'ಕಾಶ್ಮೀರ ನರಮೇಧ'ವನ್ನು ಅಮೆರಿಕದ ರಾಜ್ಯ ಗುರುತಿಸಿ ಸರ್ಟಿಫಿಕೇಟ್ ನೀಡಿದೆ ಎಂದ ನಿರ್ದೇಶಕ: ವಾಸ್ತವಾಂಶವೇನು?

Update: 2022-03-18 10:06 GMT
ವಿವೇಕ್ ರಂಜನ್ ಅಗ್ನಿಹೋತ್ರಿ (PTI)

'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮೂಲಕ ಅಮೇರಿಕಾದ ರೋಡ್ ಐಲೆಂಡ್ ರಾಜ್ಯ 'ಕಾಶ್ಮೀರ ನರಮೇಧ'ವನ್ನು ಗುರುತಿಸಿ ಪ್ರಮಾಣ ಪತ್ರ ನೀಡಿದೆ ಎಂದು ತಪ್ಪಾಗಿ ಪ್ರತಿಪಾದಿಸಿದ್ದಾರೆ ಎಂದು boomlive.in ವರದಿ ಮಾಡಿದೆ.

ಡಿಸೆಂಬರ್ 9, 2021 ರಂದು ರೋಡ್ ಐಲೆಂಡ್ ಕಾಲೇಜಿನಲ್ಲಿ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕಾಗಿ ಮಾತ್ರ ಪ್ರಮಾಣ ಪತ್ರ ನೀಡಲಾಗಿದ್ದು, ಇದು ರೋಡ್ ಐಲೆಂಡ್ ರಾಜ್ಯ ಅಥವಾ ಅಲ್ಲಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಅನುಮೋದನೆಯಲ್ಲ ಎಂದು boomlive.in ವರದಿ ಹೇಳಿದೆ.  

ದಿ ಕಾಶ್ಮೀರ ಫೈಲ್ಸ್‌ನ ಪ್ರೀಮಿಯರ್ ಪ್ರದರ್ಶನದ ಸಲುವಾಗಿ ರೋಡ್ ಐಲೆಂಡ್ ರಾಜ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನೀಡಿದ ಪ್ರಮಾಣಪತ್ರದ ಚಿತ್ರವನ್ನು ಮಾರ್ಚ್ 14, 2022 ರಂದು ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿದ್ದು, ಅತ್ಯಂತ ಸಣ್ಣ ಚಿತ್ರ ʼದಿ ಕಾಶ್ಮೀರ ಫೈಲ್ಸ್‌ ನಿಂದಾಗಿ  ರೋಡ್ ಐಲೆಂಡ್‌ ರಾಜ್ಯ ʼಕಾಶ್ಮೀರ ನರಮೇಧ'ವನ್ನು ಅಧಿಕೃತವಾಗಿ ಗುರುತಿಸಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

“ದಯವಿಟ್ಟು ಇದನ್ನು ಓದಿ ಮತ್ತು ಕಿರುಕುಳ ನೀಡುವವರು ಯಾರು ಮತ್ತು ಯಾರಿಗೆ ಶಿಕ್ಷೆಯಾಗಬೇಕು ಎಂಬುದನ್ನು ನಿರ್ಧರಿಸಿ. ಇದು #ಹೊಸಭಾರತ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿರುವ 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರ ಸಾಕಷ್ಟು ವಿವಾದವನ್ನು ಸೃಷ್ಟಿಸಿದೆ. ಬಲಪಂಥೀಯರು ಮತ್ತು ಬಿಜೆಪಿ ಇದರ ಪರವಾಗಿ ಪ್ರಚಾರ ಮಾಡುತ್ತಿದ್ದು, ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಈ ಚಿತ್ರಕಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳಿಗೆ, ಪೊಲೀಸರಿಗೆ ಈ ಚಿತ್ರವನ್ನು ವೀಕ್ಷಿಸಲು ಸರ್ಕಾರವೇ ಪ್ರೋತ್ಸಾಹಿಸುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಈ ಚಿತ್ರವನ್ನು ಹೊಗಳಿದ್ದಾರೆ.

ಇದು, 90 ರ ದಶಕದಲ್ಲಿ ನಡೆದ ಕಾಶ್ಮೀರ ದಂಗೆ ಸಂದರ್ಭದಲ್ಲಿ ನಡೆದ ಕಾಶ್ಮೀರ ಪಂಡಿತರ ವಲಸೆ ಹಾಗೂ ಅವರ ಕೊಲೆಗಳನ್ನು ಸಂಬಂಧಿಸಿದ ಚಿತ್ರವಾಗಿದ್ದು, ಇದರಲ್ಲಿ ಇತಿಹಾಸವನ್ನು ವಿಜೃಂಭಿಸಿ ಚಿತ್ರಿಸಲಾಗಿದೆ, ವಾಸ್ತವ ಅಂಶಕ್ಕೆ ದೂರವಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅದಾಗ್ಯೂ, ಸಿನೆಮಾ ಯಶಸ್ಸು ಕಾಣುತ್ತಿದೆ ಎಂದು ವರದಿಯಾಗಿದೆ.

