×
Ad

ಹಿಜಾಬ್‌ ಪ್ರಕರಣ: "ಸುಪ್ರೀಂಕೋರ್ಟ್‌ ನ 1954ರ ತೀರ್ಪನ್ನು ತಪ್ಪಾಗಿ ಅರ್ಥೈಸಿ ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದೆ"

Update: 2022-03-18 20:43 IST

ಹೊಸದಿಲ್ಲಿ: ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೇ ಎಂಬ ಪ್ರಶ್ನೆಗೆ ``ಅಗತ್ಯತೆಯ ಪರೀಕ್ಷೆ''(ಎಸೆನ್ಶಿಯಾಲಿಟಿ ಟೆಸ್ಟ್) ಎಂಬುದನ್ನು ಸೇರಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಸುಪ್ರೀಂ ಕೋರ್ಟ್‍ನ 1954 ಶಿರೂರು ಮಠ ತೀರ್ಪನ್ನು ತಪ್ಪಾಗಿ ಅರ್ಥೈಸಿ ಈ ಎಸೆನ್ಶಿಯಾಲಿಟಿ ಪರೀಕ್ಷೆಯನ್ನು ತಪ್ಪಾಗಿ ಅನ್ವಯಿಸಿದೆ ಎಂದು  ಸುಪ್ರೀಂ ಕೋರ್ಟಿನ ಹಿರಿಯ ವಕೀಲ  ದುಷ್ಯಂತ್ ದವೆ ಅವರು Thewire.in ನಲ್ಲಿ ಹಿರಿಯ ಪತ್ರಕರ್ತ ಕರಣ್‌ ಥಾಪರ್‌ ರೊಂದಿಗೆ ನಡೆಸಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷರೂ ಆಗಿರುವ ದವೆ ಅವರು ಮಾತನಾಡುತ್ತಾ "1954 ತೀರ್ಪು  ಧರ್ಮದ ವ್ಯಾಖ್ಯಾನವನ್ನು ವಿಶಾಲವಾಗಿ ಹಾಗೂ ಧರ್ಮದ ಅನುಯಾಯಿಗಳು ತಮ್ಮ ಧರ್ಮಕ್ಕೆ ಅಗತ್ಯವೆಂದು ನಂಬುವ ವಿವಿಧ ರೀತಿಯ ಆಹಾರ ಮತ್ತು ಉಡುಗೆತೊಡುಗೆ ಸೇರಿದಂತೆ ಎಲ್ಲಾ ವಿಚಾರಗಳನ್ನು ಒಳಗೊಂಡಿದೆ. ಹಿಜಾಬ್ ತಮ್ಮ ಧರ್ಮದ ಅವಿಭಾಜ್ಯ ಅಂಗವೆಂದು ಮುಸ್ಲಿಂ ಬಾಲಕಿಯರು ಹೇಳಿದರೆ ಅದು ಹಾಗೆಯೇ ಆಗಿದೆ.  1954ರ ತೀರ್ಪಿನಲ್ಲಿ ಧರ್ಮದ ವ್ಯಾಖ್ಯಾನವು ಹಿಜಾಬ್ ವಿಚಾರಕ್ಕೂ ಅನ್ವಯಿಸುತ್ತದೆ,'' ಎಂದು ಅವರು ಹೇಳಿದರು.

ಸಂದರ್ಶನದ ವೇಳೆ ದವೆ ಅವರು ಸುಪ್ರೀಂ ಕೋರ್ಟಿನ 1954 ಶಿರೂರು ಮಠ ತೀರ್ಪಿನಲ್ಲಿ ಧರ್ಮದ ಕುರಿತ ವ್ಯಾಖ್ಯಾನವನ್ನು ಓದಿ ಹೇಳಿದ್ದಾರೆ.

"ಧರ್ಮ ಎಂಬುದು ಕೇವಲ ಒಂದು ಸಿದ್ಧಾಂತ ಅಥವಾ ನಂಬಿಕೆ ಎಂದು  ಹೇಳುವುದು ಸರಿಯಾಗದು. ಒಂದು ಧರ್ಮವು ತನ್ನ ಅನುಯಾಯಿಗಳಿಗೆ ಪಾಲಿಸಲು ಒಂದು ನೈತಿಕ ನೀತಿಗಳ ಸಂಹಿತೆಯನ್ನಷ್ಟೇ ಅಲ್ಲ ಅದು ಧರ್ಮದ ಅವಿಭಾಜ್ಯ ಅಂಗಗಳೆಂದು ತಿಳಿಯಲಾದ ಕೆಲವೊಂದು ಆಚರಣೆಗಳು, ಸಮಾರಂಭಗಳು, ಆರಾಧನೆಯ ವಿಧಾನಗಳನ್ನೂ ತಿಳಿಸಬಹುದು ಮತ್ತು ಈ ಆಚರಣೆಗಳು ಆಹಾರ ಮತ್ತು ಉಡುಗೆತೊಡುಗೆಯ ವಿಚಾರಗಳಿಗೂ ವಿಸ್ತರಿಸಬಹುದು" ಎಂದು 1954 ತೀರ್ಪಿನ ಭಾಗವನ್ನು ದವೆ ಓದಿ ಹೇಳಿದ್ದಾರೆ.

1954 ತೀರ್ಪಿನಲ್ಲಿನ ಅಗತ್ಯತೆಯ ವಿಚಾರವನ್ನು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅನ್ವಯಿಸಿದ್ದರೆ ಅದು ಆ ತೀರ್ಪಿನಲ್ಲಿನ ಧರ್ಮದ ವ್ಯಾಖ್ಯಾನವನ್ನೂ ಅನ್ವಯಿಸಬೇಕಿತ್ತು. 1954 ತೀರ್ಪಿನ ನಂತರದ 70 ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಧರ್ಮದ ಕುರಿತಾದ ಅದರಲ್ಲಿನ ವ್ಯಾಖ್ಯಾನವನ್ನು ಸತತವಾಗಿ ಒಪ್ಪಿದೆ ಎಂದು ದವೆ ಹೇಳಿದ್ದಾರೆ.

ತಮ್ಮ ವಾದಕ್ಕೆ ಪೂರಕವಾಗಿ ಅವರು ಇನ್ನೊಂದು ಮಾತನ್ನೂ ಹೇಳಿದ್ದಾರೆ. "ಜಾತ್ಯತೀತ ಭಾರತದಲ್ಲಿ ಮುಖ್ಯಮಂತ್ರಿಯೊಬ್ಬರು (ಆದಿತ್ಯನಾಥ್) ತಮ್ಮ ಅಧಿಕೃತ  ಸರಕಾರಿ ಕಚೇರಿಯಲ್ಲಿ ಕೇಸರಿ ವಸ್ತ್ರ ಧರಿಸಬಹುದಾದರೆ, ಮುಸ್ಲಿಂ ಬಾಲಕಿಯರು ಶಾಲೆಗಳಿಗೇಕೆ ಹಿಜಾಬ್ ಧರಿಸಬಾರದು,'' ಎಂದು ದವೆ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.‌

ಸಂದರ್ಶನದ ಪೂರ್ಣ ವೀಡಿಯೋ ಇಲ್ಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News