ಸಮಾಜದಲ್ಲಿ ಇಂತಹ ವೈರುಧ್ಯಮಯವಾದ ಜೀವನವನ್ನು ಎಲ್ಲಿಯವರೆಗೆ ಮುಂದುವರಿಸಿಕೊಂಡು ಹೋಗಲು ಸಾಧ್ಯ? ನಾವು ಈ ನಾಗರಿಕತೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋದರೆ ನಮ್ಮ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ಡುವ ಸಂಭವವುಂಟು. ಈ ವೈರುಧ್ಯವನ್ನು ಸಾಧ್ಯವಾದಷ್ಟು ತ್ವರೆಯಿಂದ ತೊಡೆದುಹಾಕಬೇಕು. ಇಲ್ಲದೆ ಹೋದರೆ ಅಸಮಾನತೆಯ ಪೀಡೆಯ ಅಡಿಯಲ್ಲಿ ನರಳುತ್ತಿರುವವರು ಈ ರಾಜಕೀಯ ಪ್ರಜಾಪ್ರಭುತ್ವವನ್ನು ಬೇರ್ಪಡಿಸಲು ಪ್ರಯತ್ನಿಸಿ ಈ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನು ಹಿಂದೆ ಮುಂದೆ ನೋಡದೆ ನೆಲಸಮಗೊಳಿಸುತ್ತಾರೆ.
ಭ್ರಾತೃತ್ವ ಅಥವಾ ಸೋದರತೆಯ ತತ್ವಕ್ಕೆ ಮನ್ನಣೆ ಇಲ್ಲದಿರುವುದು ಎರಡನೆಯ ಪ್ರಶ್ನೆ, ಸೋದರತೆ ಎಂದರೇನು? ಅಂದರೆ ಭಾರತೀಯರಾದ ನಾವೆಲ್ಲರೂ ಸೋದರರು ಎಂಬ ಭಾವನೆ. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ. ಸೋದರತೆಯ ತತ್ವವು ಸಾಮಾಜಿಕ ಜೀವನಕ್ಕೆ ಏಕತೆಯನ್ನು ಶಕ್ತಿಯನ್ನು ಒದಗಿಸಿಕೊಡುತ್ತದೆ. ಈ ಭಾವನೆಯನ್ನು ನೆಲೆಗೊಳಿಸಲು, ವಿಕಾಸಗೊಳಿಸಲು ಅನನ್ಯ ಪರಿಶ್ರಮ ಅಗತ್ಯ. ಅದು ಎಷ್ಟು ಕಷ್ಟ ಎಂದರೆ ಈ ವಿಚಾರಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಕುರಿತ ‘ಅಮೆರಿಕನ್ ಕಾಮನ್ ವೆಲ್ತ್’ ಎಂಬ ಪುಸ್ತಕದಲ್ಲಿ ಲೇಖಕ ಜೇಮ್ಸ್ ಬೈಟ್ ಒಂದು ಕಥೆ ಹೇಳುತ್ತಾರೆ. ನನಗೆ ನೆನಪಿರುವ ಹಾಗೆ ಆ ಕಥೆಯನ್ನು ಅವನ ಮಾತುಗಳಲ್ಲಿ ಹೇಳುತ್ತೇನೆ.