ನಿರ್ದೇಶಕರ ಪ್ರತಿಪಾದನೆಯ ಹಿಂದಿರುವ ಸತ್ಯಾಂಶವೇನು? 

ನಿರ್ದೇಶಕ ಅಗ್ನಿಹೋತ್ರಿ ಟ್ವೀಟ್ ಮಾಡಿದ ಪ್ರಮಾಣಪತ್ರದ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ನೀಡಿದ ಮನ್ನಣೆಯಾಗಿದೆಯೇ ಹೊರತು, ನಿರ್ದೇಶಕರು ಹೇಳಿಕೊಂಡಂತೆ ಕಾಶ್ಮೀರದಲ್ಲಿ ನಡೆದ ನರಮೇಧದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಥವಾ ಅದರ ಸದಸ್ಯರ ಅಧಿಕೃತ ಅಂಗೀಕಾರವಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ.

ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿರುವ ಕಾಶ್ಮೀರದ ಸ್ವತಂತ್ರ ಪತ್ರಕರ್ತ ರಕೀಬ್ ಹಮೀದ್ ನಾಯಕ್, ಅಗ್ನಿಹೋತ್ರಿ ಅವರ ಟ್ವೀಟ್ ನ ವಾಸ್ತವಾಂಶವನ್ನು ಬಹಿರಂಗಪಡಿಸಿದ್ದಾರೆ. 

ಹಮೀದ್ ನಾಯ್ಕ್ ಅವರು ಪ್ರತಿನಿಧಿ ಬ್ರಿಯಾನ್ ಕೆನಡಿ ಅವರನ್ನು ಸಂಪರ್ಕಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ, ಅವರು ಕೇವಲ ರೋಡ್ ಐಲ್ಯಾಂಡ್ ಕಾಲೇಜಿನಲ್ಲಿ ಚಲನಚಿತ್ರದ ಪ್ರಥಮ ಪ್ರದರ್ಶನವನ್ನು ಗುರುತಿಸಲು ನೀಡಿದ ಪ್ರಮಾಣ ಪತ್ರವಾಗಿದೆ ಹೊರತು "ಕಾಶ್ಮೀರದಲ್ಲಿ ಹಿಂದೂ ನರಮೇಧ"ದ ಅಧಿಕೃತಗೊಳಿಸಿರುವುದಲ್ಲ ಎಂದು ಹೇಳಿದ್ದಾರೆ. 

ಇದೇ ಆಧಾರದಲ್ಲಿ, BOOM.live ಹಮೀದ್ ನಾಯಕ್ ಅವರನ್ನು ಸಂಪರ್ಕಿಸಿದ್ದು, ಪ್ರತಿನಿಧಿ ಬ್ರಿಯಾನ್ ಕೆನಡಿಯಿಂದ ಸ್ವೀಕರಿಸಿದ ಇಮೇಲ್  ಅನ್ನು ಬೂಮ್‌ ಲೈವ್ ತಂಡಕ್ಕೆ‌ ರವಾನಿಸಿದ್ದಾರೆ. 

ಇಮೇಲ್ ಅನ್ನು ಬೂಮ್‌ ಲೈವ್ ಪರಿಶೀಲಿಸಿದ್ದು, ಮತ್ತು ಪ್ರಮಾಣಪತ್ರವು "ರೋಡ್ ಐಲೆಂಡ್ ರಾಜ್ಯ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಅನುಮೋದನೆಯಲ್ಲ" ಎಂದು ಎಂದು ಕಂಡುಕೊಂಡಿದೆ. 

ವಿವೇಕ್ ರಂಜನ್ ಅಗ್ನಿಹೋತ್ರ್ ಅವರ ಚಲನಚಿತ್ರ "ದಿ ಕಾಶ್ಮೀರ್ ಫೈಲ್ಸ್" ಅನ್ನು ರೋಡ್ ಐಲ್ಯಾಂಡ್ ಕಾಲೇಜ್ ಡಿಸೆಂಬರ್ 9, 2021 ರಂದು ಪ್ರೀಮಿಯರ್‌ (ಪ್ರಥಮ ಪ್ರದರ್ಶನ)  ಮಾಡಲು ಪ್ರಮಾಣ ಪತ್ರವನ್ನು ಪಡೆಯಲು ನ್ಯೂ ಇಂಗ್ಲೆಂಡ್‌ನ ಫೆಡರೇಟೆಡ್ ಇಂಡಿಯನ್ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿರುವ ಓರ್ವ ಭಾರತೀಯ ಮೂಲದ ಅಮೇರಿಕನ್‌ ವ್ಯಕ್ತಿ, 2021 ರ ಡಿಸೆಂಬರ್ ನಲ್ಲಿ  ನನ್ನನ್ನು ಸಂಪರ್ಕಿಸಿದರು." ಎಂದು ಪ್ರತಿನಿಧಿ ಬ್ರಿಯಾನ್ ಪ್ಯಾಟ್ರಿಕ್ ಕೆನಡಿ ಹಮೀದ್‌ ನಾಯಕ್‌ ಅವರಿಗೆ ತಿಳಿಸಿದ್ದಾರೆ.

