×
Ad

ಮುದ್ರಣ ಕಾಗದ ಕೊರತೆ: ಶ್ರೀಲಂಕಾದ ಶಾಲೆಗಳ ವಾರ್ಷಿಕ ಪರೀಕ್ಷೆ ಅನಿರ್ದಿಷ್ಟ ಮುಂದೂಡಿಕೆ

Update: 2022-03-19 17:37 IST
ಸಾಂದರ್ಭಿಕ ಚಿತ್ರ (PTI)

ಕೊಲಂಬೋ: ಮುದ್ರಣ ಕಾಗದದ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಶ್ರೀಲಂಕಾ ಸರಕಾರವು ದೇಶಾದ್ಯಂತ ಶಾಲಾ ವಾರ್ಷಿಕ ಪರೀಕ್ಷೆಗಳನ್ನು ಅನಿರ್ದಿಷ್ಟ ಮುಂದೂಡಿದೆ. ಮುದ್ರಣ ಕಾಗದಗಳನ್ನು ಆಮದುಗೊಳಿಸಲು ದೇಶ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿರುವುದರಿಂದ ಇಂತಹ ಒಂದು ಕ್ರಮ ಅಲ್ಲಿನ ಸರಕಾರಕ್ಕೆ ಅನಿವಾರ್ಯವಾಯಿತು ಎಂದು ವರದಿಯಾಗಿದೆ.

ಸೋಮವಾರದಿಂದ ಆರಂಭಗೊಳ್ಳಬೇಕಿದ್ದ ಪರೀಕ್ಷೆಗಳನ್ನು ಅನಿರ್ದಿಷ್ಟ ಮುಂದೂಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಲಂಕಾಗೆ 1948ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಈಗ ಆ ದೇಶ ತೀವ್ರ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದೆ.

ಶಾಲಾ ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಅಗತ್ಯವಿರುವ ಕಾಗದ ಮತ್ತು ಶಾಯಿಯನ್ನು ಆಮದುಗೊಳಿಸಲು ಪ್ರಿಂಟಿಂಗ್ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಪರೀಕ್ಷೆಯನ್ನು ಮುಂದೂಡಿರುವುದರಿಂದ ದೇಶದ ಸುಮಾರು 45 ಲಕ್ಷ ವಿದ್ಯಾರ್ಥಿಗಳು ಬಾಧಿತರಾಗಲಿದ್ದಾರೆ.

ದೇಶದ ತೀವ್ರ ಆರ್ಥಿಕ ಸಮಸ್ಯೆಯಿಂದಾಗಿ ವಿದೇಶಿ ವಿನಿಮಯ ಮೀಸಲು ಕೊರತೆ ಎದುರಾಗಿರುವುದರಿಂದ ಆಮದು ಸಾಧ್ಯವಾಗುತ್ತಿಲ್ಲವಾಗಿದ್ದು ದೇಶ ಆಹಾರ, ಇಂಧನ ಮತ್ತು ಔಷಧಿಗಳ ಕೊರತೆಯನ್ನೂ ಎದುರಿಸುವಂತಾಗಿದೆ.

ದೇಶದ ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುವಂತೆ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರ ಬೇಡಿಕೆಯನ್ನು ಪರಿಗಣಿಸುವುದಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಹೇಳಿದೆ.

ಕೊಲಂಬೋದ 6.9 ಬಿಲಿಯನ್ ಡಾಲರ್ ಸಾಲವನ್ನು ಈ ವರ್ಷ ತೀರಿಸಬೇಕಿದ್ದರೂ ದೇಶದ ಕರೆನ್ಸಿ ಮೀಸಲು ಫೆಬ್ರವರಿ ಅಂತ್ಯದ ವೇಳೆಗೆ ಸುಮಾರು 2.3 ಬಿಲಿಯನ್‍ನಷ್ಟಿದೆ.

ದೇಶದ ಅಗತ್ಯ ವಸ್ತುಗಳ ಮಳಿಗೆಗಳೆದುರು ದಿನಸಿ ವಸ್ತುಗಳು ಮತ್ತು ಖಾದ್ಯ ತೈಲ ಖರೀದಿಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿದ್ದು, ವಿದ್ಯುತ್ ಕಡಿತ, ಹಾಲಿನ ಪುಡಿ, ಸಕ್ಕರೆ, ಧಾನ್ಯ ಮತ್ತು ಅಕ್ಕಿ ರೇಷನಿಂಗ್ ಕುರಿತು ಸರಕಾರ ಚಿಂತಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News