ಕೆಲವು ವರ್ಷಗಳ ಕೆಳಗೆ ಅಮೆರಿಕದ ಪ್ರೊಟೆಸ್ಟೆಂಟ್ ಎಪಿಸ್ಕೋಪಲ್ ಪಂಥದವರು, ತಮ್ಮ ತ್ರೈವಾರ್ಷಿಕ ಸಮ್ಮೇಳನದಲ್ಲಿ ತಮ್ಮ ಪ್ರಾರ್ಥನಾ ಪುಸ್ತಕವನ್ನು ಪರಿಷ್ಕರಿಸುವ ಕಾರ್ಯದಲ್ಲಿ ತೊಡಗಿದ್ದರು. ಇಡೀ ಸಮುದಾಯವು ಅಪೇಕ್ಷಿಸುವ ಒಂದು ಸಂಗ್ರಹರೂಪದ ಪ್ರಾರ್ಥನಾ ಪುಸ್ತಕವನ್ನು ರಚಿಸುವುದು ಅಗತ್ಯ ಎಂದು ಭಾವಿಸಿದರು. ನ್ಯೂ ಇಂಗ್ಲೆಂಡಿನ ಪಾದ್ರಿಯೊಬ್ಬರು ‘‘ಓ ಪ್ರಭುವೇ ನಮ್ಮ ರಾಷ್ಟ್ರದ ಮೇಲೆ ದಯತೋರು’’ ಎಂಬುದಾಗಿ ಪ್ರಾರಂಭವಾಗುವ ಪ್ರಾರ್ಥನೆಯನ್ನು ಸೂಚಿಸಿದರು. ಆ ಕೂಡಲೇ ಒಂದು ದಿನ ಮಧ್ಯಾಹ್ನ ಅದನ್ನು ಅಂಗೀಕರಿಸಲಾಯಿತು. ಆದರೆ ಅದನ್ನು ಪುನಃ ಪರಿಶೀಲಿಸುವ ಸಂದರ್ಭದಲ್ಲಿ ಭಕ್ತಾದಿಗಳ ಪೈಕಿ ಒಬ್ಬರು ‘ರಾಷ್ಟ್ರ’ ಪದಕ್ಕೆ ಆಕ್ಷೇಪವೆತ್ತಿದ್ದರು. ರಾಷ್ಟ್ರ ಎಂಬ ಪದ ಅವರ ಪ್ರಕಾರ ರಾಷ್ಟ್ರೀಯ ಏಕತೆಗೆ ನಿರ್ದಿಷ್ಟ ಮನ್ನಣೆ ಕೊಡುವ ಪದ. ಪರಿಣಾಮವಾಗಿ ರಾಷ್ಟ್ರ ಪದವನ್ನು ಆ ಪ್ರಾರ್ಥನೆಯಿಂದ ಕೈಬಿಡಲಾಯಿತು. ಆ ಪ್ರಾರ್ಥನೆಗೆ ಬದಲಾಗಿ ‘‘ಪ್ರಭುವೆ ನಮ್ಮ ಸಂಯುಕ್ತ ಸಂಸ್ಥಾನಗಳ ಮೇಲೆ ದಯೆತೋರು’’ ಎಂಬ ಪದಸಮುಚ್ಚಯಗಳನ್ನು ಒಳಗೊಂಡ ಪ್ರಾರ್ಥನೆಯನ್ನು ಒಪ್ಪಿಕೊಳ್ಳಲಾಯಿತು. ಈಗ ಅಮೆರಿಕದಲ್ಲಿ ಹೇಳಿದ ಈ ಪ್ರಾರ್ಥನೆಯ ಘಟನೆ ನಡೆದ ಸಂದರ್ಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಒಗ್ಗಟ್ಟು ಇರಲಿಲ್ಲ. ತಾವೆಲ್ಲರೂ ಒಂದೇ ಎಂಬ ಭಾವನೆ ವಿಕಾಸಗೊಂಡು, ನೆಲೆ ನಿಂತಿರಲಿಲ್ಲ. ಅಂದರೆ ತಾವು ಎಲ್ಲ ಅಮೆರಿಕದವರು ಸೇರಿ ಒಂದು ರಾಷ್ಟ್ರ ಎಂದು ಭಾವಿಸಿರಲಿಲ್ಲ. ಯುಎಸ್‌ಎಯ ಜನತೆಗೆ ರಾಷ್ಟ್ರೀಯ ಭಾವನೆಯನ್ನು ಮೈಗೂಡಿಸಿಕೊಳ್ಳಲು ಅಷ್ಟೊಂದು ಕಷ್ಟವಾಗಿರುವಾಗ ಭಾರತೀಯರಿಗೆ ಎಷ್ಟು ಕಷ್ಟವಾಗಲಿಕ್ಕಿಲ್ಲ ಎಂಬುದನ್ನು ಊಹಿಸಿಕೊಳ್ಳಿ.
