ವಾರಾಂತ್ಯದಲ್ಲಿ ಹಲವಾರು ಜಿ23 ನಾಯಕರಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಸಾಧ್ಯತೆ

Update: 2022-03-18 16:57 GMT
PHOTO COURTESY:TWITTER

ಹೊಸದಿಲ್ಲಿ,ಮಾ.18: ‘ಜಿ23’ ಗುಂಪಿಗೆ ಸಾಂಸ್ಥಿಕ ರೂಪವನ್ನು ನೀಡುವ ಪ್ರಯತ್ನವಾಗಿ ಅದರ ನಾಯಕರು ಅಥವಾ ಕಾಂಗ್ರೆಸ್ ‘ಬಂಡುಕೋರರು’ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಜಿ23 ನಾಯಕರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಲು ಯೋಜಿಸಿದ್ದಾರೆ. ಗುಂಪಿನ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಅವರು ರಾಹುಲ್ ರನ್ನು ಮತ್ತು ಗುಲಾಂ ನಬಿ ಆಝಾದ್ ಅವರು ಸೋನಿಯಾರನ್ನು ಈಗಾಗಲೇ ಭೇಟಿಯಾಗಿದ್ದಾರೆ.

ಜಿ23 ಗುಂಪು ಮತ್ತು ಕಾಂಗ್ರೆಸ್ ನಾಯಕತ್ವ ಪರಸ್ಪರ ಮಾತುಕತೆಗಳನ್ನು ನಡೆಸಲು ಉತ್ಸುಕವಾಗಿವೆ. ಜಿ23 ನಾಯಕರು ಮತ್ತು ಸೋನಿಯಾ ಭೇಟಿ ವಾರಾಂತ್ಯದಲ್ಲಿ ನಡೆಯುವ ಸಾಧ್ಯತೆಯಿದೆ.

ಕಾಂಗ್ರೆಸ್ ನ ಎಲ್ಲ ಹಂತಗಳಲ್ಲಿ ಎಲ್ಲರನ್ನೂ ಒಳಗೊಂಡ ಮತ್ತು ಸಾಮೂಹಿಕ ನಾಯಕತ್ವಕ್ಕಾಗಿ ತಾವು ಒತ್ತಡವನ್ನು ಮುಂದುವರಿಸುತ್ತೇವೆ ಎಂದು ಜಿ23 ನಾಯಕರೋರ್ವರು ಹೇಳಿದರು. ಬುಧವಾರ ನಡೆದಿದ್ದ ಜಿ23 ಸಭೆಯಲ್ಲಿ ಈ ಬೇಡಿಕೆಯು ಪ್ರಸ್ತಾವಗೊಂಡಿತ್ತು. ಸಮಾನಮನಸ್ಕ ಶಕ್ತಿಗಳೊಂದಿಗೆ ಮಾತುಕತೆ ನಡೆಸುವಂತೆಯೂ ಗುಂಪು ಪಕ್ಷದ ನಾಯಕತ್ವಕ್ಕೆ ಸೂಚಿಸಿದೆ.
 
ಶುಕ್ರವಾರ ಬಂಡಾಯ ಗುಂಪಿನ ವಿರುದ್ಧ ದಾಳಿ ನಡೆಸಿದ ಮಾಜಿ ಜಿ23 ನಾಯಕ ಎಂ.ವೀರಪ್ಪ ಮೊಯ್ಲಿಯವರು,‘ನಾವು ಅಧಿಕಾರದಲ್ಲಿ ಇಲ್ಲ ಎಂಬ ಕಾರಣವೊಂದಕ್ಕೇ ಕಾಂಗ್ರೆಸ್ ನಾಯಕರು ಅಥವಾ ಕಾರ್ಯಕರ್ತರು ಆತಂಕ ಪಟ್ಟುಕೊಳ್ಳಬೇಕಿಲ್ಲ. ಬಿಜೆಪಿ ಮತ್ತು ಇತರ ಪಕ್ಷಗಳು ಮಧ್ಯಂತರ ಪ್ರಯಾಣಿಕರಿದ್ದಂತೆ...ಅವರು ಬರುತ್ತಾರೆ ಮತ್ತು ಹೋಗುತ್ತಾರೆ, ಇಲ್ಲಿ ಉಳಿದುಕೊಳ್ಳುವುದು ಕಾಂಗ್ರೆಸ್ ಮಾತ್ರ. ದೀನದಲಿತರಿಗೆ ನಾವು ಬದ್ಧರಾಗಿರಬೇಕು ಮತ್ತು ಭರವಸೆಯನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ’ ಎಂದರು.

ಸೋನಿಯಾ ಗಾಂಧಿಯವರು ಪಕ್ಷದಲ್ಲಿ ಸುಧಾರಣೆಗಳನ್ನು ಬಯಸುತ್ತಿದ್ದಾರೆ,ಆದರೆ ಅವರ ಸುತ್ತ ಇರುವವರು ಅದನ್ನು ಬುಡಮೇಲುಗೊಳಿಸಿದ್ದಾರೆ. ಜಿ23 ನಾಯಕರು ಹಿರಿಯ ನಾಯಕಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ. ಬಿಜೆಪಿ ಶಾಶ್ವತ ಪಕ್ಷವಾಗಲು ಸಾಧ್ಯವಿಲ್ಲ, ಮೋದಿ ನಂತರ ರಾಜಕೀಯದ ಪ್ರಕ್ಷುಬ್ಧತೆಯನ್ನು ತಡೆದುಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ ಎಂದೂ ಮೊಯ್ಲಿ ಹೇಳಿದರು.

ಐವರು ಮಾಜಿ ಮುಖ್ಯಮಂತ್ರಿಗಳು ಮತ್ತು ಕನಿಷ್ಠ 8-10 ಮಾಜಿ ಕೇಂದ್ರ ಸಚಿವರು ಸೇರಿದ್ದರು. ಅವರೆಲ್ಲ ಈಗ ಒಂದಾಗುತ್ತಿದ್ದಾರೆ, ಜಿ23ರಲ್ಲಿರುವ ಪ್ರತಿಯೊಬ್ಬರೂ ಪಕ್ಷವನ್ನು ಬಲಗೊಳಿಸಲು ಬಯಸಿದ್ದಾರೆ,ಆದರೆ ಯಾರೂ ಕೇಳಲು ಬಯಸುತ್ತಿಲ್ಲ ಎನ್ನುವುದು ಸಮಸ್ಯೆಯಾಗಿದೆ ಎಂದು ಬುಧವಾರ ಆಝಾದ್ ನಿವಾಸದಲ್ಲಿ ನಡೆದಿದ್ದ ಜಿ23 ಸಭೆಯ ಬಳಿಕ ನಾಯಕರೋರ್ವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News