×
Ad

“ದಿ ಕಾಶ್ಮೀರ್ ಫೈಲ್ಸ್’’ಚಲನಚಿತ್ರದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಉಮರ್ ಅಬ್ದುಲ್ಲಾ

Update: 2022-03-18 15:27 IST

ಶ್ರೀನಗರ,ಮಾ.18: ‘ದಿ ಕಾಶ್ಮೀರ ಫೈಲ್ಸ್’ ಕಪೋಲಕಲ್ಪಿತ ಕಥೆಯಾಗಿದ್ದು, ಚಿತ್ರದಲ್ಲಿ ಹಲವಾರು ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ)ನ ಕಾರ್ಯಾಧ್ಯಕ್ಷ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಶುಕ್ರವಾರ ಟೀಕಿಸಿದರು.
 
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರ್ಯಾಲಿಯೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಿ ಕಾಶ್ಮೀರ ಫೈಲ್ಸ್ ಒಂದು ಸಾಕ್ಷಚಿತ್ರವೇ ಅಥವಾ ಚಲನಚಿತ್ರವೇ ಎನ್ನುವುದು ಸ್ಪಷ್ಟವಾಗಿಲ್ಲ. ಚಿತ್ರವು ಸತ್ಯಕಥೆಯನ್ನು ಆಧರಿಸಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅದರಲ್ಲಿ ಹಲವಾರು ಸುಳ್ಳುಗಳನ್ನು ಬಿಂಬಿಸಲಾಗಿದೆ. ಆ ಸಮಯದಲ್ಲಿ ಎನ್‌ಸಿ ಸರಕಾರವಿತ್ತು ಎಂದು ಹೇಳಿರುವುದು ಅತ್ಯಂತ ದೊಡ್ಡ ಸುಳ್ಳು ಆಗಿದೆ. 1990ರಲ್ಲಿ ಕಾಶ್ಮೀರಿ ಪಂಡಿತರು ನಿರ್ಗಮಿಸಿದಾಗ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವಿತ್ತು ಮತ್ತು ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರಕಾರವಿತ್ತು ಎಂದು ಹೇಳಿದರು.

ವಲಸೆ ಹೋದವರು ಅಥವಾ ಕೊಲ್ಲಲ್ಪಟ್ಟವರು ಕಾಶ್ಮೀರಿ ಪಂಡಿತರು ಮಾತ್ರವಲ್ಲ,ಮುಸ್ಲಿಮರು ಮತ್ತು ಸಿಕ್ಖರೂ ಕೊಲ್ಲಲ್ಪಟ್ಟಿದ್ದರು. ಅವರೂ ಕಾಶ್ಮೀರದಿಂದ ವಲಸೆ ಹೋಗುವಂತಾಗಿತ್ತು ಮತ್ತು ಅವರಿನ್ನೂ ವಾಪಸಾಗಿಲ್ಲ ಎಂದರು. ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಎನ್‌ಸಿ ಪ್ರಯತ್ನಿಸಿತ್ತು ಮತ್ತು ಆ ನಿಟ್ಟಿನಲ್ಲಿ ತನ್ನ ಕೆಲಸವನ್ನು ಅದು ಮುಂದುವರಿಸಲಿದೆ ಎಂದು ಅಬ್ದುಲ್ಲಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News