ರಾಜಕೀಯ ಪ್ರಜ್ಞೆ ಇದ್ದಂತಹ ಭಾರತೀಯರು ಸಹ ಒಂದು ಕಾಲಕ್ಕೆ ‘ಭಾರತೀಯರಾದ ನಾವು’ ಪದಸಮುಚ್ಚಯಕ್ಕೆ ತೀವ್ರವಾಗಿ ಆಕ್ಷೇಪವೆತ್ತಿದ್ದನ್ನು ನಾನು ಇನ್ನೂ ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಅವರು ಆ ಪದಗಳ ಬದಲಾಗಿ ಭಾರತ ರಾಷ್ಟ್ರ ಎಂಬ ಪದಸಮುಚ್ಚಯ ಸೂಕ್ತ ಎಂದು ಹೇಳುತ್ತಿದ್ದರು. ನಾವು ಒಂದು ರಾಷ್ಟ್ರ ಎಂದು ಹೇಳುವಾಗ, ನಾವು ಒಂದು ಭ್ರಮಾಲೋಕವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಸಾವಿರಾರು ಜಾತಿಗಳ ಹೆಸರಿನಲ್ಲಿ ವಿಂಗಡವಾಗಿರುವ ಜನತೆಯನ್ನು ಒಂದು ರಾಷ್ಟ್ರ ಎಂದು ಕರೆಯಲು ಹೇಗೆ ಸಾಧ್ಯ? ನಾವು ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಇನ್ನೂ ಒಂದು ರಾಷ್ಟ್ರ ಆಗಿಲ್ಲ ಎಂಬುದನ್ನು ಎಷ್ಟು ಬೇಗ ಅರ್ಥಮಾಡಿಕೊಳ್ಳುವೆವೋ ಅಷ್ಟು ಕ್ಷೇಮ. ಆಗ ಮಾತ್ರ ನಾವು ರಾಷ್ಟ್ರ ಆಗುವ ಅಗತ್ಯತೆಯನ್ನು ಮನಗಾಣುತ್ತೇವೆ ಮತ್ತು ಇಂತಹ ಒಂದು ಧ್ಯೇಯದ ಸಾಧನೆಗಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಗಂಭೀರವಾಗಿ ಯೋಚಿಸುತ್ತೇವೆ. ಆ ಗುರಿಯನ್ನು ಈಡೇರಿಸುವುದು ಅಷ್ಟೊಂದು ಸುಲಭವಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಇರುವುದಕ್ಕಿಂತ ಅಧಿಕ ಜಾತಿಗಳು ನಮ್ಮ ಭಾರತ ದೇಶದಲ್ಲಿ ಇವೆ. ಆ ಅಸಂಖ್ಯ ಜಾತಿಗಳು ರಾಷ್ಟ್ರದ ಕಲ್ಪನೆಗೆ ವಿರೋಧವಾದವುಗಳು. ಮೊದಲನೆಯದಾಗಿ ಇವು ಸಾಮಾಜಿಕ ಜೀವನದಲ್ಲಿ ವಿಂಗಡಣೆಯನ್ನು, ಪ್ರತ್ಯೇಕತೆಯನ್ನು ಉಂಟುಮಾಡುತ್ತವೆ. ಇವು ರಾಷ್ಟ್ರ ವಿರೋಧಿಗಳೂ ಕೂಡ. ಕಾರಣವೆಂದರೆ ಜಾತಿ ಜಾತಿಗಳಲ್ಲಿ ಅಸೂಯೆ ಮತ್ತು ದ್ವೇಷ ಭಾವನೆಯನ್ನು ಉಂಟುಮಾಡುತ್ತದೆ. ನಾವು ನಿಜವಾಗಿಯೂ ಒಂದಾಗಬೇಕು ಎಂದು ಬಯಸುವುದಾದರೆ ಇಷ್ಟೆಲ್ಲ ತೊಂದರೆಗಳನ್ನು ನಿವಾರಿಸಬೇಕಾಗುತ್ತದೆ. ಕಾರಣವೆಂದರೆ, ರಾಷ್ಟ್ರ ಎನ್ನುವುದು ಅಸ್ತಿತ್ವದಲ್ಲಿ ಇದ್ದರೆ ಸೋದರತ್ವವು ವಾಸ್ತವವಾಗುತ್ತದೆ. ಸೋದರತ್ವ ಇಲ್ಲದೆ ಸಮಾನತೆಯೂ ಇಲ್ಲ, ಸ್ವಾತಂತ್ರವೂ ಇಲ್ಲ, ಅವು ಕೇವಲ ಭ್ರಮೆಯಾಗುತ್ತವೆ.
