ಜಾರ್ಖಂಡ್ ಗುಂಪು ಹತ್ಯೆ ನಿಗ್ರಹ ಮಸೂದೆಯನ್ನು ಸರಕಾರಕ್ಕೆ ವಾಪಸ್ ಕಳುಹಿಸಿದ ರಾಜ್ಯಪಾಲ
ಹೊಸದಿಲ್ಲಿ: ಮೂರು ತಿಂಗಳ ಹಿಂದೆ ರಾಜ್ಯ ಸರಕಾರ ಅಂಗೀಕರಿಸಿದ ಗುಂಪು ಹತ್ಯೆ ನಿಗ್ರಹ ಮಸೂದೆಯನ್ನು ಜಾರ್ಖಂಡ್ ರಾಜ್ಯಪಾಲ ರಮೇಶ್ ಬಾಯಿಸ್ ಸರಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 12ರಂದು ಜಾರ್ಖಂಡ್ ವಿಧಾನಸಭೆ ಗುಂಪು ಹಿಂಸೆ ಮತ್ತು ಗುಂಪು ಹತ್ಯೆ ನಿಗ್ರಹ ಮಸೂದೆ 2021ರಂದು ಅಂಗೀಕರಿಸಿತ್ತು. ಆದರೆ ಈ ಮಸೂದೆಯಲ್ಲಿ ಗುಂಪು ಪದದ ವ್ಯಾಖ್ಯಾನವನ್ನು ಮರುಪರಿಗಣಿಸುವಂತೆ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಸೂಚಿಸಿದ್ದಾರೆ. ಇಲ್ಲಿ ಗುಂಪು ಪದದ ವ್ಯಾಖ್ಯಾನವು ನಿಘಂಟಿನ ಅರ್ಥಕ್ಕೆ ಪೂರಕವಾಗಿಲ್ಲ ಎಂದು ಅವರು ಹೇಳಿದ್ದಾರೆನ್ನಲಾಗಿದೆ.
ಡಿಸೆಂಬರ್ ತಿಂಗಳಿನಲ್ಲಿ ಬಿಜೆಪಿ ಶಾಸಕ ಅಮಿತ್ ಕುಮಾರ್ ಮಂಡಲ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ ನಂತರ ಚರ್ಚೆ ವೇಳೆ ಬಿಜೆಪಿ ಅದನ್ನು ವಿರೋಧಿಸಿತ್ತಲ್ಲದೆ ಇದು ಓಲೈಕೆ ರಾಜಕಾರಣದ ಯತ್ನ ಎಂದು ಆರೋಪಿಸಿತ್ತು.
ಜಾರ್ಖಂಡ್ ಮುಖ್ಯಮಂತ್ರಿ ಪ್ರತಿಕ್ರಿಯಿಸಿ ಬಿಜೆಪಿಯು ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದಿದ್ದಾರೆ. "ಗುಂಪು ಹತ್ಯೆ ನಿಗ್ರಹ ಕಾಯಿದೆ ಬಗ್ಗೆ ಮಾತನಾಡಿದರೆ ಅದು ಮುಸ್ಲಿಮರ, ಆದಿವಾಸಿಗಳ ಅಥವಾ ಹಿಂದುಗಳ ಗುಂಪು ಹತ್ಯೆ ನಿಗ್ರಹ ಕಾಯಿದೆ ಆಗುತ್ತದೆಯೇ ಎಂದು ಹೇಳಿ, ಗುಂಪೆಂದರೆ ಅದು ಒಂದು ಗುಂಪು,'' ಎಂದಿದ್ದರು.
ಫೆಬ್ರವರಿ 11ರಂದು ಆದಿವಾಸಿ ಸಮುದಾಯಗಳ ಕೆಲ ಜನರು ಜನಜಾತಿ ಸುರಕ್ಷಾ ಮಂಚ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮಸೂದೆಯನ್ನು ಅಂಗೀಕರಿಸದಂತೆ ಕೋರಿದ್ದರಲ್ಲದೆ ಅದು ಅದಿವಾಸಿ ಸಮುದಾಯಗಳಿಗಿರುವ ವಿಶೇಷ ಕಾನೂನು ನಿಬಂಧನೆಗಳನ್ನು ಗೌಣವಾಗಿಸುತ್ತದೆ ಎಂದಿದ್ದರು.
ಈ ಮಸೂದೆಗೆ ರಾಜ್ಯಪಾಲರ ಅಂಕಿತ ದೊರಕಿದ್ದೇ ಆದಲ್ಲಿ ಪಶ್ಚಿಮ ಬಂಗಾಲ, ರಾಜಸ್ಥಾನ ಮತ್ತು ಮಣಿಪುರ ರಾಜ್ಯಗಳ ನಂತರ ಗುಂಪು ಹಿಂಸೆ ವಿರುದ್ಧ ಕಾನೂನು ಜಾರಿಗೊಳಿಸಿದ ನಾಲ್ಕನೇ ರಾಜ್ಯ ಜಾರ್ಖಂಡ್ ಆಗಲಿದೆ.