“ಈ ಚಲನಚಿತ್ರದ ಪ್ರಥಮ ಪ್ರದರ್ಶನವನ್ನು ಸರಳವಾಗಿ ಗುರುತಿಸಲು ರಾಜ್ಯದಿಂದ ನೀಡಿದ ಪ್ರಮಾಣಪತ್ರವಾಗಿದೆ. ನಾನು ನಿರ್ದೇಶಕರನ್ನು ಭೇಟಿ ಮಾಡಿಲ್ಲ ಅಥವಾ ಚಲನಚಿತ್ರವನ್ನು ವೀಕ್ಷಿಸಲು ನಾನು ಹಾಜರಾಗಿಲ್ಲ, ಆದರೂ ಪ್ರದರ್ಶನಕ್ಕೆ ಮುಂಚಿತವಾಗಿ ನನಗೆ ಒದಗಿಸಲಾದ ಚಲನಚಿತ್ರದ ದೃಶ್ಯಗಳನ್ನು ನಾನು ನೋಡಿದ್ದೇನೆ. ರೋಡ್ ಐಲ್ಯಾಂಡ್ ಕಾಲೇಜಿನಲ್ಲಿ ನಡೆದ ಚಲನಚಿತ್ರದ ಪ್ರಥಮ ಪ್ರದರ್ಶನದಲ್ಲಿ 250 ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು” ಎಂದು ರೆಪ್. ಕೆನಡಿ ಬರೆದಿದ್ದಾರೆ.

"ಜೀವನದ ವಿಶೇಷ ಘಟನೆಗಾಗಿ ನಾವು ಜನರಿಗೆ ಒದಗಿಸುವ ಪ್ರಮಾಣಪತ್ರವಾಗಿದೆ ಇದು. ನಾವು ಅವುಗಳನ್ನು ಈಗಲ್ ಸ್ಕೌಟ್‌ನ ಶ್ರೇಣಿಯನ್ನು ಸಾಧಿಸುವ ಬಾಯ್ ಸ್ಕೌಟ್‌ಗಳಿಗೆ ನೀಡುತ್ತೇವೆ. ನಾವು ವಿಶೇಷ ಗೌರವ ಅಥವಾ ಕ್ರೀಡಾ ಸಾಧನೆಯನ್ನು ಸಾಧಿಸುವ ವಿದ್ಯಾರ್ಥಿಗಳಿಗೆ ನಾವು ಅವುಗಳನ್ನು ನೀಡುತ್ತೇವೆ. ನಾವು ಅವುಗಳನ್ನು ನಿವೃತ್ತರಿಗೆ ಮತ್ತು ವಿಶೇಷ ಜನ್ಮದಿನವನ್ನು ಹೊಂದಿರುವವಗೆ ಕೂಡಾ ನೀಡುತ್ತೇವೆ. ಈ ಪ್ರಮಾಣ ಪತ್ರವು ಕೇವಲ ವಿಶೇಷ ಕಾರ್ಯಕ್ರಮದ ಅಂಗೀಕಾರವಾಗಿದೆ. ಇದು ಸದನದ ಸದಸ್ಯರು ಅನುಮೋದಿಸಿದ ನಿರ್ಣಯದ ತೂಕವನ್ನು ಹೊಂದಿರುವುದಿಲ್ಲ. ಈ ಉಲ್ಲೇಖವನ್ನು ಚಲನಚಿತ್ರ ನಿರ್ದೇಶಕರಿಗೆ ಅವರ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕಾಗಿ ನೀಡಲಾಗಿದೆ. ಹೊರತು ಇದು ಹೆಚ್ಚೇನೂ ಅಲ್ಲ ಮತ್ತು ಇದು ರೋಡ್ ಐಲೆಂಡ್ ರಾಜ್ಯ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಅನುಮೋದನೆಯಲ್ಲ." - ರೆಪ್. ಕೆನಡಿ ಉತ್ತರಿಸಿದ್ದಾರೆ.

ಕೃಪೆ: BoomLive.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News