ನಮ್ಮ ಮುಂದಿರುವ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಇವು ಕೆಲವು ನನ್ನ ಚಿಂತನೆಗಳಾಗಿವೆ ಅಷ್ಟೆ. ಕೆಲವರಿಗೆ ಅವು ಸಂತೋಷವನ್ನು ಉಂಟುಮಾಡಿರಲಿಕ್ಕಿಲ್ಲ. ಆದರೆ ನಮ್ಮ ದೇಶದಲ್ಲಿ ರಾಜಕೀಯ ಅಧಿಕಾರವು ಕೆಲವೇ ಕೆಲವರ ಸ್ವತ್ತಾಗಿದ್ದು, ಇನ್ನುಳಿದ ಬಹುಸಂಖ್ಯಾತರು ಪಶುಗಳಂತೆ, ಪ್ರಾಣಿಗಳಂತೆ ಜೀವಿಸುತ್ತಿದ್ದಾರೆ ಎಂಬ ಸಂಗತಿಯನ್ನು ಒತ್ತಿ ಹೇಳಬೇಕಾಗಿಲ್ಲ. ಅಧಿಕಾರವು ಕೆಲವೇ ಕೆಲವರ ಸ್ವತ್ತಾಗಿರುವ ಕಾರಣ, ಬಹುಸಂಖ್ಯಾತರಿಗೆ ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಅವಕಾಶವೂ ಇಲ್ಲದಂತಾಗಿದೆ. ಮಾತ್ರವಲ್ಲದೆ, ಈ ಬಹುಸಂಖ್ಯಾತರು ಇವರ ಆಡಳಿತಕ್ಕೆ ಬೇಸತ್ತಿದ್ದಾರೆ, ರೋಸಿಹೋಗಿದ್ದಾರೆ. ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶವನ್ನು ಅರಸುವ ತವಕದಲ್ಲಿದ್ದಾರೆ. ದಲಿತರಲ್ಲಿ ಆತ್ಮಾವಲೋಕನದ ಸಲುವಾಗಿ ಪುಟಿಯುತ್ತಿರುವ ಉತ್ಕಟ ಉತ್ಸಾಹ ಸ್ಫೋಟಗೊಂಡು, ವರ್ಗ ಸಂಘರ್ಷದಲ್ಲಿ ಕೊನೆಯಾಗದ ಹಾಗೆ, ವರ್ಗ ಸಂಘರ್ಷವು ಉಲ್ಬಣಾವಸ್ಥೆಗೆ ಹೋಗದ ಹಾಗೆ ಎಚ್ಚರ ವಹಿಸಬೇಕಾದೀತು, ವರ್ಗ ಸಂಘರ್ಷವು ಉಲ್ಬಣಾವಸ್ಥೆಗೆ ತಲುಪಿದ್ದೇ ಆದರೆ ಅದು ಘೋರ ದುರಂತದ ಪ್ರಸಂಗ ಆಗುತ್ತದೆ. ಆಗ ರಾಷ್ಟ್ರವು ವಿನಾಶ ಆದಂತೆಯೇ. ಕಾರಣವೆಂದರೆ, ಅಬ್ರಹಾಂ ಲಿಂಕನ್ ಹೇಳುವ ಹಾಗೆ ಯಾವ ಮನೆಯು ಇಬ್ಭಾಗವಾಗುವುದೋ ಆ ಮನೆಯು ವಿನಾಶವಾದಂತೆಯೇ. ಆದ್ದರಿಂದ ಅವರ ಆತ್ಮಾವಲೋಕನದ ಅಭಿಲಾಷೆಗೆ ಆದಷ್ಟು ಬೇಗನೆ ಅವಕಾಶ ಮಾಡಿಕೊಡಬೇಕು. ಅಂದರೆ ಅಲ್ಪಸಂಖ್ಯಾತರಿಗೂ ಕ್ಷೇಮ, ದೇಶಕ್ಕೂ ಕ್ಷೇಮ, ದೇಶದ ಸ್ವಾತಂತ್ರ್ಯ, ರಕ್ಷಣೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯ ವಿಕಾಸಕ್ಕೆ ಕ್ಷೇಮ. ಇದಕ್ಕಾಗಿ ಸಕಲ ರಂಗಗಳಲ್ಲಿ ಸಮಾನತೆಯನ್ನು ಸೋದರತೆಯನ್ನು ಮತ್ತು ಸ್ವಾತಂತ್ರ್ಯವನ್ನು ನೆಲೆಗೊಳಿಸಲು, ವಿಕಾಸಗೊಳಿಸಲು ಸತತ ಪ್ರಯತ್ನ ಅಗತ್ಯ. ಆ ಕಾರಣವೇ ಅವುಗಳಿಗೆ ಒತ್ತುಕೊಟ್ಟು ನಾನು ಇಷ್ಟೆಲ್ಲ ಹೊತ್ತು ಮಾತನಾಡಿದ್ದು.
ನಾನು ಸದನದ ಸದಸ್ಯರಿಗೆ ನನ್ನ ಮಾತುಗಳಿಂದ ಬೇಸರ ಉಂಟುಮಾಡಲು ಇಷ್ಟಪಡುವುದಿಲ್ಲ. ಸ್ವಾತಂತ್ರ್ಯ ವಾಸ್ತವವಾಗಿ ಸಂತೋಷ ಉಂಟುಮಾಡುವ ಸಂಗತಿ. ಈ ಸ್ವಾತಂತ್ರವು ನಮ್ಮ ಮೇಲೆ ಹೊಣೆಗಾರಿಕೆಗಳ ಹೊರೆಯನ್ನೇ ಹೇರಿದೆ ಎಂಬುದನ್ನು ಮರೆಯದಿರೋಣ. ಈ ಹಿಂದೆ ಏನಾದರೂ ತಪ್ಪುಮಾಡಿದಾಗ, ಅಥವಾ ಏನಾದರೂ ತೊಂದರೆ ಉಂಟಾದಾಗ ಆಳರಸರಾದ ಬ್ರಿಟಿಷರ ಕಡೆಗೆ ಬೆರಳು ಮಾಡಿ ತೋರಿಸುವ ಅವಕಾಶವಿತ್ತು. ಈಗ ಸ್ವಾತಂತ್ರ್ಯ ಬಂದ ಮೇಲೆ ಆ ಅವಕಾಶ ತಪ್ಪಿಹೋಗಿದೆ. ಇನ್ನು ಮುಂದೆ ಏನಾದರೂ ತಪ್ಪಾದರೆ, ತೊಂದರೆಯುಂಟಾದಾಗ ನಮ್ಮನ್ನು ನಾವೇ ದೂಷಿಸಿಕೊಳ್ಳಬೇಕಾಗುತ್ತದೆ. ಬೇರೆ ಯಾರನ್ನೂ ಆಪಾದಿಸಿ ಹೇಳುವಂತಿಲ್ಲ. ಅನೇಕ ತಪ್ಪುಗಳು ಸಂಭವಿಸುವ ಅಪಾಯ ಉಂಟು. ಕಾರಣವೆಂದರೆ ಕಾಲವು ಅತಿ ವೇಗದಿಂದ ಓಡುತ್ತಿದೆ. ಎಲ್ಲೆಲ್ಲೂ ಜನಸಮುದಾಯಗಳು ಹೊಸ ಹೊಸ ಸಿದ್ಧಾಂತಗಳಿಗೆ, ಕ್ರಾಂತಿಕಾರಕ ವಿಚಾರಗಳಿಗೆ ಮಾರುಹೋಗುತ್ತಿವೆ. ಜನ